ಹುಬ್ಬಳ್ಳಿ-ಧಾರವಾಡ ಸುದ್ದಿ

ಕೆಎಸ್‌ಸಿಎಯಲ್ಲಿ ಕಳೆಗಟ್ಟಿದ ಕ್ರಿಕೆಟ್ ರಂಗು

19ವರ್ಷದೊಳಗಿನ ತಂಡಕ್ಕೆ ರಾಜಧಾನಿಯ ಪರಿಣಿತರಿಂದ ತರಬೇತಿ!

ಪ್ರಸನ್ನಕುಮಾರ ಹಿರೇಮಠ
ಹುಬ್ಬಳ್ಳಿ: ನಗರದ ಕೆಎಸ್‌ಸಿಎಯಲ್ಲಿ ಕ್ರೀಡಾ ಚಟುವಟಿಕೆ ಚುರುಕುಗೊಂಡಿದೆ. ಮಳೆಯಿಂದಾಗಿ ಸುಮಾರು ತಿಂಗಳಿನಿಂದ ಚಟುವಟಿಕೆ ನಡೆಯದೇ ನಿಂತ ನೀರಾಗಿದ್ದ ಕ್ರಿಕೆಟ್‌ಗೆ ಈಗ ಚಾಲನೆ ಸಿಕ್ಕಂತಾಗಿದೆ.

ಹೌದು ಇಲ್ಲಿಯ ರಾಜನಗರದಲ್ಲಿರುವ ಕೆಎಸ್‌ಸಿಎ ಮೈದಾನದಲ್ಲಿ 19ವರ್ಷದೊಳಗಿನ ಧಾರವಾಡ ವಲಯ ತಂಡಕ್ಕೆ 5 ದಿನದ ಕ್ಯಾಂಪ್ ಆರಂಭವಾಗಿದೆ. ಕೆಎಸ್‌ಸಿಎಗೆ ನೂತನ ತಂಡ ಬಂದ ನಂತರ 14, 16, 19 ವರ್ಷದೊಳಗಿನ ವಲಯ ತಂಡಗಳನ್ನು ಆಯ್ಕೆ ಮಾಡಲಾಯಿತು. ಅಲ್ಲದೇ ತಂಡಗಳು ಸಹ ವಲಯ ಮಟ್ಟದಲ್ಲಿ ಕೆಲವು ವೈಫಲ್ಯಗಳಿದ್ದರೂ ಸಹ ಉತ್ತಮ ಸಾಧನೆ ಮಾಡಿದೆ.

ಅದೇ ರೀತಿ ತಂಡವನ್ನು ಮತ್ತಷ್ಟು ಬಲಪಡಿಸಬೇಕು ಹಾಗೂ ಕ್ರೀಡಾಪಟುಗಳಿಗೆ ಉತ್ತಮ ಕ್ರೀಡಾ ಕೌಶಲಗಳನ್ನು ಕಲಿಸಬೇಕು ಎಂಬ ಮಹತ್ವಕಾಂಕ್ಷಿ ಇಟ್ಟುಕೊಂಡು ಕೆಎಸ್‌ಸಿಎ ಕ್ಯಾಂಪ್‌ಗಳನ್ನು ಆರಂಭಿಸಿದೆ. ಅದರ ಮೊದಲ ಹೆಜ್ಜೆಯಾಗಿ ಧಾರವಾಡ ವಲಯದಲ್ಲಿ ಕೂಡಾ ಬೆಂಗಳೂರಿನಿಂದ ಬಂದಿರುವ ಕೆಎಸ್‌ಸಿಎ ಹಿರಿಯ ತರಬೇತುದಾರ ರಾಜೇಶ ಕಾಮತ ಹಾಗೂ ತರಬೇತುದಾರ ಕಿರಣ ಕ್ಯಾಂಪ್‌ನಲ್ಲಿ ಹಲವು ಕೌಶಲ ಕಲಿಸಲು ಆರಂಭಿಸಿದ್ದಾರೆ. ಇಲ್ಲಿ ಸುಮಾರು 20ಕ್ರೀಡಾಪಟುಗಳಿಗೆ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಅಲ್ಲದೇ ಪಂದ್ಯಗಳಲ್ಲಿ ಮಾನಸಿಕ ಸಮತೋಲನದ ಬಗ್ಗೆ ಸೇರಿದಂತೆ ಹಲವು ಕೌಶಲ ತಿಳಿಸಲು ಆರಂಭಿಸಲಾಗಿದೆ ಎಂದು ರಾಜೇಶ ಕಾಮತ ತಿಳಿಸಿದರು.

ಪೋಷಕರಿಂದಲೂ ಉತ್ತಮ ಪ್ರತಿಕ್ರಿಯೆ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಿಂದ ಸ್ಫೂರ್ತಿ ಪಡೆದಿರುವ ಪೋಷಕರೂ ಮಕ್ಕಳಿಗೆ ಕ್ರಿಕೆಟ್ ತರಬೇತಿ ಕೊಡಿಸಲು ಉತ್ಸುಕರಾಗಿದ್ದಾರೆ. ಮಕ್ಕಳನ್ನು ಕ್ಯಾಂಪ್‌ಗೆ ಸೇರಿಸಲು ಆಸಕ್ತರಾಗಿದ್ದು, ಬೆಂಗಳೂರಿನಿಂದ ಬಂದಿರುವ ತರಬೇತುದಾರರೂ ಇದಕ್ಕೆ ಪ್ರೋತ್ಸಾಹದ ನೀರು ಎರೆಯುತ್ತಿದ್ದಾರೆ.

ತರಬೇತಿಯಲ್ಲಿ ವಿಡಿಯೋ ಅನಾಲಿಸಿಸ್

ಕಳೆದ ಪಂದ್ಯಗಳಲ್ಲಿ ಕಡಿಮೆ ರನ್ ಏಕೆ ಬಂತು? ಅದಕ್ಕೆ ಯಾವ ರೀತಿ ಸಿದ್ಧತೆ ಮಾಡಬೇಕು ಎಂಬುದರ ಬಗ್ಗೆ ಕ್ಯಾಂಪ್‌ನಲ್ಲಿ ತಿಳಿಸುತ್ತೇವೆ. ಈ ಐದು ದಿನದ ನಂತರ ವಾರಕ್ಕೆ ಎರಡು ದಿನ ಕ್ಯಾಂಪ್ ಮಾಡುವ ಯೋಜನೆ ಇದೆ. ಅದೇ ರೀತಿ 16 ವರ್ಷದೊಳಗಿನ ತಂಡಕ್ಕೆ ಕೂಡಾ ಈ ರೀತಿ ಕ್ಯಾಂಪ್ ಆಯೋಜಿಸಲಾಗುವುದು. ಇದರಿಂದ ಮುಂದೆ ಬರುವ ಪಂದ್ಯಗಳಲ್ಲಿ ತಂಡದ ಗೆಲುವಿಗೆ ಸಹಕಾರಿ ಆಗಲಿದೆ ಎಂದು ರಾಜೇಶ ಕಾಮತ ’ಸಂಜೆ ದರ್ಪಣ’ಕ್ಕೆ ಕ್ಯಾಂಪ್ ಕುರಿತು ಮಾಹಿತಿ ನೀಡಿದರು. ತಮ್ಮೊಂದಿಗೆ ಬೆಂಗಳೂರಿನಿಂದ ಬಂದಿರುವ ಕಿರಣ ಹಾಗೂ ಧಾರವಾಡದ ಶಿವಾಜಿ ವಡ್ಡರ ಕೂಡಾ ಸಾಥ ನೀಡುತ್ತಿದ್ದಾರೆ ಎಂದು ತಿಳಿಸಿದರು.

 

ಕೆಎಸ್‌ಸಿಎನಿಂದ ರಾಜ್ಯದ ಎಲ್ಲ ವಲಯದಲ್ಲಿ ಈ ರೀತಿ ಕ್ಯಾಂಪ್ ಆರಂಭವಾಗಿದೆ. ಅದೇ ರೀತಿ ಮೊದಲನೇಯದಾಗಿ 19ವರ್ಷದೊಳಗಿನ ತಂಡಕ್ಕೆ ನಮ್ಮ ವಲಯದಲ್ಲಿ ಕೂಡ ಕ್ಯಾಂಪ್ ಆರಂಭವಾಗಿದೆ. ಇದರಿಂದ ಇಲ್ಲಿಯ ಕ್ರೀಡಾಪಟುಗಳಿಗೆ ಅತ್ಯುತ್ತಮ ಆಟವಾಡಲು ಸಹಾಯವಾಗಲಿದೆ.

 

ನಿಖಿಲ ಬೂಸದ, ವಲಯ ನಿಮಂತ್ರಕ

ಈ ಹಿಂದೆಯೂ ವಲಯ ತಂಡಗಳಿಗೆ ಈ ರೀತಿ ಕ್ಯಾಂಪ್ ಆಯೋಜನೆ ಮಾಡಲಾಗಿತ್ತು. ಈ ಬಾರಿಯೂ ಆರಂಭಗೊಂಡಿರುವುದರಿಂದ ಮುಂಬರುವ ಪಂದ್ಯಗಳಲ್ಲಿ ಉತ್ತಮ ಸಾಧನೆ ಮಾಡಲು ಕ್ರೀಡಾಪಟುಗಳಿಗೆ ಸಹಕಾರಿ ಆಗಲಿದೆ.

 

ವೀರಣ್ಣ ಸವಡಿ, ಕೆಎಸ್‌ಸಿಎ ಚೇರಮನ್

 

 

administrator

Related Articles

Leave a Reply

Your email address will not be published. Required fields are marked *