ಐಪಿಎಲ್‌ಗಿಂತ ಜೋರಾಗಿ ಟಿಕೆಟ್ ಬೆಟ್ಟಿಂಗ್
ಹುಬ್ಬಳ್ಳಿ: ಧಾರವಾಡ ಕ್ಷೇತ್ರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ಇನ್ನೂ ಗೋಜಲು ಗೋಜಲಾಗಿಯೇ ಇದ್ದು ಉಭಯ ಪಕ್ಷಗಳ ಉಮೇದುವಾರರ ಹೆಸರು ಎರಡನೇ ಪಟ್ಟಿಯಲ್ಲಿ ಪ್ರಕಟವಾಗಲಿದೆ ಎಂದು ಹೇಳಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಿನ್ನೆ ರಾತ್ರಿ ಹೊಸದಿಲ್ಲಿಯಲ್ಲಿ ನಡೆದ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಧಾರವಾಡ ಸಹಿತ ರಾಜ್ಯದ ೨೨ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದೆ ಎನ್ನಲಾಗುತ್ತಿದೆ.
ಧಾರವಾಡ ಕ್ಷೇತ್ರದಿಂದ ಕಳೆದ ನಾಲ್ಕು ಅವಧಿ ಕೇಸರಿ ಬಾವುಟ ಹಾರಿಸಿರುವ ಮೋದಿ ಸಂಪುಟದ ಪ್ರಭಾವಿ ಸಚಿವ ಪ್ರಹ್ಲಾದ ಜೋಶಿ ಅವರೇ ಮತ್ತೆ ಹುರಿಯಾಳಾಗುವ ಸಾಧ್ಯತೆ ಹೆಚ್ಚಿದ್ದರೂ ನಿರೀಕ್ಷೆಯಂತೆ ಮೊದಲ ಪಟ್ಟಿಯಲ್ಲೇ ಪ್ರಕಟವಾಗಬೇಕಿತ್ತಾದರೂ ಮುಂದಕ್ಕೆ ಹೋಗಿರುವುದು ಹಲವು ಗುಸು ಗುಸುಗಳಿಗೆ ಕಾರಣವಾಗಿತ್ತು.
ಇತ್ತೀಚೆಗೆ ಮತ್ತೆ ಬಿಜೆಪಿಗೆ ಮರಳಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಹ ಪ್ರಭಲ ಆಕಾಂಕ್ಷಿಗಳಾಗಿದ್ದು, ಶಾರ್ಟ ಲೀಸ್ಟ್‌ನಲ್ಲಿ ಅವರ ಹೆಸರಿದೆಯಲ್ಲದೇ ಯಡಿಯೂರಪ್ಪ ಸಹ ಶೆಟ್ಟರ್ ಪರ ಬ್ಯಾಟಿಂಗ್ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಅಲ್ಲದೇ ಇಂದು ವಂದೇ ಭಾರತ ರೈಲುಗಳ ಉದ್ಘಾಟನೆ, ಕಲಘಟಗಿ,ನವಲಗುಂದಗಳಲ್ಲಿ ಪ್ರಚಾರ ಕಾರ್ಯಾಲಯ ಉದ್ಘಾಟನೆಯಿದ್ದರೂ ದಿಢೀರ್ ಆಗಿ ನಿನ್ನೆ ಜೋಶಿಯವರು ದಿಲ್ಲಿಗೆ ತೆರಳಿದ್ದು ಕುತೂಹಲ ಕೆರಳಿಸಿದೆ.
ಧಾರವಾಡ ಲೀಸ್ಟನಲ್ಲಿ ಜೋಶಿ, ಶೆಟ್ಟರ್ ಹೊರತಾಗಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಹೆಸರೂ ಸಹ ಇದೆ ಎನ್ನಲಾಗುತ್ತಿದ್ದು, ನಿನ್ನೆ ರಾತ್ರಿಯಿಂದ ಮಾಜಿ ಸಂಸದ ವಿಜಯ ಸಂಕೇಶ್ವರ ಪುತ್ರ ಆನಂದ ಸಂಕೇಶ್ವರ ಹೆಸರು ಪ್ರಸ್ತಾಪವಾಗಿದೆ ಎಂಬ ವದಂತಿ ಹಬ್ಬಿದೆ.
ಇನ್ನೊಂದೆಡೆ ಕಾಂಗ್ರೆಸ್ ಪಾಳೆಯದಲ್ಲೂ ಟಿಕೆಟ್ ಗೊಂದಲ ಮುಂದುವರಿದಿದ್ದು ಒಬಿಸಿಗೆ ನೀಡಬೇಕೋ ಅಥವಾ ಲಿಂಗಾಯತ ಸಮುದಾಯಕ್ಕೆ ನೀಡಬೇಕೋ ಎಂಬ ಗೊಂದಲ ಮುಂದುವರಿದಿದೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ಸ್ಕ್ರೀನಿಂಗ್ ಸಮಿತಿ ಸಭೆಯಲ್ಲಿ 10ರಿಂದ 15 ಅಂತಿಮಗೊಂಡಿದ್ದು ಅದರಲ್ಲಿ ಧಾರವಾಡ ಸಹ ಸೇರಿದೆ ಎನ್ನಲಾಗುತ್ತಿದೆ.
ಕೊಪ್ಪಳ ಮತ್ತು ಬೆಳಗಾವಿ ಅಭ್ಯರ್ಥಿಗಳ ಲೆಕ್ಕಾಚಾರದಲ್ಲಿ ಇಲ್ಲಿ ಅಂತಿಮಗೊಳ್ಳಲಿದ್ದು, ಲಿಂಗಾಯತ ಕೋಟಾದಲ್ಲಿ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ , ಶಿವಲೀಲಾ ಕುಲಕರ್ಣಿ ಇಬ್ಬರ ಹೆಸರಿದ್ದು ಒಬಿಸಿ ಕೋಟಾದಲ್ಲಿ ಲೋಹಿತ ನಾಯ್ಕರ್, ವಿನೋದ ಅಸೂಟಿ ಹೆಸರು ಕೇಳಿ ಬರುತ್ತಿದೆ. ಅಥವಾ ಅಂತಿಮವಾಗಿ ವರಿಷ್ಠರು ಸಚಿವರಿಗೆ ಸ್ಪರ್ಧೆಗೆ ಸೂಚಿಸುವರೋ ಕಾದು ನೋಡಬೇಕಿದೆ.
ಐಪಿಎಲ್‌ಗಿಂತ ಜೋರಾಗಿ ಟಿಕೆಟ್ ಬೆಟ್ಟಿಂಗ್
ಹಾಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿಗೆ ಟಿಕೆಟ್ ಸಿಗುತ್ತದೆ ಇಲ್ಲ ಎಂಬ ವಿಷಯದಲ್ಲಿ ಐಪಿಎಲ್‌ಗಿಂತ ಜೋರಾಗಿ ಬೆಟ್ಟಿಂಗ ನಡೆಯುತ್ತಿದ್ದು ಕಮಲ ಪಡೆಯವರೇ ಅನುಮಾನ ಎಂಬಂತೆ ಬೆಟ್ಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದರೆ ಉದ್ಯಮಿಗಳು, ಕಾಂಗ್ರೆಸ್ಸಿಗರು ಜೋಶಿಯವರಿಗೆ ಪಕ್ಕಾ ಎಂದು ಬೆಟ್ಟಿಂಗ್‌ನಲ್ಲಿ ಹಣ ಹಾಕುತ್ತಿದ್ದಾರೆ.
ಅವಳಿನಗರ ಸೇರಿದಂತೆ ಜಿಲ್ಲೆಯಾದ್ಯಂತ ದೊಡ್ಡ ಪ್ರಮಾಣದಲ್ಲಿ ಬೆಟ್ಟಿಂಗ ನಡೆಯುತ್ತಿದೆ. ಟಿಕೆಟ್ ಸಿಗುತ್ತದೆ ಎಂದು ಕಟ್ಟಿದವರಿಗೆ ಒಂದಕ್ಕೆ ಡಬಲ್ ಮೊತ್ತ ಸಂದಾಯವಾಗಲಿದ್ದು ಎರಡು, ಐದು, ಹತ್ತು ಲಕ್ಷ ಅಲ್ಲದೇ ಇಪ್ಪತ್ತೈದು ಲಕ್ಷದವರೆಗೂ ಹಣ ಜೋಶಿಯವರ ಟಿಕೆಟ್ ಕುರಿತಾಗಿ ಬೆಟ್ಟಿಂಗ ಕಟ್ಟುತ್ತಿದ್ದಾರೆ. ಟಿಕೆಟ್ ಖಚಿತ ಎಂದು ಐದು ಲಕ್ಷ ಕಟ್ಟಿದವರಿಗೆ 10 ಲಕ್ಷ ದೊರೆಯಲಿದೆ.