* 17 ವರ್ಷದ ನಂತರ ಧಾರವಾಡದಲ್ಲಿ ಪಂದ್ಯಾವಳಿ
* ಆತಿಥ್ಯಕ್ಕೆ ಡಿಡಿಎಲ್‌ಟಿಎಸ್ ಪೂರ್ವಸಿದ್ಧತೆ
* 20 ಲಕ್ಷ ರೂ. ಮೌಲ್ಯದ ಪ್ರಶಸ್ತಿ
* ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ
* ನೂತನ ಸದಸ್ಯತ್ವಕ್ಕೆ ಶೇ 25 ರಿಯಾಯಿತಿ
ಧಾರವಾಡ: ಬರುವ ಅಕ್ಟೋಬರ್ 15 ರಿಂದ 22ರವರೆಗೆ ಧಾರವಾಡದಲ್ಲಿ ಅಂತರರಾಷ್ಟ್ರೀಯ ಲಾನ್ ಟೆನಿಸ್ ಟೂರ್ನಿ ಜರುಗಲಿದ್ದು, ಧಾರವಾಡ ಜಿಲ್ಲಾ ಲಾನ್ ಟೆನಿಸ್ ಸಂಸ್ಥೆ ಈ ಪಂದ್ಯಾವಳಿಯ ಆತಿಥ್ಯ ನೀಡಲಿದೆ. ಪಂದ್ಯ ವೀಕ್ಷಿಸಿ, ಪ್ರೇರಣೆಗಾಗಿ ಉತ್ತರ ಕರ್ನಾಟಕದ ಯುವ ಕ್ರೀಡಾ ಪ್ರತಿಭೆಗಳಿಗೆ ಇದೊಂದು ಉತ್ತಮ ಅವಕಾಶವಾಗಲಿದೆ ಎಂದು ಧಾರವಾಡ ಜಿಲ್ಲಾ ಲಾನ್ ಟೆನಿಸ್ ಸಂಸ್ಥೆಯ ಅಧ್ಯಕ್ಷರು ಆದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಶುಕ್ರವಾರ ನಗರದ ಜಿಲ್ಲಾ ಲಾನ್ ಟೆನಿಸ್ ಕ್ರೀಡಾಂಗಣ ಆವರಣದಲ್ಲಿ ಮಾಧ್ಯಮ ಪ್ರತಿನಿಗಳೊಂದಿಗೆ ಮಾತನಾಡಿ, ಅಂತಾರಾಷ್ಟ್ರೀಯ ಟೊರ್ನಾಮೆಂಟ್ ಬಗ್ಗೆ ವಿವರಿಸಿದರು.
ಧಾರವಾಡ ಜಿಲ್ಲಾ ಲಾನ್ ಟೆನಿಸ್ ಕೋರ್ಟ್, ಬ್ರಿಟಿಷ್ ಅಧಿಕಾರಿಗಳ ಅವಧಿಯಿಂದಲೂ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಈಗ 17 ವರ್ಷಗಳ ನಂತರ ಧಾರವಾಡದಲ್ಲಿ ಮತ್ತೊಮ್ಮೆ ಅಂತರರಾಷ್ಟ್ರೀಯ ಲಾನ್ ಟೆನಿಸ್ ಪಂದ್ಯಾವಳಿ ಆಯೋಜಿಸುವ ಅವಕಾಶ ಸಿಕ್ಕಿದೆ. ಸುಮಾರು 25 ಸಾವಿರ ಡಾಲರ್ (20 ಲಕ್ಷ ರೂ.) ಮೊತ್ತದ ಪ್ರಶಸ್ತಿ ಹಣ ಈ ಪಂದ್ಯಾವಳಿಯದಾಗಿದೆ ಎಂದು ಅವರು ಹೇಳಿದರು.
ಲಾನ್ ಟೆನಿಸ್ ತರಬೇತಿಗೆ ಉತ್ತಮ ತರಬೇತುದಾರರ ಸೌಲಭ್ಯವಿದೆ. ಮಕ್ಕಳಲ್ಲಿ ಲಾನ್ ಟೆನಿಸ್ ಆಸಕ್ತಿ ಬೆಳೆಸಿ, ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಅಂತಾರಾಷ್ಟ್ರೀಯ ಪಂದ್ಯಾವಳಿ ನಡೆಯುವ ಸಮಯದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಯುವಕರಿಗೆ ಉಚಿತ ಪ್ರವೇಶ ನೀಡಲಾಗುವುದು. ಕ್ರೀಡಾ ಪರಿಕರಗಳ ಮಾರಾಟ ಮತ್ತು ಮಾಹಿತಿಗಾಗಿ ತೆರೆಯುವ ಮಳಿಗೆಗಳಿಗೆ ಅವಕಾಶ ನೀಡಲಾಗುವುದು. ಸ್ಥಳೀಯ ಹೊಟೇಲ್ ಉದ್ಯಮ, ಪ್ರವಾಸೋದ್ಯಮ ಬೆಳವಣಿಗೆಗೆ ಪ್ರೋತ್ಸಾಹಿಸಲಾಗುವುದು ಎಂದು ಅವರು ತಿಳಿಸಿದರು.
ಸದಸ್ಯತ್ವ ಶುಲ್ಕ ವಿನಾಯಿತಿ : ಅಂತಾರಾಷ್ಟ್ರೀಯ ಲಾನ್ ಟೆನಿಸ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಧಾರವಾಡ ಲಾನ್ ಟೆನಿಸ್ ಸಂಸ್ಥೆಯ ಸದಸ್ಯತ್ವ ಶುಲ್ಕವನ್ನು ಶೇ.೨೫ ರಷ್ಟು ವಿನಾಯಿತಿ ನೀಡಿ, ಆಸಕ್ತರಿಗೆ ಸದಸ್ಯತ್ವ ಪಡೆಯಲು ಸೀಮಿತ ಅವಧಿ ನೀಡಲಾಗಿದೆ. ಈಗಾಗಲೇ ಸುಮಾರು ೧೦೦ ಜನ ಸಂಸ್ಥೆಯ ಸದಸ್ಯರಾಗಿದ್ದು, ಆಸಕ್ತರಿಗೆ, ಯುವಕರಿಗೆ ಪ್ರೋತ್ಸಾಹಿಸಲು ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ರಾಜ್ಯದ ಮೊದಲ ಪರಿಸರ ಸ್ನೇಹಿ ಕ್ರೀಡಾಂಗಣ
ಧಾರವಾಡ ಜಿಲ್ಲಾ ಲಾನ್ ಟೆನಿಸ್ ಸಂಸ್ಥೆಯ ಕ್ರೀಡಾಂಗಣವು ಕರ್ನಾಟಕ ರಾಜ್ಯದ ಮೊದಲ ಪರಿಸರ ಸ್ನೇಹಿ ಹಸಿರು ಕ್ರೀಡಾಂಗಣವಾಗಿದೆ.
ಕ್ರೀಡಾಂಗಣದ ಎಲ್ಲ ಕೋರ್ಟಗಳು ಹಸಿರಿನಿಂದ ಕೂಡಿದ್ದು, ನಿರಂತರವಾಗಿ ಸೋಲಾರ ಬೆಳಕು ಪಡೆಯುತ್ತಿವೆ. ಟೆನಿಸ್ ಕೋರ್ಟ್‌ಗಳು, ಪ್ಲಡ್‌ಲೈಟ್, ಕಚೇರಿ, ಕ್ರೀಡಾಂಗಣ ಎಲ್ಲವೂ ಸೋಲಾರ ಬೆಳಕು, ಶಕ್ತಿಯಿಂದ ನಡೆಯುತ್ತಿವೆ. ಟೆನಿಸ್ ಸಂಸ್ಥೆಯ ಕರೆಂಟ್ ಬಿಲ್ ಯಾವಾಗಲೂ ಝಿರೋ ಇದೆ ಎಂದು ಅವರು ತಿಳಿಸಿದರು.
ಅ.2 ರಂದು ನೂತನ ಸೌಲಭ್ಯ ಉದ್ಘಾಟನೆ:
ಧಾರವಾಡ ಜಿಲ್ಲಾ ಲಾನ್ ಟೆನಿಸ್ ಸಂಸ್ಥೆಯ ರಾಜ್ಯಾಧ್ಯಕ್ಷ ಪೆವಿಲಿಯನ್‌ದಲ್ಲಿ ನಿರ್ಮಿಸಿದ ನೂತನ ಸೌಲಭ್ಯಗಳನ್ನು ಅ.2 ರಂದು ಬೆಳಿಗ್ಗೆ 9.30 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಘನ ಉಪಸ್ಥಿತರಿದ್ದು, ಶಾಸಕ ವಿನಯ ಕುಲಕರ್ಣಿ ಮುಖ್ಯ ಅತಿಥಿಗಳಾಗಿದ್ದಾರೆ. ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸುವರು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಸಂದೀಪ ಬಣವಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ನಾಗರಾಜ ಅಂಬಲಿ, ಅಧಿಕಾರಿಗಳಾದ ಇಬ್ರಾಹಿಂ ಮೈಗೂರ, ಡಾ.ಸಂತೋಷ ಬಿರಾದಾರ ಸೇರಿದಂತೆ ಲಾನ್ ಟೆನಿಸ್ ಸಂಸ್ಥೆಯ ಸದಸ್ಯರಿದ್ದರು.