ಸಂತೋಷ ಲಾಡ್ ಫೌಂಡೇಶನ್ ಪ್ರಾಯೋಜಕತ್ವದ 3ನೇ ಆವೃತ್ತಿಯ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿ
ಧಾರವಾಡ: ಸಂತೋಷ ಲಾಡ್ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ನಡೆದ ಧಾರವಾಡ ಚಾಂಪಿಯನ್ ಲೀಗ್ (ಡಿಸಿಎಲ್) ಮೂರನೇ ಆವೃತ್ತಿಯಲ್ಲಿ ಇಂಡಿಯನ್ ಆರ್ಮಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಇಲ್ಲಿಯ ಕೆಸಿಡಿ ಮೈದಾನದಲ್ಲಿ ಭಾನುವಾರ ಸಂಜೆ ನಡೆದ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ಇಂಡಿಯನ್ ಆರ್ಮಿ ತಂಡ ಹೆಗಡೆ ಲೈನ್ಸ್ ತಂಡದ ವಿರುದ್ಧ 34 ರನ್‌ಗಳಿಂದ ಜಯ ಗಳಿಸಿತು.
ಟಾಸ್ ಗೆದ್ದು ಹೆಗಡೆ ಲೈನ್ಸ್ ಫಿಲ್ಡಿಂಗ್ ಆಯ್ಕೆ ಮಾಡಿತು. ಮೊದಲು ಬ್ಯಾಟ ಮಾಡಿದ ಇಂಡಿಯನ್ ಆರ್ಮಿ ತಂಡ 8 ಓವರ್‌ನಲ್ಲಿ 2ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿತು. ತಂಡದ ಪರ ಅರ್ಜುನ್ ಬೋಸಲೆ 38 (22ಎ, 6×3, 4×3), ಯು.ವಿನಾಯಕ 36(24ಎ, 4×3, 6×2), ಡೊಮಿನಿಕ್ ಫರ್ನಾಂಡಿಸ್ 16(10ಎ, 6×2) ರನ್ ಗಳಿಸಿದರು. ಈ ಮೊತ್ತ ಬೆನ್ನು ಹತ್ತಿದ ಹೆಗಡೆ ಲೈನ್ಸ್ ತಂಡ ೮ಓವರ್‌ನಲ್ಲಿ 5ವಿಕೆಟ್ ಕಳೆದುಕೊಂಡು 55ರನ್ ತನ್ನ ಹೋರಾಟ ಅಂತಿಮಗೊಳಿಸಿತು.
ವಿಜೇತ ಇಂಡಿಯನ್ ಆರ್ಮಿ ತಂಡಕ್ಕೆ ಬಿಆರ್‌ಆರ್ ಕನ್ಸ್‌ಟ್ರಕ್ಸನ್ಸ್ ಮಾಲೀಕ ರಾಘವರೆಡ್ಡಿ 1,33,333ರೂ ನಗದು ಬಹುಮಾನ ವಿತರಿಸಿದರು. ರನ್ ಅಪ್ ಆದ ಹೆಗಡೆ ಲೈನ್ಸ್ ತಂಡಕ್ಕೆ ಸಿದ್ದಿ ಟ್ರೆಡರ್‍ಸ್ ಮಾಲೀಕ ಈಶ್ವರಲಾಲ್ ಅಗ್ನಿಹೊತ್ರಿ 77,777 ರೂ ನಗದು ನೀಡಿದರು.
ಡೊಮಿನಿಕ್ ಫರ್ನಾಂಡಿಸ್ ಸರಣಿ ಶ್ರೇಷ್ಟ, ಉತ್ತಮ ಬ್ಯಾಟ್ಸಮನ್ ಅರ್ಜುನ ಬೋಸಲೆ, ಉತ್ತಮ ಬಾಲರ್ ಹನುಮಂತ ಮಂಗಲಿ ಅವರಿಗೆ ಮಯೂರ ಮೋರೆ ಫೌಂಡೇಶನ್ ಮುಖ್ಯಸ್ಥ ಮಯೂರ ಮೋರೆ ಬಹುಮಾನ ವಿತರಿಸಿದರು. ಸುಮಾರು 8 ತಂಡಗಳು ಭಾಗವಹಿಸಿದ್ದವು. ಒಟ್ಟು 32 ಪಂದ್ಯಗಳು ನಡೆದವು.
ಸಂತೋಷ ಲಾಡ್ ಫೌಂಡೇಶನ್ ಅಧ್ಯಕ್ಷ ಆನಂದ ಕಲಾಲ, ಕಾಂಗ್ರೆಸ್ ಮುಖಂಡ ಶರಣಪ್ಪ ಕೊಟಗಿ, ಬಸವೇಶ್ವರ ರೂರಲ್ ಎಜ್ಯುಕೇಶನ್ ಮತ್ತು ಡೆವಲಪಮೆಂಟ್ ಟ್ರಸ್ಟ್‌ನ ನಾಗರಾಜ ಕೊಟಗಿ, ಪ್ರಶಾಂತ ಕೇಕರೆ, ಸಲೀಮ್ ಮುಲ್ಲಾನವರ, ಸಿ.ಎಸ್.ಪಾಟೀಲ, ಹೆಗಡೆ ಲೈನ್ಸ್ ತಂಡದ ಮಾಲೀಕ ಗಿರೀಶ ಹೆಗಡೆ, ಚೀನಿ ಬಸು ಸೇರಿದಂತೆ ಸಾವಿರಾರು ಪ್ರೇಕ್ಷಕರು ಇದ್ದರು.