ಹುಬ್ಬಳ್ಳಿ-ಧಾರವಾಡ ಸುದ್ದಿ
ಬಾಬಾರ ಆದರ್ಶಗಳೇ ನನಗೆ ದಾರಿದೀಪ

ಬಾಬಾರ ಆದರ್ಶಗಳೇ ನನಗೆ ದಾರಿದೀಪ

 

ಹುಬ್ಬಳ್ಳಿಯ ಸಿದ್ದಾರೂಢ ಮಠದ ಆವರಣದಲ್ಲಿ ನಡೆದ ಅಖಿಲ ಕರ್ನಾಟಕ ಕ್ಷತ್ರೀಯ ಮರಾಠಾ ಮಹಾ ಸಮ್ಮೇಳನದಲ್ಲಿ ಉದ್ಘಾಟನೆಗೆ ಬಂದಿದ್ದ ಅಂದಿನ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರೊಂದಿಗೆ ಮಹಾಸಮ್ಮೇಳನದ ಕಾರ್ಯದರ್ಶಿ ಆಗಿದ್ದ ವಿಷ್ಣುರಾವ್ ಮಾನೆ ಇದ್ದರು.


ಬಾಬಾರ ಆದರ್ಶಗಳೇ ನನಗೆ ದಾರಿದೀಪ
ಇವತ್ತು ನಾನು ಜನರ ಮಧ್ಯೆ ಪ್ರೀತಿ, ವಿಶ್ವಾಸ ಇಟ್ಟುಕೊಂಡಿದ್ದರೆ, ಅದಕ್ಕೆ ನನ್ನ ತಂದೆಯವರು ನನಗೆ ಹಾಕಿಕೊಟ್ಟ ಮಾರ್ಗದರ್ಶನವೇ ಕಾರಣ. ಸರಳತೆ, ನೇರ ನುಡಿಗಳಿಂದ ಸಮಾಜದಲ್ಲಿ ತಮಗಾಗಿ ತಾವೇ ಒಂದು ಸ್ಥಾನ ಗಿಟ್ಟಿಸಿಕೊಂಡಿದ್ದ ವಿಷ್ಣುರಾವ ಭೀಮರಾವ ಮಾನೆಯವರು ನನ್ನ ಬಾಬಾ (ತಂದೆÉ) ಎಂದು ಹೇಳಿಕೊಳ್ಳಲು ನನಗೆ ತುಂಬಾ ಹೆಮ್ಮೆ ಎನಿಸುತ್ತದೆ.
1983ರಲ್ಲಿ ನನ್ನ ತಂದೆಯವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾಗಿ ಆಯ್ಕೆಯಾಗುವ ಪೂರ್ವದಲ್ಲಿ ಅವಿಭಕ್ತ ಕುಟುಂಬವಾಗಿದ್ದ ನಮ್ಮ ಮನೆಯಲ್ಲಿ ಭಿನ್ನಮತದ ಸುಳಿಗಾಳಿ ಬೀಸಿ ಬಿರುಗಾಳಿಯಾಯಿತು. ತಂದೆ ರಾಜಕಾರಣಿಯಾಗಿ ಪರಿವರ್ತನೆಯಾಗಿದ್ದೆ ಇದಕ್ಕೆ ಕಾರಣವಾಯಿತು. ಮನೆಗೆ ಬರುತ್ತಿದ್ದ ಸಾಮಾನ್ಯ ಜನರ ಅಹವಾಲು ಆಲಿಸುತ್ತಿದ್ದ ತಂದೆಯವರ ಗುಣ, ಮನೆಯ ವಾತಾವರಣದಲ್ಲಿ ಬದಲಾವಣೆ ಮೂಡಲು ಕಾರಣವಾಯಿತು.


ಮರದ ದಿಮ್ಮಿಗಳ(ಟಿಂಬರ್ ಮರ್ಚಂಟ್ಸ್) ವ್ಯಾಪಾರ ನಮ್ಮ ಮನೆಯ ಮೂಲ ಉದ್ಯೋಗ. ಅವಿಭಕ್ತ ಕುಟುಂಬದಲ್ಲಾದ ಮನಸ್ತಾಪಗಳಿಂದಾಗಿ ಮನೆಯಿಂದ ಬರಿಗೈಯಿಂದಲೇ ಹೊರಗೆ ಬಂದ ನನ್ನ ತಂದೆಯವರು ಹೊಸ ಸಾಹಸಕ್ಕೆ ಕೈ ಹಾಕಿದರು. ಆಗ ನಾವು ನಮ್ಮ ನಮ್ಮ ಮನೆಯನ್ನು ಬಾಡಿಗೆಗೆ ನೀಡಿ, ಇದ್ದ ಮನೆಯ ಪಕ್ಕದಲ್ಲೇ ನಮ್ಮದೇ ಜಾಗೆಯಲ್ಲಿ ಚಿಕ್ಕ ಮನೆ ಕಟ್ಟಿಕೊಂಡು ವಾಸಿಸ ತೊಡಗಿದೆವು. ಬರುತ್ತಿದ್ದ ಮನೆಯ ಬಾಡಿಗೆ ನಮ್ಮ ತಿಂಗಳ ಸಂಸಾರಕ್ಕೆ ಸಾಕಾಗುತ್ತಿತ್ತು. ಆಗ ಬಡತನ ಎಂದರೆ ಏನು ಅನ್ನುವ ಅನುಭವ ನಮಗಾಗತೊಡಗಿತು.
ಮೊದಲನೆಯ ಪಿಯುಸಿ ಓದುತ್ತಿದ್ದ ನನಗೆ ತಂದೆಯವರು, ವ್ಯವಹಾರದ ಜ್ಞಾನ ನೀಡಲು ತೊಡಗಿದರು. ಪತ್ರಿಕೆಗಳಲ್ಲಿ ಬಂದ ಜಾಹೀರಾತುಗಳನ್ನು ಆಧರಿಸಿ ಅಪ್ಲಿಕೇಶನ್ ಬರೆಯಲು ಹೇಳುತ್ತಿದ್ದರು. ಅಧಿಕಾರಿಗಳಿಗೆ ಮನವಿ ಪತ್ರ ಕೊಡುವುದು. ಜನರ ದುಃಖ ದುಮ್ಮಾನಗಳನ್ನು ಸಾರ್ವಜನಿಕಗೊಳಿ ಸುವುದು ಮೊದಲಾದವುಗಳನ್ನು ಅವರೇ ಹೇಳಿಕೊಟ್ಟರು. ಇದು ನನಗೆ ಮೊದಲ ಪಾಠವಾಯಿತು.
‘ನಂಬಿದ ಜನರನ್ನು ಯಾವುತ್ತೂ ಕೈ ಬಿಡಬೇಡ’ ‘ಹೆಚ್ಚಿನ ಜನರಿಗೆ ಉದ್ಯೋಗ ನೀಡು’ ಎಂಬ ಅವರ ಆದರ್ಶಗಳೇ ಇಂದು ನನಗೆ ದಾರಿದೀಪವಾಗಿವೆ. ಇವತ್ತು ನಾನೋರ್ವ ರಾಜಕಾರಣಿಯಾಗಿ, ಕೈಗಾರಿಕೋದ್ಯಮಿಯಾಗಿ ಸರಳತೆಯಿಂದ ಬದುಕುತ್ತಿದ್ದರೆ ಅದಕ್ಕೆ ಅವರ ಬದುಕು, ಅವರ ನಡೆ ನುಡಿಗಳೇ ಪ್ರೇರಕ ಶಕ್ತಿಯಾಗಿವೆ.
‘ಬದುಕು ಕಲಿಸಿದ ಅಪ್ಪ.


ನನ್ನ ಜೀವನದ ಆದರ್ಶ’
ಜಾಹೀರಾತು ನೋಡಿ ಕಂಪನಿಗಳಿಗೆ ಅರ್ಜಿ ಬರೆಸಿದ ಅಪ್ಪ ನಾನು ಬರೆದ ಅರ್ಜಿಯನ್ನೇ ರಾಂಚಿ(ಬಿಹಾರ್)ಯ ಗ್ಯಾಸ್ ಕಂಪನಿಗೆ ಕಳಿಸಿದಾಗ, ಕಂಪನಿಯು ನಾನು ಬರೆದ ಅರ್ಜಿ ಒಕ್ಕಣಿಕೆಯ ರೀತಿ ಕಂಡು, ನಮಗೆ 1994ರಲ್ಲಿ ಖಾಸಗಿ ಗ್ಯಾಸ್ ಏಜನ್ಸಿಯನ್ನು ಮಂಜೂರು ಮಾಡಿತು. ಇದು ಉತ್ತರ ಕರ್ನಾಟಕದಲ್ಲಿಯೇ ಮೊಟ್ಟಮೊದಲ ಖಾಸಗಿ ಕ್ಷೇತ್ರದ ಗ್ಯಾಸ್ ಏಜೆನ್ಸಿ ಎಂಬ ಹೆಮ್ಮೆ ನನ್ನದು. ನನಗಾಗ 19 ವರ್ಷ ವಯಸ್ಸು. ನಾನು ಕೈಗಾರಿಕೊದ್ಯಮಿಯಾಗಲು ನನಗೆ ಪ್ರೇರಣೆಯಾಗಿ ನಿಂತವರು ನನ್ನ ತಂದೆ ವಿಷ್ಣುರಾವ್ ಮಾನೆ. ಆರಂಭದಲ್ಲಿ ಕೆಲವೊಮ್ಮೆ ತಂದೆಯವರೇ ಅಡುಗೆ ಅನಿಲ ಸಿಲಿಂಡರ್‍ಗಳನ್ನು ಮನೆ ಮನೆಗೆ ಮುಟ್ಟಿಸಿ ಬಂದಿದ್ದಾರೆ. ಇದು ಅವರ ಕಾರ್ಯನಿಷ್ಠೆಯ ಉದಾಹರಣೆ ಅಷ್ಠೇ.


‘ಕಾಯಕವೇ ಕೈಲಾಸ’ ಎಂಬ ಬಸವಣ್ಣನವರ ವಚನವನ್ನು ಅವರು ಅಕ್ಷರ ಸಹ ಪಾಲಿಸಿದರು. ಅವರ ನಡೆ ಹಾಗೂ ನುಡಿಗಳು ಒಂದೇ ಆಗಿರುತ್ತಿದ್ದವು.
ವ್ಯಾಪಾರದಲ್ಲಾಗುತ್ತಿದ್ದ ಲಾಭ-ನಷ್ಟಗಳನ್ನು ಎಂದೂ ಗಣನೆಗೆ ತೆಗೆದುಕೊಳ್ಳದ ಅವರು, ನಾಲ್ಕು ಜನರಿಗೆ ಉದ್ಯೋಗವಾಗಿ ತಮ್ಮಂತೆ ಅವರು ಬದುಕಿದರೆ ಸಾಕು ಎನ್ನುವ ಮನೋಭಾವದವರು. ನಮಗೆಲ್ಲ ಅದನ್ನೇ ಕಲಿಸಿದರು. ಹಾಗೆ ನಡೆಸಿದರು.
ಆದರೆ ಮುಂದೆ ಬಂದ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಾದ ಬದಲಾವಣೆ ನಮ್ಮ ಉದ್ಯೋಗದಲ್ಲೂ ಇಣುಕಿ ನೋಡತೊಡಗಿತು. ಆಗ ತಂದೆಯವರ ಪ್ರೇರಣೆಯಿಂದಲೇ ನಾನು ಸಕ್ರೀಯ ರಾಜಕಾರಣಕ್ಕೆ ಕಾಲಿರಿಸಬೇಕಾಯಿತು.

ನನ್ನ ತಮ್ಮ ಗಿರೀಶ ಕೈಗಾರಿಕೆಯಲ್ಲಿ ಮುಂದುವರೆದ. ಇನ್ನೊಬ್ಬ ತಮ್ಮ ವಿಜಯ ವ್ಯವಹಾರದ್ಯೋಮ ವ್ಯವಸ್ಥಾಪನೆಯ ಬಗ್ಗೆ ಓದಿದ, ಹಾಗೂ ಜನರಿಗೆ ಮಾರ್ಗದರ್ಶನ ನೀಡತೊಡಗಿದ. ಇದೆಲ್ಲ ಸಾಧ್ಯವಾದುದು ತಂದೆ ಎಂಬ ಆಲದ ಮರದಿಂದಲೇ. ನಾವು ತಪ್ಪಿದಾಗ ತಿದ್ದಿ, ಗದುರಿ, ನಾವು ಸರಿ ಮಾಡಿದಾಗ ಪ್ರೀತಿಯಿಂದ ಬೆನ್ನು ತಟ್ಟಿದ ಆ ಅಪ್ಪ, ಇಂದು ನಮ್ಮೊಡನೆ ಇಲ್ಲದೆ ಇದ್ದರೂ ಅವರ ಪ್ರೇರಣೆ ನುಡಿಗಳು ಊರುಗೋಲಾಗಿವೆ.
ನನ್ನ ಈಗಿನ 15 ವರ್ಷಗಳ ರಾಜಕೀಯದಲ್ಲಿ ನಾನು ಎಂದೂ ತಂದೆಯವರ ಆಶಯಗಳಿಗೆ ವಿರೋಧವಾಗಿ ನಡೆದಿಲ್ಲ. ನನ್ನ ನಂಬಿದ ಜನರಿಗೆ ನಾನೆಂದು ಮೋಸ ಮಾಡಿಲ್ಲ. ಪ್ರಸಂಗ ಬಂದಾಗ ಅವರ ರಕ್ಷಣೆಗೆ ನಿಂತಿದ್ದೇನೆ. ಇರುವದನ್ನು ಇರುವಂತೆ ಹೇಳಿದ್ದೇನೆ. ನನ್ನಲ್ಲಿ ಬಣ್ಣದ ಮಾತುಗಳಿಗೆ ಅವಕಾಶ ಇಲ್ಲ. ಇದೆಲ್ಲ ನನಗೆ ಅಪ್ಪನಾದ ವಿಷ್ಣುರಾವ ಮಾನೆಯವರು ನೀಡಿದ ಅತ್ಯಮೂಲ್ಯ ಆಸ್ತಿ.

ಅಪ್ಪಾ ನೀವೊಂದು ಅದ್ಭುತ
ನೀವೊಂದು ನಂಬಿಕೆ
ನೀವೊಂದು ಸ್ಪೂರ್ತಿ
ನೀವೊಂದು ಕರುಣಾಮಯಿ
ನೀವೊಂದು ತುಂಬಿದ ಕೊಡ
ಶ್ರೀನಿವಾಸ ಮಾನೆ
ವಿಧಾನಪರಿಷತ್ ಸದಸ್ಯರು

administrator

Related Articles

Leave a Reply

Your email address will not be published. Required fields are marked *