ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಉದ್ಯಮಿ ವಿಜಯಕುಮಾರ ಶೆಟ್ಟರ್ ಹಾಗೂ ಅವರ ಪುತ್ರ ನಿಖಿಲ ಶೆಟ್ಟರ್ ಅವರು ಹುಬ್ಬಳ್ಳಿಯ ನವನಗರದ ಕರ್ನಾಟಕ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆಗೆ (ಕೆಸಿಟಿಆರ್‌ಐ) ೫೫,೫೫,೫೫೫ ರೂಪಾಯಿ ವಂತಿಗೆಯನ್ನು ನೀಡಿ ಮಾನವೀಯ ಸೇವೆಗೆ ಹೊಸ ಮುನ್ನುಡಿ ಬರೆದರು.
ವಿಜಯ ಶೆಟ್ಟರ್ ಪರಿವಾರದವರು ನೀಡಿದ ದೇಣಿಗೆಯ ಚೆಕ್ ಅನ್ನು ಇಂದು ಸ್ವೀಕರಿಸಿ ಮಾತನಾಡಿದ ಆಡಳಿತ ಮಂಡಳಿ ಚೇರ್ಮನ್ ಡಾ.ಬಿ.ಆರ್. ಪಾಟೀಲ, ನಮ್ಮ ಸಂಸ್ಥೆಗೆ ಸೇರಿದ ಪದ್ಮಶ್ರೀ ಡಾ. ಆರ್.ಬಿ. ಪಾಟೀಲ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಹೊರರೋಗಿಗಳ ವಿಭಾಗದ (ಒಪಿಡಿ) ಕಟ್ಟಡ ನಿರ್ಮಿಸಲು ಈ ದೇಣಿಗೆಯನ್ನು ಸದ್ವಿನಿಯೋಗ ಮಾಡಿಕೊಳ್ಳಲಾಗುವುದು ಎಂದರು.
ಈಚಿನ ದಿನಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ವರ್ಧಿಸುತ್ತಿದೆ. ಉತ್ತರ ಕರ್ನಾಟಕ ಭಾಗವನ್ನು ಕ್ಯಾನ್ಸರ್ ಮುಕ್ತಗೊಳಿಸಲು ನಮ್ಮ ಸಂಸ್ಥೆ ಶ್ರಮಿಸುತ್ತಿದೆ. ಈ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಸಾಕಷ್ಟು ಕೊಡುಗೈ ದಾನಿಗಳು ಕೈಜೋಡಿಸುತ್ತಿ ದ್ದಾರೆ. ಶೆಟ್ಟರ್ ಪರಿವಾರದ ನೆರವನ್ನು ಬಳಸಿಕೊಂಡು, ಆಸ್ಪತ್ರೆಯಲ್ಲಿ ಒಪಿಡಿ ಕಟ್ಟಡವನ್ನು ಒಂದು ವರ್ಷದ ಒಳಗಾಗಿ ಪೂರ್ಣಗೊಳಿಸುತ್ತೇವೆ ಎಂದರು.
`ಡಾ.ಆರ್.ಬಿ. ಪಾಟೀಲ ಅವರು ಕಂಡ ಕನಸು ನನಸಾಗುತ್ತಿದೆ. ನವನಗರದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಡ ಕ್ಯಾನ್ಸರ್ ರೋಗಿಗಳು ಗುಣವಾಗಿ ದ್ದಾರೆ. ವಿಜಯಕುಮಾರ ಶೆಟ್ಟರ್ ಅವರು ದೇಣಿಗೆ ನೀಡಿದ್ದರಿಂದ ಆಸ್ಪತ್ರೆ ಬೆಳೆಯಲು ಮತ್ತಷ್ಟು ಅನುಕೂಲವಾಗಲಿದೆ’ ಎಂದು ಆಡಳಿತ ಮಂಡಳಿ ಸದಸ್ಯ ಮಹೇಂದ್ರ ಸಿಂಘಿ ಹೇಳಿದರು.
ವಿಜಯಕುಮಾರ ಶೆಟ್ಟರ್ ಹಾಗೂ ಅವರ ಪುತ್ರ ನಿಖಿಲ ಶೆಟ್ಟರ್ ಅವರನ್ನು ಕೆಸಿಟಿಆರ್‌ಐ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಿದರು.
ಕೆಸಿಟಿಆರ್‌ಐ ಆಡಳಿತ ಮಂಡಳಿ ಕಾರ್ಯದರ್ಶಿ ಡಾ. ಎಸ್.ವಿ. ಬೆಂಬಳಗಿ, ಜಂಟಿ ಕಾರ್ಯದರ್ಶಿ ದೀಪಕ್ ಷಾ, ಸದಸ್ಯರಾದ ಡಾ. ಎಸ್.ಎಸ್. ಹಿರೇಮಠ, ಡಾ. ವಿ.ಜಿ. ಯಳಮಲಿ, ಪ್ರಕಾಶ ಹಿರೇಮಠ, ಉದಯ ಇಟಗಿ, ಆಡಳಿತಾಧಿಕಾರಿ ಡಾ. ಮಂಜುಳಾ ಹುಗ್ಗಿ ಇದ್ದರು.
ಉತ್ತರ ಕರ್ನಾಟಕದಲ್ಲಿ ನವನಗರ ಕ್ಯಾನ್ಸರ್ ಆಸ್ಪತ್ರೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಎಸ್.ಸಿ. ಶೆಟ್ಟರ್ ಅವರ ಹೆಸರಿನಲ್ಲಿ ಬ್ಲಾಕ್‌ವೊಂದನ್ನು ತೆರೆಯಲು ಎರಡು ವರ್ಷದ ಹಿಂದೆ ೨೫ ಲಕ್ಷ ರೂ. ದೇಣಿಗೆ ನೀಡಿದ್ದೇವೆ. ಈ ಹಣ ಸದ್ಬಳಕೆಯಾಗಿದೆ ಎಂದು ನಮಗೆ ಮನವರಿಕೆಯಾಗಿದೆ. ಹೀಗಾಗಿ, ಈಗ ಒಪಿಡಿ ಬ್ಲಾಕ್ ತೆರೆಯಲು ನೆರವು ನೀಡುತ್ತಿದ್ದೇವೆ.
– ಉದ್ಯಮಿ ವಿಜಯಕುಮಾರ ಶೆಟ್ಟರ್