ಹುಬ್ಬಳ್ಳಿ-ಧಾರವಾಡ ಸುದ್ದಿ
ಮಹಾನಗರದ ನಾಲ್ಕು ಮಂಡಲಗಳಿಗೂ ತೀವ್ರ ಪೈಪೋಟಿ

ಮಹಾನಗರದ ನಾಲ್ಕು ಮಂಡಲಗಳಿಗೂ ತೀವ್ರ ಪೈಪೋಟಿ

ಸದಸ್ಯತ್ವ ಅಭಿಯಾನ ಹಿನ್ನೆಲೆ/ ದೀಪಾವಳಿ ನಂತರವೇ ಪ್ರಕಟ ಸಾಧ್ಯತೆ

ಹುಬ್ಬಳ್ಳಿ : ಧಾರವಾಡ ಗ್ರಾಮಾಂತರ ಜಿಲ್ಲೆಯಲ್ಲಿನ ಭಾರತೀಯ ಜನತಾ ಪಕ್ಷದ ಮಂಡಲ ಅಧ್ಯಕ್ಷರ ಆಯ್ಕೆ ಕಗ್ಗಂಟಾಗಿರುವಂತೆಯೇ ಹುಬ್ಬಳ್ಳಿ ಧಾರವಾಡ ಮಹಾನಗರದ ನಾಲ್ಕು ಮಂಡಳದ ಅಧ್ಯಕ್ಷ ಪಟ್ಟಕ್ಕೂ ತೀವ್ರ ಪೈಪೋಟಿ ನಡೆದಿದೆ.
ಮಹಾನಗರ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ನಿಯುಕ್ತಿಗೊಂಡ ನಂತರ ಹೊಸಬರ ನೇಮಕ ಆಗಬೇಕಿತ್ತಾದರೂ ಈಗಾಗಲೇ ಆಕಾಂಕ್ಷಿಗಳು ತಮ್ಮ ಅರ್ಜಿ ಸಲ್ಲಿಸಿದ್ದರೂ ಕೋರ ಕಮೀಟಿ ಸಭೆ ನಡೆಯದ ಹಿನ್ನೆಲೆಯಲ್ಲಿ ಇನ್ನೂ ನೇಮಕಾತಿ ಆಗಿಲ್ಲವಾಗಿದ್ದು ಹಾಲಿ ಅಧ್ಯಕ್ಷರುಗಳ ಬೋನಸ್ ಪೀರಿಯಡ್ ಮುಂದುವರಿದಿದೆ.


ಭಾರೀ ಮಹತ್ವದ ಹು.ಧಾ.ಸೆಂಟ್ರಲ್ ಕ್ಷೇತ್ರ, ಹು.ಧಾ ಪೂರ್ವ ಕ್ಷೇತ್ರ, ಪಶ್ಚಿಮ ಕ್ಷೇತ್ರ, ಮತ್ತು ಧಾರವಾಡ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಅಧ್ಯಕ್ಷ ಸ್ಥಾನಗಳಿಗೆ ಪ್ರತಿ ಕ್ಷೇತ್ರದಲ್ಲೂ 8-10 ಆಕಾಂಕ್ಷಿಗಳಿದ್ದು, ಆದರೆ ಮೂರು ನಾಲ್ಕು ಜನರ ಮಧ್ಯೆ ಇನ್ನಿಲ್ಲದ ಪೈಪೋಟಿ ನಡೆದಿದೆ.
ಸೆಂಟ್ರಲ್‌ನಲ್ಲಿ ಇದುವರೆಗೆ ಮುನ್ನಡೆಸಿರುವ ಪಾಲಿಕೆ ಸದಸ್ಯ ಸಂತೋಷ ಚವ್ಹಾಣ ಸ್ಥಾನದಲ್ಲಿ ಅಧ್ಯಕ್ಷರಾಗಲು 10ಕ್ಕೂ ಹೆಚ್ಚು ಜನರು ತಮ್ಮ ಯತ್ನ ಮುಂದುವರಿಸಿದ್ದು ಅಂತಿಮವಾಗಿ ರಾಜು ಕಾಳೆ, ಕೃಷ್ಣಾ ಗಂಡಗಾಳೇಕರ, ಈಶ್ವರಗೌಡಾ ಪಾಟೀಲ, ಪ್ರವೀಣ ಪವಾರ, ಶಶಿಶೇಖರ ಡಂಗನವರ, ಹರೀಶ ಜಂಗಲಿ ಹೆಸರುಗಳು ಪ್ರಬಲವಾಗಿ ಕೇಳಿ ಬರುತ್ತಿದ್ದು ಇನ್ನಿಲ್ಲದ ಪೈಪೋಟಿಯಿದೆ.


ಪೂರ್ವ ಕ್ಷೇತ್ರದ ಪ್ರಭು ನವಲಗುಂದಮಠ ಸ್ಥಾನದಲ್ಲಿ ಜಗದೀಶ ಬುಳ್ಳಾನವರ, ರಾಜು ಜರತಾರಘರ, ಪ್ರಕಾಶ ಶೃಂಗೇರಿ, ಅನೂಪ ಬಿಜವಾಡ, ಮಂಜುನಾಥ ಕಾಟಕರ ಸೇರಿ ಇತರರು ತೀವ್ರ ಯತ್ನ ನಡೆಸಿದ್ದು ಪಶ್ಚಿಮ ಮತ್ತು ಪೂರ್ವದ ಸ್ಥಾನಗಳು ಶಾಸಕ ಮಹೇಶ ಟೆಂಗಿನಕಾಯಿ ಇಶಾರೆಯನ್ನವಲಂಬಿಸಿದೆ ಎಂಬುದು ಮೇಲ್ನೋಟಕ್ಕೆ ಗೋಚರವಾಗಲಿದೆ. ಅಲ್ಲದೇ ಮೂರು ದಶಕಗಳ ಕಾಲ ಕ್ಷೇತ್ರ ಕೈಯಲ್ಲಿಟ್ಟುಕೊಂಡಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ಪುನಃ ಪಕ್ಷಕ್ಕೆ ಬಂದಿದ್ದು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವರೋ ಇಲ್ಲವೋ ಕಾದು ನೋಡಬೇಕಿದೆ.ಅವರ ಶಿಷ್ಯರಿಗೆ ಮಣೆ ಹಾಕುವರೋ ಎಂಬುದು ಕುತೂಹಲ ಕೆರಳಿಸಿದೆ.


ಪಶ್ಚಿಮ ಕ್ಷೇತ್ರದಲ್ಲಿ ಕೂಡ ಹಲವಾರು ಆಕಾಂಕ್ಷಿಗಳಿದ್ದರೂ ಮೋಹನ ರಾಮದುರ್ಗ, ಮೈಲಾರಿ ಉಪ್ಪಿನ ಅಮಿತ ಪಾಟೀಲ, ಮಂಜುನಾಥ ನೀರಲಕಟ್ಟಿ, ರಮೇಶ ದೊಡ್ಡವಾಡ, ಬಟ್ಟೆಣ್ಣವರ ಇವರ ಹೆಸರುಗಳು ಪ್ರಮುಖವಾಗಿ ಕೇಳಿ ಬಂದಿವೆ. ಧಾರವಾಡ ಗ್ರಾಮೀಣ ವ್ಯಾಪ್ತಿ ಅಧ್ಯಕ್ಷ ಸ್ಥಾನಕ್ಕೆ ಶಂಕರ ಶೇಳಕೆ, ಶ್ರೀನಿವಾಸ ಕೋಟಿಯಾನ, ಹರೀಶ ವಿಜಾಪುರ, ಮಂಜುನಾಥ ನಡಹಟ್ಟಿ, ಮಂಜುನಾಥ ಚೋಳಪ್ಪನವರ ನಡುವೆ ತುರುಸಿದೆ.
ಸದಸ್ಯತ್ವ ಅಭಿಯಾನ ಎಲ್ಲ ಕ್ಷೇತ್ರಗಳಲ್ಲಿ ಜೋರಾಗಿ ನಡೆದಿದ್ದು ಹಾಗಾಗಿ ಈ ಅಭಿಯಾನ ಮುಗಿದ ನಂತರವೇ ನೇಮಕ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಕಾರಣ ದೀಪಾವಳಿ ನಂತರವೇ ಬಿಜೆಪಿ ಮಂಡಲಗಳು ಹೊಸ ಅಧ್ಯಕ್ಷರ ಪಡೆಯಬಹುದು ಎನ್ನುವ ಮಾತು ಕೇಳಿ ಬಂದಿದೆ. ಮಾಧ್ಯಮ ವಕ್ತಾರ ರವಿ ನಾಯಕ ಹೆಸರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಕೇಳಿ ಬರಲಾರಂಬಿಸಿದೆ.

ಈಗಾಗಲೇ ಎಲ್ಲ ಕ್ಷೇತ್ರಗಳ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ತಮ್ಮ ಅರ್ಜಿಯನ್ನು ಸಲ್ಲಿಸಿದ್ದು ಕೋರ ಕಮೀಟಿ ಸಭೆ ನಡೆದಿಲ್ಲ.ಇತ್ತೀಚೆಗೆ ನಡೆಯಬೇಕಿದ್ದುದು ರದ್ದಾಗಿದೆ ಆದಷ್ಟು ಶೀಘ್ರ ಕೋರ ಕಮೀಟಿ ಸಭೆ ನಡೆಸಿ ಅಂತಿಮಗೊಳಿಸಿ ಯಾವುದೇ ಗೊಂದಲವಿಲ್ಲದೇ ಅಧ್ಯಕ್ಷರು ಇತರ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು.


ತಿಪ್ಪಣ್ಣ ಮಜ್ಜಗಿ,
ಮಹಾನಗರ ಜಿಲ್ಲಾ ಅಧ್ಯಕ್ಷರು

administrator

Related Articles

Leave a Reply

Your email address will not be published. Required fields are marked *