ಹುಬ್ಬಳ್ಳಿ-ಧಾರವಾಡ ಸುದ್ದಿ

ಕುಂದಗೋಳ : ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್‌ಗೆ ಭಾರೀ ಮೇಲಾಟ!

ಹ್ಯಾಟ್ರಿಕ್ ಜಯಕ್ಕೆ ಕೈ ಯತ್ನ , ಕಮಲ ಅರಳಿಸಲು ಬಿಜೆಪಿ ಕಸರತ್ತು

ಹುಬ್ಬಳ್ಳಿ : ಕುಂದಗೋಳ ಮತ್ತು ಹುಬ್ಬಳ್ಳಿ ತಾಲೂಕಿನ ಕೆಲ ಹಳ್ಳಿಗಳನ್ನೊಳಗೊಂಡ ಕುಂದಗೋಳ ಕ್ಷೇತ್ರದಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಯ ಕಾವು ಈಗಾಗಲೇ ಆರಂಭಗೊಂಡಿದ್ದು, ಕಾಂಗ್ರೆಸ್ ಒಂದು ಡಜನ್‌ಗೂ ಹೆಚ್ಚು ಆಕಾಂಕ್ಷಿಗಳಿದ್ದು ಬಿಜೆಪಿಯಲ್ಲಿ ಈ ಸಂಖ್ಯೆ ಅರ್ಧ ಡಜನ್ ಇದೆ.ಎರಡೂ ಪಕ್ಷಗಳಲ್ಲೂ ಉಮೇದುವಾರಿಕೆ ಗುದ್ದಾಟ ಜೋರಾಗಿದೆ.


ಜನ ಸಾಮಾನ್ಯರ ಶಾಸಕ ಸಿ.ಎಸ್.ಶಿವಳ್ಳಿ 2019ರಲ್ಲಿ ಅಕಾಲಿಕವಾಗಿ ನಿಧನದ ನಂತರ ತೆರವಾದ ಸ್ಥಾನಕ್ಕೆ ನಡೆದ ಇಡಿ ರಾಜ್ಯದಲ್ಲೇ ಕುತೂಹಲ ಕೆರಳಿಸಿದ್ದ ಭಾರಿ ಜಿದ್ದಾಜಿದ್ದಿಯಿಂದ ಕೂಡಿದ ಉಪ ಚುನಾವಣೆಯಲ್ಲಿ ಶಿವಳ್ಳಿಯವರ ಪತ್ನಿ ಶ್ರೀಮತಿ ಕುಸುಮಾವತಿ ಅಲ್ಪ ಮತಗಳ ಅಂತರದ ಗೆಲುವು ದಾಖಲಿಸಿ ಶಕ್ತಿ ಸೌಧಕ್ಕೆ ಕಾಲಿಟ್ಟಿದ್ದರು.


ಇಂದು ಸ್ವತಃ ಕುಸುಮಾವತಿ ಸಹಿತ 16 ಆಕಾಂಕ್ಷಿಗಳು ಕುಂದಗೋಳ ಆಕಾಂಕ್ಷಿಗಳಾಗಿದ್ದು ತಮ್ಮದೇ ಆದ ಕಾರಣ ಲೆಕ್ಕಾಚಾರ ಹಾಕಿ ಪಕ್ಷದ ವರಿಷ್ಠರ ಮುಂದೆ ಬೇಡಿಕೆ ಇಡುತ್ತಿದ್ದಾರೆ.


ಮಾಜಿ ಶಾಸಕ ಎಂ.ಎಸ್. ಅಕ್ಕಿ ಕಾಂಗ್ರೆಸ್ ಸೇರ್ಪಡೆ ನಂತರ ಸಕ್ರೀಯರಾಗಿದ್ದು, ಹಿರಿತನವನ್ನೂ ಹೊಂದಿದ್ದಾರೆ. ಸಹಕಾರಿ ಧುರೀಣರೂ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಅರವಿಂದ ಕಟಗಿ, ಮಾಜಿ ಶಾಸಕ ಚಂದ್ರಶೇಖರ ಜುಟ್ಟಲ ಪುತ್ರ, ಪರಿಷತ್ ಸದಸ್ಯ ಸಲೀಮ್ ಅಹ್ಮದ ಆಪ್ತ ಬಳಗದಲ್ಲಿರುವ ಚಂದ್ರಶೇಖರ ಜುಟ್ಟಲ, ಹಾಲಿ ಶಾಸಕಿಯ ಮೈದುನ ಮುತ್ತಣ್ಣ ಶಿವಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಉಪ್ಪಿನ, ಮಾಜಿ ಜಿ.ಪಂ.ಸದಸ್ಯ ಉಮೇಶ(ಯಲ್ಲಪ್ಪ) ಹೆಬಸೂರ, ಮುಖಂಡರುಗಳಾದ ಶಿವಾನಂದ ಬೆಂತೂರ, ಸುರೇಶ ಸವಣೂರ, ಹಜರೇಸಾಬ ನದಾಫ್ , ಗುರುರಾಜ ದೊಡ್ಡಮನಿ, ಮಹಿಳಾ ಮುಖಂಡೆ ಧೃತಿ ಸಾಲಮನಿ,ನಿಕೇತರಾಜ್ ಎಂ.ಅಲ್ಲದೇ ಉದ್ಯಮಿ ರಮೇಶ ಕೊಪ್ಪದ ಹಾಗೂ ಮಾಜಿ ಸಚಿವ ಪಿ.ಸಿ.ಸಿದ್ದನಗೌಡರ ಪುತ್ರ ನೂಲ್ವಿಯವರಾದ ಮಾಜಿ ಎಪಿಎಂಸಿ ಅಧ್ಯಕ್ಷ ಜಗನ್ನಾಥಗೌಡ ಸಹ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ ಮಾಜಿ.ಜಿ.ಪಂ.ಸದಸ್ಯ ಸುರೇಶ ಗೌಡ ಪಾಟೀಲರ ಸೋದರ, ಉದ್ಯಮಿ ಕೊಡುಗೈ ದಾನಿ ಎಂದೇ ಕರೆಸಿಕೊಳ್ಳುತ್ತಿರುವ ಅದರಗುಂಚಿಯ ಜಿ.ಸಿ.ಪಾಟೀಲ ಸಹ ಆಕಾಂಕ್ಷಿಯಾಗಿದ್ದಾರೆ.


ಕಳೆದ ಎರಡೂ ಚುನಾವಣೆಗಳಲ್ಲಿ ಗೆಲುವಿನ ಹೊಸ್ತಿಲಲ್ಲಿ ಎಡವಿರುವ ಬಿಜೆಪಿ ಈ ಬಾರಿ ಶತಾಯ ಗತಾಯ ಗೆಲ್ಲಲೇ ಬೇಕೆಂಬ ಲೆಕ್ಕಾಚಾರದಲ್ಲಿ ಇತ್ತೀಚಿಗೆ ಅಮಿತ್ ಶಾ ಅವರ ಅದ್ಧೂರಿ ರೋಡ್ ಶೋ ನಡೆಸಿ ಚುನಾವಣೆಗೆ ರಣಕಹಳೆ ಮೊಳಗಿಸಿದೆ.
ಪ್ರಹ್ಲಾದ ಜೋಶಿಯವರ ಪರಮಾಪ್ತರೂ ಆಗಿರುವ, ಶಾಸಕರಾಗದೇ ಇದ್ದರೂ ಕ್ಷೇತ್ರದ ಅಭಿವೃದ್ಧಿಗೆ ಅನುದಾನದ ಹೊಳೆ ಹರಿಸಿರುವ ಎಂ.ಆರ್.ಪಾಟೀಲ, ಅಲ್ಲದೇ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ ಮಧ್ಯೆ ತೀವ್ರ ಪೈಪೋಟಿಯಿದೆ. ಕಳೆದೆರಡೂ ಚುನಾವಣೆಗಳಲ್ಲಿ ಸಣ್ಣ ಅಂತರದ ಸೋಲು ಕಂಡಿರುವ ಚಿಕ್ಕನಗೌಡರ ಇಂದಿಗೂ ಕ್ಷೇತ್ರದಲ್ಲಿ ಪ್ರಭಾವ ಉಳಿಸಿಕೊಂಡಿದ್ದು ಬಿ.ಎಸ್.ಯಡಿಯೂರಪ್ಪನವರ ಬೀಗರೂ ಆಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.


ಕಳೆದ ಉಪಚುನಾವಣೆ ವೇಳೆ ಇದು ಕಡೆಯ ಅವಕಾಶ ಎಂಬ ಒಡಂಬಡಿಕೆ ಮಾಡಿಯೇ ಟಿಕೆಟ್ ನೀಡಿದ್ದರೆನ್ನುವ ಗುಸು ಗುಸು ಇದೆಯಾದರೂ ಅದು ಲಕ್ಷ್ಮಣರೇಖೆಯಾಗುವ ಸಾಧ್ಯತೆ ಇಲ್ಲದಿಲ್ಲ. ಕಳೆದ ಬಾರಿ ವರಿಷ್ಠರ ಸೂಚನೆಗೆ ಮನ್ನಣೆ ನೀಡಿದ ಎಂ.ಆರ್.ಪಾಟೀಲರು ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದ ತುಂಬಾ ಸಂಚರಿಸುತ್ತಿದ್ದಾರೆ.


ಈ ಇಬ್ಬರ ಮಧ್ಯೆ ಸಂಘ ಪರಿವಾರದ ಹಿನ್ನೆಲೆಯ ಡಾ.ಮಲ್ಲಿಕಾರ್ಜುನ ಬಾಳಿಕಾಯಿ, ಪಕ್ಷದ ವರಿಷ್ಠರೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಛಬ್ಬಿ ಮೂಲದ ಪತ್ರಕರ್ತ ಅಜಿತ ಹನುಮಕ್ಕನವರ ಅವರ ಹೆಸರು ಪಕ್ಷದ ಆಂತರಿಕ ವಲಯದಲ್ಲಿ ಕೇಳಿ ಬರುತ್ತಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯರಲ್ಲದೇ ಕ್ಷೇತ್ರದಲ್ಲಿ ಸಮಾಜದ ಯುವಕರ ಸೆಳೆಯುವ ಸಾಮರ್ಥ್ಯ ಇರುವ ಶಿವಾನಂದ ಮುತ್ತಣ್ಣವರ ಇತ್ತಿಚೆಗೆ ಹಿಂದುಳಿದ ಮುಖಂಡರ ನಿಯೋಗದಲ್ಲಿ ತೆರಳಿ ಜಿಲ್ಲೆಯಲ್ಲಿ ಒಂದು ಕ್ಷೇತ್ರವನ್ನಾದರೂ ಒಬಿಸಿಗೆ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆನ್ನಲಾಗಿದೆ.ಮಾಜಿ ಜಿ.ಪಂ.ಸದಸ್ಯ ಗದಿಗೆಪ್ಪ ಕಳ್ಳಿಮನಿ ಸಹ ಅವಕಾಶ ಸಿಕ್ಕಲ್ಲಿ ಒಂದು ಕೈ ನೋಡಬಹುದು. ಜೆಡಿಎಸ್‌ನಲ್ಲಿ ಕೂಡ ಕಳೆದ ಬಾರಿ ಸ್ಪರ್ಧೆಗಿಳಿದಿದ್ದ ಹಜರತ್ ಅಲಿ ಜೋಡಮನಿ, ಶಂಕರಗೌಡ ದೊಡ್ಡಮನಿ ನಡುವೆ ಪೈಪೋಟಿಯಿದ್ದು, ಆಪ್‌ನಿಂದ ನಿರಂಜಯ್ಯ ಮಣಕಟ್ಟಿಮಠ ಮುಂಚೂಣಿಯಲ್ಲಿದ್ದಾರೆ.


ಬಿಜೆಪಿ ಈಗಾಗಲೇ ಶಕ್ತಿ ಪ್ರದರ್ಶನ ನಡೆಸಿದ್ದು, ಕಾಂಗ್ರೆಸ್ ಪ್ರಜಾಧ್ವನಿಯೂ ಇಷ್ಟರಲ್ಲೇ ಆಗಮಿಸುವ ನಿರೀಕ್ಷೆ ಇದ್ದು ದೊಡ್ಡ ಮಟ್ಟದಲ್ಲೇ ರಣಕಹಳೆ ಮೊಳಗಿಸಲಿದೆ.ಕ್ಷೇತ್ರವನ್ನು ಸತತ ಮೂರನೇ ಬಾರಿಗೆ ಗೆಲ್ಲವ ಮೂಲಕ ಹ್ಯಾಟ್ರಿಕ್ ವಶಕ್ಕೆ ಸಿದ್ದತೆ ನಡೆಸಿದೆ.ಆದರೆ 16 ಆಕಾಂಕ್ಷಿಗಳಲ್ಲಿ ಎಂಟು ಜನ ಪ್ರಭಾವಿಗಳ ಪೈಪೋಟಿಯಲ್ಲಿ ಅಂತಿಮ ನಗು ಯಾರದಾಗುತ್ತದೆ ಎಂಬುದು ಕುತೂಹಲ ಕೆರಳಿಸಿದ್ದು, ಜಾತಿ ಲೆಕ್ಕಾಚಾರ,ಆರ್ಥಿಕ ಲೆಕ್ಕಾಚಾರವೇ ನಿರ್ಣಾಯಕ ವಾಗುವ ಸಾಧ್ಯತೆಗಳಿವೆ.

administrator

Related Articles

Leave a Reply

Your email address will not be published. Required fields are marked *