ಹುಬ್ಬಳ್ಳಿ-ಧಾರವಾಡ ಸುದ್ದಿ
ಬದುಕಿಗೆ ಹೊಸ ಅರ್ಥ ನೀಡುವ ಯುಗಾದಿ

ಬದುಕಿಗೆ ಹೊಸ ಅರ್ಥ ನೀಡುವ ಯುಗಾದಿ

‘ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ? ಮೋಡ ಕಟ್ಟೀತು ಹೇಗೆ?
ಹನಿಯೊಡೆದು ಕೆಳಗಿಳಿದು ನೆಲಕ್ಕೆ ಹಸಿರು ಮೂಡೀತು ಹೇಗೆ?’
* ಜಿಎಸ್ ಶಿವರುದ್ರಪ್ಪ

ಹೌದು ಇದು ಸತ್ಯ. ಪ್ರೀತಿಯೇ ಪ್ರಕೃತಿಯ ಮೊದಲ ಮಂತ್ರ. ಎಲ್ಲ ನನ್ನ ಹೊಗಳಲಿ ಎಂದು ಕೆಲಸ ಮಾಡದೆ ನನ್ನ ಕೆಲಸ ನನಗೆ ಎಂದು ಕರ್ತವ್ಯ ಭರಿತವಾಗಿ ಕೆಲಸವನ್ನು ಮಾಡುತ್ತದೆ. ಅದೇ ರೀತಿ ಯುಗಾದಿಯೆಂದರೆ, ಸೋಲು- ಅವಮಾನ ಕೊಡುವ ನೋವನ್ನು ಗೆಲ್ಲುವ ಸಂಕಲ್ಪ ಹೊಸವರ್ಷಕ್ಕೆ ಆಗಬೇಕು. ಅಲ್ಲಿ ಹೊಸಬೆಳಕಿನ ಉತ್ಸಾಹದಿ ಹೊಸ ಪರಿಯನ್ನು ಆರಂಭಿಸುವ ಪರ್ವಕಾಲವಾಗಬೇಕು.

ಅದನ್ನೇ ಕುವೆಂಪು-“ಕಳಚಲಿ, ಬೀಳಲಿ ಬಾಳಿನ ಹಳೆ ಪೊರೆ,
ನವ ಸಂವತ್ಸರವ ಕೂಗಿ ಕರೆ” ಎಂದು ಹೇಳುತ್ತಾರೆ.

ಬದಲಾವಣೆ ಜಗದ ನಿಯಮ, ಬದುಕು ನಿಂತ ನೀರಾಗದೆ, ಹೊಸತನವನ್ನು ಸಂಭ್ರಮದಿಂದ ಸ್ವಾಗತಿಸಿ, ನಮಗೆ ಬೇಕಾದ ರೀತಿಯಲ್ಲಿ ಅಪ್ಪಿಕೊಳ್ಳುವ ಬಗೆ. ಒಂದೇ ರೀತಿಯಲ್ಲಿ ಬದುಕು ನಡೆದರೆ ಅದು ಏಕತಾನತೆಯಲ್ಲಿ ಯಾವುದೆಂದು ಅಭಿವೃದ್ಧಿ ಕಾಣದೆ ನೀರಸವಾಗುತ್ತದೆ. ಅದೆಲ್ಲವನ್ನು ಒಮ್ಮೆ ಕೊಡವಿ ಒಗೆದು ಬಾಳ ಬುತ್ತಿಯಲಿ ಹೊಸ ಸ್ವಾದವನ್ನುಸವಿಯುವ ಪರಿ ನಮ್ಮದಾಗಬೇಕಿದೆ.

ಅದಕ್ಕೆ ಅಲ್ಲಮ ಪ್ರಭುಗಳು ತಮ್ಮ ವಚನದಲ್ಲಿ ಸುಂದರವಾಗಿ ಹೇಳುತ್ತಾರೆ.” ಮೇರು ಗಿರಿಗಳೆಲ್ಲ ಪ್ರಮಥರೊಡವೆ,ರಜತಗಿರಿ ಗಳೆಲ್ಲವೂ ಪುರಾತನರೊಡವೆ, ಅವೇ ಚತುರ್ದಶ ಭುವನವೆಲ್ಲವು ಲಿಂಗದೊಡವೆ.ಪೃಥ್ವಿ ಎಂಬುದು ಕರ್ತಾರನ ಕಮ್ಮಟ,ಅಚ್ಚಿನ ಮೊಳೆ,ಬಾಣಸದ ಮನೆ,ತನು-ಮನ-ಧನಂಗಳೆಲ್ಲವು ನಮ್ಮ ಗುಹೇಶ್ವರಲಿಂಗದಸೊಮ್ಮು. ನೀನೇನು ಕೊಟ್ಟು ಭಕ್ತನಾದೆಹೇಳಾ ಬಸವಣ್ಣ?

ಋಷಿ-ಮುನಿಗಳು ಸಂತರು ಪ್ರಕೃತಿಯ ಸುಂದರಮಯ ಪ್ರತಿ ಹೆಜ್ಜೆಯಲ್ಲೂ ಅಂದರೆ ಹರಿಯುವ ಜುಳುಜುಳು ನೀರಿನಲ್ಲಿ, ದುಂಬಿಯ ಝೇಂಕಾರದಲ್ಲಿ, ಗಂಟೆಯ ನಿನಾದದಲ್ಲಿ, ಕೋಗಿಲೆಯ ಕೂಹುವಿನಲ್ಲಿ, ಸಂಗೀತದ ಸುಮಧುರತೆಯಲಿ, ಪ್ರಕೃತಿಯ ಸುಂದರ ಆಸ್ವಾದದ ಘ್ರಾಣದಲ್ಲಿ ಎಲ್ಲದರಲ್ಲೂ ಓಂಕಾರದ ಅನುಭವ ಪಡೆಯುವ ರೀತಿ,ನಾವು ನಮ್ಮ ಬದುಕಲಿ ಸುಂದರ ನಿನಾದದ ಭರವಸೆಯಲ್ಲಿರೋಣ.
ಮರಗಳನ್ನು ನಮ್ಮ ಸ್ವಾರ್ಥದ ಆಸೆಗೆ ಇಲ್ಲವಾಗಿಸುವ ಈ ಪರ್ವದಲ್ಲಿ, ಪ್ರಕೃತಿಯೊಂದೇ ಬೋಳಾಗಿಲ್ಲ. ಮಾನವನ ಹೃದಯದಲ್ಲಿ ನಕಾರಾತ್ಮಕ ಭಾವಗಳೇ ತುಂಬಿ ಮೌಲ್ಯಗಳಿಲ್ಲದ ಹೃದಯಗಳು ಬೋಳಾಗಿವೆ. ಸುಖವಷ್ಟನ್ನೇ ಅರಿಸುವ ನಮ್ಮ ಮನಗಳು,ಕಷ್ಟಗಳು ಬಂದರೂ ಅವನ್ನು ಸಹಿಸುವ, ಪರಿಹರಿಸುವ ವಿಶಿಷ್ಟತೆ ಯುಗಾದಿಯಲ್ಲಿ ತುಂಬಲಿ.

ಈ ಜಗತ್ತು ಕ್ಷುಲ್ಲಕವಲ್ಲ, ಕ್ಷುದ್ರವಲ್ಲ, ಜಡವಲ್ಲ. ಜಗತ್ತು ಎಂಬುದು “ಸತ್ಯಂ- ಶಿವಂ- ಸುಂದರಂ” ಎಂಬ ಸೃಷ್ಟಿ, ಈ ಸೃಷ್ಟಿಯ ಪರಿಯಲ್ಲಿ ಭಗವಂತನನ್ನು ಕಾಣಬಹುದು.

ಪ್ರಕೃತಿಯ ಹೊಸಚಿಗುರು, ಹೊಸ ಮಾವು-ಬೇವು, ಎರಡೂ ಸೇರಿ ಕಹಿ-ಸಿಹಿಯ ಸಂಕೀರ್ಣತೆಯಲ್ಲಿ, ಎಲ್ಲರ ಬಾಳು ಬೇವು-ಬೆಲ್ಲದ ಒಂದು ಸಂಪೂರ್ಣ ತೃಪ್ತಿಕರ ಸಿಹಿಯಾಗಲಿ. ಮಾತು-ಮೌನಗಳ ಮಧ್ಯೆ ಸಮಪಾಲು-ಸಮಬಾಳೆಂಬ,ಭಾರತೀಯ ಪುರಾಣದ “ವಸುದೈವ ಕುಟುಂಬಕಂ” ಎಂಬ ಪ್ರಸಿದ್ಧವಾದ ಮಾತು ನಿತ್ಯನೂತನವಾಗಲಿ.ಹೇಗೆ ವಸಂತದ ಗಾಳಿ,ಎಲ್ಲರಲ್ಲೂ ಹೊಸ ಹುರುಪು ತರುತ್ತದೆಯೋ ಹಾಗೆಯೇ ಅದನ್ನು ಸಂಭ್ರಮಿಸುವ ಚೈತನ್ಯ ನಮ್ಮದಾಗಲಿ.

ಡಾ.ಭಾಗ್ಯಜ್ಯೋತಿ ಕೋಟಿಮಠ, ಮುಖ್ಯಶಿಕ್ಷಕರು, ಶಿರೂರು

 

administrator

Related Articles

Leave a Reply

Your email address will not be published. Required fields are marked *