ಒಬ್ಬ ತಂದೆ ತನ್ನ ಮಗುವಿನ ಭವಿಷ್ಯವನ್ನು ರೂಪಿಸುವಲ್ಲಿ ತನ್ನ ಇಡೀ ಜೀವನವನ್ನು ಕಳೆಯುತ್ತಾನೆ. ಅವರನ್ನು ಗೌರವಿಸುವ ಸಲುವಾಗಿ ಪ್ರತಿವರ್ಷ ಜೂನ್ ಮೂರನೇ ಭಾನುವಾರದಂದು ಅಪ್ಪಂದಿರ ದಿನವನ್ನಾಗಿ ಆಚರಿಸಲಾಗುತ್ತದೆ.
ಜೂನ್ 19, 1910 ರಂದು ಅಮೆರಿಕದ ವಾಷಿಂಗ್ಟನ್‌ನಲ್ಲಿ ಮೊದಲ ಬಾರಿಗೆ ತಂದೆಯ ದಿನ ಆಚರಿಸಲಾಯಿತು. ತದನಂತರ ದಿನಗಳಲ್ಲಿ ಪ್ರತಿ ವರ್ಷ ಈ ದಿನವನ್ನು ಆಚರಿಸುತ್ತಾ ಬಂದಿದ್ದೇವೆ.
ಅಪ್ಪ ಅಂದರೆ ಕೇವಲ ಜೀವ ಕೊಟ್ಟವನಲ್ಲ. ಬದುಕು ರೂಪಿಸಿದವ. ಜೀವನದ ದಾರಿ ತೋರಿಸಿದವ. ಅಪ್ಪ-ಅವ್ವ ಇಬ್ಬರೂ ಒಂದು ವ್ಯಕ್ತಿಯ ಕಣ್ಣುಗಳಿದ್ದ ಹಾಗೆ. ಇಬ್ಬರನ್ನೂ ಹೋಲಿಸಲಾಗುವುದಿಲ್ಲ. ತಂದೆ ಅಂದರೆ ಸರಳತೆಯ ಹರಿಕಾರ. ಜಗಕ್ಕೆಲ್ಲಾ ಅವನೊಬ್ಬ ಅಧಿಕಾರಿಯಾಗಿರಬಹುದು, ರಾಜಕಾರಣಿಯಾಗಿರಬಹುದು, ವೈದ್ಯನಾಗಿರಬಹುದು, ಶಿಕ್ಷಕನಾಗಿರಬಹುದು, ಏನೇ ಆಗಿದ್ದರೂ ತನ್ನ ಮಗುವಿಗೆ ಒಬ್ಬ ತಂದೆ, ನಿಜ ನಾಯಕ, ದೇವರು, ಒಬ್ಬ ಒಳ್ಳೆಯ ಗೆಳೆಯ. ಅಂತಹ ತಂದೆಯ ಕುರಿತು ಮಕ್ಕಳು ಹೊಂದಿರುವ ನಿಜ ಪ್ರೀತಿ ಹೀಗಿರಬಹುದೇನೊ.
ಅಂಗಡಿಯಲ್ಲಿ ದೇವರು ಸಿಗಬಹುದೇ? ಐದು ವರ್ಷದ ಹುಡುಗನೊಬ್ಬ ಕೈಯಲ್ಲಿ ಒಂದು ರೂಪಾಯಿ ಹಿಡಿದುಕೊಂಡು ಕಿರಾಣಿ ಅಂಗಡಿಗೆ ಹೋಗಿ ನಿಂತ. ಅಂಗಡಿಯವನು ಹುಡುಗನನ್ನು ಕೇಳಿದ “ಮಗು ನಿನಗೆ ಏನು ಬೇಕು?” ಹುಡುಗ ಅಂಗಡಿಯವನನ್ನು “ನಿಮ್ಮ ಅಂಗಡಿಯಲ್ಲಿ ದೇವರು ಸಿಗಬಹುದೇ?” ಇದನ್ನು ಕೇಳಿದ ಅಂಗಡಿಯವನು ಕೋಪಗೊಂಡು ಹುಡುಗನನ್ನು ಜೋರಾಗಿ ಕೂಗಿ ಬೈದು, ಆ ಹುಡುಗನನ್ನು ಅಂಗಡಿಯಿಂದ ಹೊರಗೆ ಓಡಿಸಿದನು. ಹುಡುಗ ಹೀಗೇ ಸುಮಾರು 30-40 ಅಂಗಡಿ ಸುತ್ತಿ ತುಂಬಾ ಪ್ರಯತ್ನ ಮಾಡಿದನು.
ಪ್ರತಿ ಅಂಗಡಿಗೆ ಹೋಗಿ, “ನಿಮ್ಮ ಅಂಗಡಿಯಲ್ಲಿ ದೇವರು ಸಿಗಬಹುದೇ?” ಎಂದು ಕೇಳುತ್ತಿದ್ದ. ಒಂದು ಅಂಗಡಿಯಲ್ಲಿ ಒಬ್ಬ ತುಂಬಾ ವಯಸ್ಸಾದ ಅಜ್ಜ ಕೂತಿದ್ದ, ಅವನನ್ನು ನೋಡಿ ಈ ಪುಟ್ಟ ಹುಡುಗ ಕೇಳಿದ, “ಅಜ್ಜಾ, ನಿನ್ನ ಅಂಗಡಿಯಲ್ಲಿ ದೇವರು ಸಿಗುತ್ತಾನೆಯೇ?”.
“ನಿನ್ನ ಬಳಿ ಎಷ್ಟು ಹಣವಿದೆ” ಎಂದು ಆ ಅಜ್ಜ ಮಗುವನ್ನು ಕೇಳಿದರು. “ನನ್ನ ಬಳಿ ಒಂದು ರೂಪಾಯಿ ಇದೆ” ಎಂದು ಹುಡುಗ ಹೇಳಿದ. ಮಗುವನ್ನು ಹತ್ತಿರಕ್ಕೆ ಕರೆದು ಕೇಳಿದರು, “ದೇವರು ನಿನಗೆ ಏಕೆ ಬೇಕು ಮಗು? ದೇವರನ್ನು ಖರೀದಿಸಿ ಏನು ಮಾಡುತ್ತೀ?” ಪ್ರಶ್ನೆ ಕೇಳಿದ ನಂತರ ಮಗುವಿಗೆ ತುಂಬಾ ಸಂತೋಷವಾಯಿತು. ಈ ರೀತಿಯಲ್ಲಿ ಕೇಳುತ್ತಿದ್ದಾರೆಂದರೆ, ಈ ಅಜ್ಜನವರ ಅಂಗಡಿಯಲ್ಲಿ ಖಂಡಿತವಾಗಿಯೂ ದೇವರು ಇದ್ದಾನೆ ಎಂದು ತಿಳಿದುಕೊಂಡು, ಆ ಅಜ್ಜನಿಗೆ ಹೇಳುತ್ತಾನೆ, “ನನ್ನ ತಂದೆಯ ಬಿಟ್ಟು ಯಾರೂ ಇಲ್ಲ. ನಿತ್ಯ ನನ್ನ ತಂದೆ ಕೆಲಸಕ್ಕೆ ಹೋಗುತ್ತಾರೆ. ಊಟ ತರುತ್ತಾರೆ. ಆದರೆ ನಿನ್ನೆಯಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಳೆ ನನ್ನ ತಂದೆಗೆ, ನನಗೆ ಯಾರು ಊಟ ಕೊಡುತ್ತಾರೆ? ದೇವರು ಮಾತ್ರ ನಿನ್ನ ತಂದೆ ರಕ್ಷಿಸಬಲ್ಲನು ಎಂದು ವೈದ್ಯರು ಹೇಳಿದ್ದಾರೆ.
ಆದ್ದರಿಂದ ನಾನು ದೇವರನ್ನು ಹುಡುಕುತ್ತಿದ್ದೇನೆ. ನಿಮ್ಮ ಅಂಗಡಿಗಳಲ್ಲಿ ದೇವರಿದ್ದಾನೆಯೇ?”
“ನಿನ್ನ ಬಳಿ ಎಷ್ಟು ಹಣವಿದೆ” ಎಂದು ಅಂಗಡಿಯವನು ಹುಡುಗನನ್ನು ಕೇಳಿದನು. “ಕೇವಲ ಒಂದು ರೂಪಾಯಿ ಅಜ್ಜಾ” ಎಂದ. “ಸರಿ, ಚಿಂತಿಸಬೇಡ.
ಒಂದು ರೂಪಾಯಿಯಲ್ಲೂ ದೇವರು ಸಂಧಿಸುತ್ತಾನೆ”! ಒಂದು ರೂಪಾಯಿಯನ್ನು ತೆಗೆದುಕೊಂಡು ಒಂದು ಲೋಟ ನೀರನ್ನು ಹುಡುಗನ ಕೈಗೆ ಕೊಟ್ಟು ಈ ನೀರನ್ನು ತೆಗೆದುಕೊಂಡು ನಿನ್ನ ತಂದೆಗೆ ಕುಡಿಯಲು ಕೊಡು” ಎಂದನು.
ಮರುದಿನ ತಜ್ಞ ವೈದ್ಯರು ಆಸ್ಪತ್ರೆಗೆ ಬಂದು ತಂದೆಗೆ ಶಸ್ತ್ರಚಿಕಿತ್ಸೆ ಮಾಡಿದರು. ಕೆಲವೇ ದಿನಗಳಲ್ಲಿ ಅವನು ಗುಣಮುಖನಾದನು. ಡಿಸ್ಚಾರ್ಜ್ ಆದ ದಿನ ಆಸ್ಪತ್ರೆಯ ಬಿಲ್ ನೋಡಿದ ವ್ಯಕ್ತಿಗೆ ತಲೆ ಸುತ್ತು! ಆದರೆ ವೈದ್ಯರು ಧೈರ್ಯ ತುಂಬಿದರು. ಚಿಂತಿಸಬೇಡ ವಯಸ್ಸಾದ ವ್ಯಕ್ತಿಯೊಬ್ಬರು ಇಷ್ಟೆಲ್ಲ ಬಿಲ್ ಪಾವತಿಸಿ ಅದರ ಜೊತೆಗೆ ಒಂದು ಚೀಟಿ ಕೊಟ್ಟಿದ್ದಾರೆ. ಆ ವ್ಯಕ್ತಿ ಪತ್ರವನ್ನು ತೆರೆದು ಓದಿದಾಗ, “ನನಗೆ ಧನ್ಯವಾದಗಳನ್ನು ಹೇಳಬೇಡಿ, ನಿಮ್ಮನ್ನು ರಕ್ಷಿಸಿದ್ದು ಭಗವಂತ. ನಾನು ಕೇವಲ ನಿಮಿತ್ತ ಮಾತ್ರ ಅಷ್ಟೇ. ನೀವು ಧನ್ಯವಾದಗಳನ್ನು ಹೇಳಬೇಕೆಂದರೆ, ಒಂದು ರೂಪಾಯಿಯೊಂದಿಗೆ ದೇವರನ್ನು ಹುಡುಕುತ್ತಾ ತಿರುಗುತ್ತಿದ್ದ ನಿನ್ನ ಪುಟ್ಟ ಮುಗ್ಧ ಮಗುವಿಗೆ ಹೇಳಿ” ಎಂದಿತ್ತು. ಇದನ್ನೇ ನಂಬಿಕೆ ಎಂದು ಕರೆಯುತ್ತಾರೆ.
ದೇವರನ್ನು ಕಾಣಲು ಕೋಟ್ಯಂತರ ರೂಪಾಯಿ ದಾನ ಮಾಡಬೇಕಿಲ್ಲ! ನಂಬಿಕೆ, ಒಳ್ಳೆಯ ಭಾವನೆ ಇದ್ದರೆ ಒಂದು ರೂಪಾಯಿಯಲ್ಲೂ ದೇವರನ್ನು ಕಾಣಬಹುದು. ಆ ಜೀವಂತ ದೇವರು ತಂದೆಯ ರೂಪದಲ್ಲಿ ನಮಗೆ ಸಿಗುತ್ತಾರೆ. ಅವರನ್ನು ಪ್ರೀತಿಯಿಂದ ನೋಡಿಕೊಳ್ಳುವುದು ನಮ್ಮ ಕರ್ತವ್ಯ.