ಅಧ್ಯಕ್ಷರಿಗೆ ನಿಖಿಲ ಬೂಸದ, ವೀರಣ್ಣ ಸವಡಿ ಹಾಗೂ ಸದಸ್ಯರಿಂದ ಸನ್ಮಾನ
ಹುಬ್ಬಳ್ಳಿ: ಕೆಎಸ್‌ಸಿಎ ಧಾರವಾಡ ವಲಯ ಸಂಚಾಲಕ ನಿಖಿಲ ಭೂಸದ ಹಾಗೂ ಚೇರ್ಮನ್ ವೀರಣ್ಣ ಸವಡಿಗೆ ಧಾರವಾಡದ ವಲಯದಲ್ಲಿ ಕ್ರಿಕೆಟ್‌ಗೆ ಸಂಬಂಧಪಟ್ಟ ಯಾವುದೇ ನಿರ್ಧಾರ ತೆಗೆದುಕೊಂಡರು ಅದಕ್ಕೆ ತಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ನೂತನ ಅಧ್ಯಕ್ಷ ರಘುರಾಮ್ ಭಟ್ ಹೇಳಿದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿ ಪ್ರಥಮ ಬಾರಿಗೆ ಗುರುವಾರ ನಗರಕ್ಕೆ ಬಂದಿದ್ದ ಅವರು ’ಸಂಜೆ ದರ್ಪಣ’ ದೊಂದಿಗೆ ಮಾತನಾಡಿ, 2021ರಿಂದ ಇಲ್ಲಿಯವರೆಗೆ ಪ್ರಥಮ ವಲಯದ ಪಂದ್ಯಗಳ ಟಿಎ ಹಾಗೂ ಡಿಎಯನ್ನು ಶೀಘ್ರವಾಗಿ ಬಿಡುಗಡೆ ಮಾಡಲಾಗುವುದು. ಅಲ್ಲದೇ ವಾರದೊಳಗೆ ವಲಯದ ಎಲ್ಲ ಕಮಿಟಿ ಮಾಡಲು ಸೂಚನೆ ನೀಡಲಾಗಿದೆ. ಅಲ್ಲದೇ ಇಲ್ಲಿಯ ಕಟ್ಟಡ ಕಾಮಗಾರಿಯನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು. ಈ ಬಾರಿ ಅತಿ ಹೆಚ್ಚು ಪಂದ್ಯಗಳನ್ನು ಉತ್ತರ ಕರ್ನಾಟಕ ಅದರಲ್ಲೂ ಹುಬ್ಬಳ್ಳಿಯಲ್ಲಿ ಆಯೋಜಿಸುತ್ತೇವೆ ಎಂದರು.
ಆಟಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರವನ್ನು ಇಲ್ಲಿಯ ಸಂಚಾಲಕ ಹಾಗೂ ಚೇರ್ಮನ್ ಒಟ್ಟಾಗಿ ತೆಗೆದುಕೊಳ್ಳಬೇಕು. ಸಣ್ಣ ಪುಟ್ಟದ್ದಕ್ಕೆ ರಾಜ್ಯವನ್ನು ಕೇಳುವ ಅವಶ್ಯಕತೆ ಇಲ್ಲ. ಇಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ತಮ್ಮ ಗಮನಕ್ಕೆ ತಂದರೆ ಸಾಕು ಎಂದರು. ಬರುವ ದಿನಗಳಲ್ಲಿ ಉತ್ತರ ಕರ್ನಾಟಕದ ಇತರ ಕ್ಲಬ್‌ಗಳಿಗೆ ಐಎಂ (Institutional mamber) ಸದಸ್ಯತ್ವವನ್ನು ನೀಡಲು ಮುಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ರಾಜ್ಯ ಕ್ರಿಕೆಟ್ ಅನ್ನು ಮತ್ತಷ್ಟು ಬಲಪಡಿಸುವುದು ನಮ್ಮ ಸಮಿತಿ ಉದ್ದೇಶ. 14 ಮತ್ತು 16 ವರ್ಷದೊಳಗಿನ ಪ್ರತಿಭೆಗಳಿಗೆ ಹೆಚ್ಚು ಅವಕಾಶ ಕಲ್ಪಿಸುವುದು. ಅದರಲ್ಲೂ ಗ್ರಾಮಾಂತರ ವಿಭಾಗಗಳಿಗೆ ಹೆಚ್ಚು ಒತ್ತು ನೀಡುತ್ತೇವೆ. ನಾನು ಕೂಡಾ ಅಪ್ಪಟ ಗ್ರಾಮೀಣ ಪ್ರತಿಭೆ ಎಂದರು.
ಈಗಿರುವ ಸೌಲಭ್ಯ ಹಾಗೂ ತರಬೇತಿ ಸೌಕರ್ಯಗಳನ್ನು ಮತ್ತಷ್ಟು ಮೇಲ್ದರ್ಜೆಗೆ ಏರಿಸುವುದು. ಮಹಿಳಾ ಕ್ರಿಕೆಟ್ ಬೆಳವಣಿಗೆಗೂ ವಿಶೇಷ ಆದ್ಯತೆ ನೀಡುತ್ತೇವೆ. ಮಹಿಳೆಯರಿಗೂ ಸಮಾನ ಅವಕಾಶಗಳು ಸಿಗುವಂತಾಗಬೇಕು. ಅವರಿಗೂ ಸಹ ವಲಯ ತಂಡಗಳನ್ನು ಮಾಡಿ ಪಂದ್ಯಗಳನ್ನು ಆಡಿಸಲಾಗುವುದು ಎಂದರು.
ನಾನೂ ಒಬ್ಬ ಕ್ರಿಕೆಟಿಗ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಅನುಭವ ನನಗಿದೆ. ಆದ್ದರಿಂದ ಯಾವುದೇ ಪ್ರತಿಭೆಗೂ ಅನ್ಯಾಯವಾಗದಂತೆ ನೋಡಿಕೊಳ್ಳಲು ಬದ್ಧನಾಗಿದ್ದೇನೆ ಎಂದರು.