ಹುಬ್ಬಳ್ಳಿ-ಧಾರವಾಡ ಸುದ್ದಿ

‘ಗ್ಯಾರಂಟಿ ಅಲೆ ಎದುರು ಮೋದಿ ಅಲೆ ನಡೆಯಲ್ಲ’

ಪ್ರಸನ್ನಕುಮಾರ ಹಿರೇಮಠ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳ ಅಲೆಯಿದೆ.

ಪ್ರತಿಯೊಂದು ಮನೆಯಲ್ಲೂ ಇರುವ ಗ್ಯಾರಂಟಿ ಫಲಾನುಭವಿಗಳೂ ಕಾಂಗ್ರೆಸ್‌ಗೆ ಮತನೀಡುವ ಭರವಸೆ ನೀಡುತ್ತಿದ್ದಾರೆ.

ಪ್ರತಿ ತಿಂಗಳು 2 ಸಾವಿರ ರೂ. ಪಡೆಯುವ, ಉಚಿತ ಬಸ್‌ನಲ್ಲಿ ಪ್ರಯಾಣಿಸುವ ಎಲ್ಲ ತಾಯಂದಿರು, ಸಹೋದರಿಯರಿಗೆ ಕಾಂಗ್ರೆಸ್ ಬಗ್ಗೆ ಹೆಮ್ಮೆಯಿದೆ.

ಬಿಜೆಪಿಯ ಭಾವನಾತ್ಮಕ ವಿವಾದಗಳು ಜನರಿಗೆ ಮನವರಿಕೆಯಾಗಿವೆ.

ಕಾಂಗ್ರೆಸ್ ಗ್ಯಾರಂಟಿಗಳ ಮುಂದೆ ಬಿಜೆಪಿ ಮೋದಿ ಅಲೆಯ ಆಟ ನಡೆಯುವುದಿಲ್ಲ. ಎಂದು ನಂಬಿರುವ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಈ ಬಾರಿ ಗೆಲುವು ನಮ್ಮದೇ ಎನ್ನುವ ಅದಮ್ಯ ವಿಶ್ವಾಸದಲ್ಲಿದ್ದಾರೆ. ಚುನಾವಣೆಯ ಸಿದ್ಧತೆ, ಮತದಾರರ ಒಲವು ಸೇರಿದಂತೆ ಹಲವು ವಿಷಯಗಳ ಕುರಿತು ಸಂಜೆದರ್ಪಣದೊಂದಿಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ.

ಸಂಜೆ ದರ್ಪಣ: ಚುನಾವಣೆಯಲ್ಲಿ ಜಾತಿ ರಾಜಕಾರಣ ಪ್ರಮುಖ ಎನ್ನಲಾಗುತ್ತಿದೆ. ನಿಮ್ಮ ಅಭಿಪ್ರಾಯ?
ಗಡ್ಡದೇವರಮಠ : ನನಗೆ ಜಾತಿ ರಾಜಕಾರಣದಲ್ಲಿ ನಂಬಿಕೆ ಇಲ್ಲ. ಕಾಂಗ್ರೆಸ್ ಪಕ್ಷ ಎಲ್ಲ ಜಾತಿ- ಧರ್ಮಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪಕ್ಷವಾಗಿದೆ. ಆ ಹಾದಿಯಲ್ಲಿ ನಾನೂ ಸಾಗುತ್ತಿದ್ದೇನೆ. ತತ್ವ ಸಿದ್ಧಾಂತದ ರಾಜಕಾರಣದಲ್ಲಿ ನಂಬಿಕೆ ಇಟ್ಟಿದ್ದೇನೆ. ಜಾತಿ ರಾಜಕಾರಣಕ್ಕೆ ಮತದಾರರೂ ಮಾರು ಹೋಗುವುದಿಲ್ಲ ಎನ್ನುವುದು ನನ್ನ ನಂಬಿಕೆ.

ಸಂ.ದ. : ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿಮ್ಮ ಪ್ರತಿಸ್ಪರ್ಧಿಯಾಗಿದ್ದಾರೆ. ಹೇಗನ್ನಿಸುತ್ತದೆ?

ಗಡ್ಡದೇವರಮಠ : ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ನಿಜ. ಆದರೆ, ಈಗ ಅವರು ಬಿಜೆಪಿ ಅಭ್ಯರ್ಥಿ ಅಷ್ಟೇ. ಅವರ ಬಗ್ಗೆ ವೈಯಕ್ತಿಕ ಟೀಕೆ ಮಾಡುವುದಿಲ್ಲ. ತತ್ವ ಸಿದ್ಧಾಂತಗಳನ್ನು ಮುಂದಿಟ್ಟುಕೊಂಡು, ಬಡವರು, ರೈತರ, ವಿಶೇಷವಾಗಿ ಎಲ್ಲ ಸಮಾಜ ಸಮುದಾಯದವರ ಸೇವಾಕಾಂಕ್ಷಿಯಾಗಿ ಮತ ಕೇಳುತ್ತಿದ್ದೇನೆ. ಪಕ್ಷ ನನ್ನನ್ನು ಗುರುತಿಸಿ ಟಿಕೆಟ್ ನೀಡಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳುತ್ತೇನೆ.

ಸಂ.ದ.: ಕಾಂಗ್ರೆಸ್‌ನ ಗ್ಯಾರಂಟಿಗಳು ಎಷ್ಟರ ಮಟ್ಟಿಗೆ ಮತದಾರರ ಮೇಲೆ ಪ್ರಭಾವ ಬೀರಿವೆ?

ಗಡ್ಡದೇವರಮಠ : ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಯಕ್ರಮಗಳು ಬಹುದೊಡ್ಡ ಕ್ರಾಂತಿ ಮಾಡಿವೆ. ಇವು ಸಮಾಜದ ಎಲ್ಲರಿಗೂ ಅಂದರೆ, ಬಡವರು-ಶ್ರೀಮಂತರು, ಜಾತಿ ಧರ್ಮ ಯಾವುದೇ ಭೇದಭಾವ ಇಲ್ಲದೇ ತಲುಪಿವೆ. ಹಾಗಾಗಿ ಪ್ರಚಾರಕ್ಕೆ ಹೋದಲ್ಲೆಲ್ಲ ಫಲಾನುಭವಿಗಳು ಗ್ಯಾರಂಟಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿಜವಾಗಿಯೂ ಗ್ರಾಮೀಣ ಭಾಗದಲ್ಲಿ ಗ್ಯಾರಂಟಿಗಳಿಂದ ಬಹುದೊಡ್ಡ ಬದಲಾವಣೆ ಆಗಿದೆ. ಇದು ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳ ಕೈಹಿಡಿಯಲಿದೆ.

ಸಂ.ದ.: ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಹೇಳುತ್ತಿದ್ದರೆ, ಬಿಜೆಪಿ ರಾಮಮಂದಿರ, ಹಿಂದುತ್ವದ ಕುರಿತು ಮಾತನಾಡುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?

ಗಡ್ಡದೇವರಮಠ: ಬಿಜೆಪಿಯವರು ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ಎದುರಿಸುವುದಿಲ್ಲ. ಅವರು ಭಾವನಾತ್ಮಕವಾಗಿ ಜಾತಿ, ಧರ್ಮ ಆಧಾರಿತ ವಿಷಯಗಳನ್ನೇ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲೂ ಅದನ್ನೇ ಮಾಡುತ್ತಿದ್ದಾರೆ. ಆದರೆ, ಮತದಾರರು ಪ್ರಬುದ್ಧರಾಗಿದ್ದಾರೆ. ಇದಕ್ಕೆಲ್ಲ ಮಣೆ ಹಾಕುವುದಿಲ್ಲ. ಅಭಿವೃದ್ಧಿ ಕೆಲಸ ಮಾಡುವವರಿಗೆ ಮತ ನೀಡುತ್ತಾರೆ. ಕೇವಲ ಜಾತಿ, ಧರ್ಮದ ಆಧಾರದಲ್ಲಿ ಮತ ಕೇಳುವವರನ್ನು ಈ ಸಲ ತಿರಸ್ಕರಿಸುತ್ತಾರೆ.

ಸಂ.ದ.: ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಯೋಜನೆಗಳು ಏನು?
ಗಡ್ಡದೇವರಮಠ : ಹಾವೇರಿ ಗದಗ ಕ್ಷೇತ್ರದಲ್ಲಿ ಅತ್ಯುತ್ತಮವಾದ ಕೃಷಿ ಭೂಮಿ ಇದ್ದು, ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲಾಗುವುದು. ಈರುಳ್ಳಿ ಬೆಳೆಯುವ ಗದಗ ಜಿಲ್ಲೆಯ ರೈತರಿಗೆ ನೂತನ ತಂತ್ರಜ್ಞಾನಗಳನ್ನು ಪರಿಚಯಿಸಿ, ಸಮಗ್ರ ಬದಲಾವಣೆ ಮಾಡಲಾಗುವುದು. ಜೊತೆಗೆ ಈರುಳ್ಳಿ ರಫ್ತಿಗೂ ಅವಕಾಶ ಕಲ್ಪಿಸುವ ಮೂಲಕ ರೈತರ ಆದಾಯ ಹೆಚ್ಚಿಸಲಾಗುವುದು. ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಮೂಲಕ ಉದ್ಯೋಗ ಕಲ್ಪಿಸಲಾಗುವುದು. ಶಿರಹಟ್ಟಿಯಲ್ಲಿ ರಾಜ್ಯದ ಎರಡನೇ ದೊಡ್ಡ ರೇಷ್ಮೆ ಮಾರುಕಟ್ಟೆ ಇದ್ದು, ಅದನ್ನು ಅಭಿವೃದ್ಧಿ ಮಾಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿರುವ ನೇಕಾರರಿಗೆ ಉದ್ಯೋಗ ಸೃಷ್ಟಿ ಮಾಡಲಾಗುವುದು. ಗದಗ-ಯಲವಗಿ, ರಾಣೆಬೆನ್ನೂರು-ಶಿವಮೊಗ್ಗ, ಮುಂಡರಗಿ-ಹರಪನಹಳ್ಳಿ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಾಗುವುದು. ರೈತರಿಗೆ ಬೆಂಬಲ ಬೆಲೆ ಒದಗಿಸಲು ಪ್ರಯತ್ನಿಸಲಾಗುವುದು. ಹಾವೇರಿ ಗದಗ ಕ್ಷೇತ್ರವನ್ನು ಪ್ರಮುಖ ವ್ಯಾಪಾರಿ ಕೇಂದ್ರ ಮಾಡುವ ಮೂಲಕ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಲಾಗುವುದು.

 

ಸಂ.ದ.: ಮತದಾರರು ನಿಮಗೆ ಏಕೆ ಮತ ಹಾಕಬೇಕು?
ಗಡ್ಡದೇವರಮಠ : ನಾನು ಯಾವುದೇ ಭೇದವಿಲ್ಲದೇ ಎಲ್ಲ ಮತದಾರರ ಜೊತೆಗಿದ್ದೇನೆ. ಜನರು ಪ್ರಗತಿಯ ಹೆಜ್ಜೆಯಲ್ಲಿ ಮುನ್ನಡೆಯಲು ಸಹಕಾರ ನೀಡುತ್ತೇನೆ. ಪ್ರಾಮಾಣಿಕವಾಗಿ ಸೇವೆ ಮಾಡುವ ಇಚ್ಛೆಯಿಂದ ಸ್ಪರ್ಧೆ ಮಾಡಿದ್ದೇನೆ. ನನಗೆ ಒಂದು ಅವಕಾಶ ಕೊಟ್ಟು ನೋಡಿ. ನಿಮ್ಮೆಲ್ಲರ ಮನೆಯ ಮಗನಂತೆ ಕೆಲಸ ಮಾಡುತ್ತೇನೆ.

 

administrator

Related Articles

Leave a Reply

Your email address will not be published. Required fields are marked *