ಉಭಯ ಪಕ್ಷಗಳಿಗೂ ಪ್ರತಿಷ್ಠೆಯಾಗಿರುವ ಅಖಾಡ / ಜೋರಾದ ಜಾತಿ ಲೆಕ್ಕಾಚಾರ
ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ತೆರವಾದ ಸ್ಥಾನಕ್ಕೆ ಶಿಗ್ಗಾಂವಿ ಕ್ಷೇತ್ರದಲ್ಲಿ ಉಪಚುನಾವಣೆಗೆ ನ.13ರ ಮುಹೂರ್ತ ಫಿಕ್ಸ್ ಆಗಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಾಳೆಯದಲ್ಲಿ ಟಿಕೆಟ್‌ಗಾಗಿ ದೊಡ್ಡ ಫೈಟ್ ನಡೆದಿದೆ.
ಕ್ಷೇತ್ರದಲ್ಲಿ 80 ಸಾವಿರಕ್ಕೂ ಹೆಚ್ಚು ಪಂಚಮಸಾಲಿ ಮತಗಳಿದೆಯಲ್ಲದೇ 60 ಸಾವಿರಕ್ಕೂ ಹೆಚ್ಚು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮತಗಳಿದ್ದು ಕಾರಣ ಎರಡೂ ಪಕ್ಷಗಳೂ ಈ ಎರಡು ಸಮುದಾಯದ ಮತಗಳ ಮೇಲೆ ಕಣ್ಣಿಟ್ಟೇ ತಂತ್ರಗಾರಿಕೆ ಮತ್ತು ಟಿಕೆಟ್ ಅಂತಿಮಗೊಳಿಸುವುದು ನಿಕ್ಕಿಯಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಸ್ವತಃ ಸಿಎಂ ಆಗಿದ್ದರೂ ಇಲ್ಲಿ ಏದುಸಿರು ಬಿಟ್ಟು ಗೆಲುವು ಸಾಧಿಸಿದ್ದರು. ಅಲ್ಲದೇ ಶಿಗ್ಗಾಂವಿ ಮಾತ್ರ ಹಾವೇರಿಯಲ್ಲಿ ಮಾನ ಉಳಿಸಿದ ಕ್ಷೇತ್ರವಾಗಿತ್ತು. ಹಾಗಾಗಿ ಅದನ್ನು ಉಳಿಸಿಕೊಳ್ಳಲು ಕೇಸರಿಪಡೆ ತಂತ್ರಗಾರಿಕೆ ನಡೆಸಿದ್ದು, ಹಲವು ವರ್ಷಗಳಿಂದ ಕಾಂಗ್ರೆಸ್ ಪಾಲಿಗೆ ಈ ಕ್ಷೇತ್ರ ಕಗ್ಗಂಟಾಗಿದ್ದು ಹಾಗಾಗಿ ಸರ್ಕಾರವಿರುವುದರಿಂದ ಈ ಬಾರಿ ಕೈವಶ ಮಾಡಿಕೊಳ್ಳಲೇ ಬೇಕೆಂಬ ಹಠ ಹೊಂದಿದೆ. ಅಲ್ಲದೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಿಜೆಪಿಗಿಂತ ಹೆಚ್ಚು ಮತ ಬಂದಿದ್ದು ಆಕಾಂಕ್ಷಿಗಳು ದಿನದಿಂದ ದಿನಕ್ಕೆ ಹೆಚ್ಚಾಗಲು ಕಾರಣವಾಗಿದೆ.
ಬಿಜೆಪಿಯಲ್ಲಿ ಅನೇಕ ಆಕಾಂಕ್ಷಿಗಳಿದ್ದರೂ ಅಂತಿಮವಾಗಿ ಪೈಪೋಟಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ, ಶ್ರೀಕಾಂತ ದುಂಡಿಗೌಡ್ರ, ಶಶಿಧರ ಯಲಿಗಾರ, ಶಿವಾನಂದ ಮ್ಯಾಗೇರಿ, ಡಾ.ಶೋಭಾ ನಿಸ್ಸೀಮಗೌಡ್ರ, ಗಂಗಾಧರ ಬಾಣದ ಮುಂತಾದವರ ಹೆಸರು ಚಾಲ್ತಿಯಲ್ಲಿದ್ದು ಅಲ್ಲದೇ ಮಾಜಿ ಸಚಿವ ಮುರಗೇಶ ನಿರಾಣಿ ಹೆಸರು ಪ್ರಭಲವಾಗಿ ಕೇಳಿ ಬರಲಾರಂಭಿಸಿದೆ. ಸ್ವತಃ ಬಸವರಾಜ ಬೊಮ್ಮಾಯಿ ಪಕ್ಷದ ವರಿಷ್ಠರು ಟಿಕೆಟ್ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುರೆಂದು ಹೇಳುತ್ತಿರುವರಾದರೂ ಮಗ ಭರತನನ್ನು ಉತ್ತರಾಧಿಕಾರಿ ಮಾಡುವ ಹಂಬಲವಂತೂ ಇದೆ.ಈ ಹಿನ್ನೆಲೆಯಲ್ಲಿ ಅವರ ಹೆಸರು ಮುಂಚೂಣಿಯಲ್ಲಿದೆ. ಪಂಚಮಸಾಲಿ ನಿರ್ಣಾಯಕ ಮತಗಳಿರುವುದರಿಂದ ನಿರಾಣಿ ವರಿಷ್ಠರು ಚಿಂತನೆ ನಡೆಸಿದ್ದಾರೆ. ತನ್ಮಧ್ಯೆ ಸ್ಥಳೀಯರಿಗೆ ನೀಡಬೇಕೆಂಬ ವಾದವೂ ಮುನ್ನೆಲೆಗೆ ಬಂದಿದೆ. ದುಂಡಿಗೌಡ್ರ ಅಥವಾ ಯಲಿಗಾರಗೆ ಲಾಟರಿ ಹೊಡೆದರೂ ಅಚ್ಚರಿಯಿಲ್ಲ.
ಇನ್ನೊಂದೆಡೆ ಇತ್ತೀಚೆಗೆ ಹುಬ್ಬಳ್ಳಿಗೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷರೂ ಡಿಸಿಎಂ ಆಗಿರುವ ಡಿ.ಕೆ.ಶಿವಕುಮಾರ ಅಭ್ಯರ್ಥಿ ಯಾರಾದರೂ ಎಲ್ಲ ಭಿನ್ನಾಭಿಪ್ರಾಯ ಮರೆತು ಗೆಲ್ಲಿಸಲು ಪಣತೊಡಬೇಕೆಂದು ಹೇಳಿದ್ದರೂ ಮುಸುಕಿನ ಗುದ್ದಾಟ ಮುಂದುವರಿದಿದೆ. ಬಹುತೇಕ ಇಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಮಣೆ ಹಾಕುತ್ತ ಬಂದಿದ್ದು, ಕಳೆದ ಬಾರಿ ಕಳೆದ ಬಾರಿ ಸ್ಪರ್ಧೆಗಿಳಿದಿದ್ದ ಯಾಸಿರ ಖಾನ ಪಠಾಣ ಮತ್ತು ಹಳೆಯ ಹುಲಿ ಅಜ್ಜಂ ಫೀರ ಖಾದ್ರಿ ನಡುವೆ ಇನ್ನಿಲ್ಲದ ಪೈಪೋಟಿಯಿದೆ.
ಅಲ್ಪಸಂಖ್ಯಾತ ಮುಸ್ಲಿಂರಿಗೆ ಮಣೆ ಹಾಕುವುದೋ ಅಥವಾ ಬಹುಸಂಖ್ಯಾತರಿಗೆ ಮಣೆ ಹಾಕುವುದೋ ಎಂಬ ಜಿಜ್ಞಾಸೆಯೂ ಕೈ ಪಾಳೆಯದಲ್ಲಿದ್ದು, ಅಂತಿಮವಾಗಿ ವರಿಷ್ಠರು ಯಾವ ಗಟ್ಟಿ ನಿರ್ಧಾರ ತೆಗೆದುಕೊಳ್ಳುವರೋ ಕಾದು ನೋಡಬೇಕಿದೆ.
ಮಾಜಿ ಸಂಸದ ಮಂಜುನಾಥ ಕುನ್ನೂರ ಪುತ್ರ ರಾಜು ಕುನ್ನೂರ, ಗಡಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವ ಕುಮಾರ ನೀರಲಗಿ, ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರ ಪತ್ನಿ ಶಿವಲೀಲಾ ಕುಲಕರ್ಣಿ, ಪ್ರೇಮಾ ಪಾಟೀಲ, ರಾಜೇಶ್ವರಿ ಪಾಟೀಲ ಮುಂತಾದವರು ಸೇರಿ ಸುಮಾರು ಒಂದು ಡಜನ್‌ಗೂ ಹೆಚ್ಚು ಜನ ಆಕಾಂಕ್ಷಿಗಳಿದ್ದಾರೆ.
ಕ್ಷೇತ್ರದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಕುರುಬ ಸಮುದಾಯದ, ಸುಮಾರು 40 ಸಾವಿರಕ್ಕೂ ಹೆಚ್ಚು ಎಸ್‌ಸಿಎಸ್‌ಟಿ ಮತಗಳು, ಅಲ್ಲದೇ ಇತರೆ ಸಮುದಾಯಗಳ 30 ಸಾವಿರಕ್ಕೂ ಮತಗಳಿದ್ದು ಕಾರಣ ಅಹಿಂದ ಕಾಂಬಿನೇಶನ್‌ನಲ್ಲಿ ಮಾಜಿ ಸಚಿವ ಆರ್. ಶಂಕರ ಸಹ ಉತ್ಸುಕರಾಗಿದ್ದು ಅವರ ಹೆಸರೂ ಪ್ರಭಲವಾಗಿ ಕೇಳಿ ಬರುತ್ತಿದೆ. ಸಿ.ಎಂ.ಇಬ್ರಾಹಿಂ ಪುತ್ರ ಅಲ್ಲದೇ ಯುವ ಕಾಂಗ್ರೆಸ್ ಅಧ್ಯಕ್ಷ ನಲಪ್ಪಾಡ್ ಹೆಸರು ಕೆಲ ದಿನಗಳ ಹಿಂದೆ ಕೇಳಿ ಬಂದಿದ್ದರೂ ಈಗ ಆ ಸಾಧ್ಯತೆ ಕಡಿಮೆ.
ಬಿಜೆಪಿ ತನ್ನ ಭದ್ರಕೋಟೆ ಮತ್ತಷ್ಟು ಭದ್ರ ಪಡಿಸಿಕೊಳ್ಳಲು ಸ್ಕೆಚ್ ಹಾಕುತ್ತಿದ್ದರೆ, ಕಾಂಗ್ರೆಸ್ ಸಹ ಗೆಲ್ಲಲೇ ಬೇಕೆಂಬ ಪಣ ತೊಟ್ಟಿದ್ದು ದಿ. 25 ನಾಮಪತ್ರ ಸಲ್ಲಿಸಲು ಕೊನೆಯದಿನವಾಗಿದ್ದು ದಿ. 22ರೊಳಗೆ ಉಭಯ ಪಕ್ಷಗಳ ಹುರಿಯಾಳುಗಳ ಅಂತಿಮಗೊಳ್ಳುವ ಸಾಧ್ಯತೆಗಳಿವೆ.