ಧಾರವಾಡ: ಸ್ಟೌವ್ ರಿಪೇರಿ, ಹಣ್ಣಿನ ವ್ಯಾಪಾರದ ಅಂಗಡಿಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿಗಳಷ್ಟು ಹಾನಿಯಾದ ಘಟನೆ ಇಲ್ಲಿನ ಸೂಪರ್ ಮಾರ್ಕೆಟ್‌ನಲ್ಲಿಂದು ಬೆಳಗಿನ ಜಾವ 3.30 ಸುಮಾರಿಗೆ ಸಂಭವಿಸಿದೆ.
ಅಬ್ರಾರ್ ಬ್ಯಾಳಿ ಮತ್ತು ನಿಸ್ಸಾರ ಅಹ್ಮದ ಪನ್ನಳ್ಳಿ ಎಂಬುವರ ಹಣ್ಣಿನ ಅಂಗಡಿ ಹಾಗೂ ಮಹ್ಮದಅಲಿ ಟಿನ್‌ವಾಲೆ ಎಂಬುವರ ಸ್ಟೌವ್ ರಿಪೇರಿ ಅಂಗಡಿ ಬೆಂಕಿಗೆ ಆಹುತಿಯಾಗಿವೆ.
ಬೆಳಗಿನ ಜಾವ 3.30 ಸುಮಾರಿಗೆ ಬೆಂಕಿ ಹತ್ತಿಕೊಂಡಿದ್ದು, ಪಕ್ಕದ ಅಂಗಡಿಯಲ್ಲಿ ಮಲಗಿದ್ದವರಿಗೆ ವಿಷಯ ಗೊತ್ತಾಗಿದೆ. ನಂತರ ಶಹರ ಠಾಣೆಯ ಎಎಸ್‌ಐ ಆರ್.ಎಚ್.ನದಾಫ್ ಮತ್ತು ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ.
ಬಳಿಕ ಅಗ್ನಿಶಾಮಕ ದಳ ವಾಹನ ಕರೆಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೆ, ಅಷ್ಟರೊಳಗೆ ಹಣ್ಣು, ಸ್ಟೌವ್ ರಿಪೇರಿ ಸಾಮಗ್ರಿ ಮತ್ತಿತರ ಸುಮಾರು 2 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ಘಟನಾ ಸ್ಥಳಕ್ಕೆ ಪಾಲಿಕೆ ಸದಸ್ಯ ಶಂಭುಗೌಡ ಸಾಲಮನಿ, ಪಾಲಿಕೆ, ಕಂದಾಯ ಮತ್ತು ಪೊಲೀಸ ಅಧಿಕಾರಿಗಳು ಭೇಟಿ ನೀಡಿದ್ದರು. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.