ಕತಾರ್‌ನಲ್ಲಿ ಪರಿಸ್ಥಿತಿ ಬಹುತೇಕ ಸಾಮಾನ್ಯ ಸ್ಥಿತಿಗೆ ಬಂದಿದೆ. ಕಳೆದ ತಿಂಗಳು ಪ್ರತಿದಿನ ೩೫೦-೪೦೦ ಹೊಸ ಸೋಂಕಿತರು ಪತ್ತೆಯಾಗುತ್ತಿದ್ದರು ಹಾಗೂ ೩-೪ ಸೋಂಕಿತರು ನಿಧನರಾಗುತ್ತಿದ್ದರು. ಶೇ.೬೦-೭೦ ನಾಗರಿಕರಿಗೆ ಲಸಿಕೆ ನೀಡಲಾಗಿತ್ತು. ಈಗ ಶೇ.೮೦ ಜನರಿಗೆ ಲಸಿಕೆ ನೀಡಲಾಗಿದ್ದು, ಅದಕ್ಕೆ ಅನುಗುಣವಾಗಿ ಸೋಂಕಿನಲ್ಲಿ ಭಾರೀ ಕಡಿತವಾಗಿದೆ. ಸದ್ಯ ಪ್ರತಿದಿನ ೧೦೦-೧೨೫ ಹೊಸ ಸೋಂಕಿತರು ಪತ್ತೆಯಾಗುತ್ತಿದ್ದು, ವಾರಕ್ಕೆ ೧-೨ ಸೋಂಕಿತರು ನಿಧನರಾಗುತ್ತಿದ್ದಾರೆ. ಜೂ. ೨೮ರ ಅಂಕಿ ಅಂಶದಂತೆ ೧೧೮ ಹೊಸ ಸೋಂಕಿತರು ಪತ್ತೆಯಾಗಿದ್ದು, ಯಾರೂ ನಿಧನರಾಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಸೋಮಕಿತರ ಸಂಖ್ಯೆಗಿಂತಲೂ ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗಿದೆ. ಸೋಮವಾರ ೧೪೫ ಸೋಂಕಿತರು ಗುಣಮುಖರಾಗಿ ದ್ದಾರೆ. ಇಲ್ಲಿವರೆಗೆ ೫೮೮ ಸೋಂಕಿತರು ನಿಧನರಾಗಿದ್ದಾರೆ. ಜೂನ್ ೨೫ರಂದು ೧,೮೩೬ ಇದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ ೧,೭೪೪ಕ್ಕೆ ಇಳಿದಿದೆ.
ಒಟ್ಟು ನಾಲ್ಕು ಹಂತಗಳಲ್ಲಿ ಕೋವಿಡ್-೧೯ ನಿರ್ಭಂಧಗಳನ್ನು ತೆರವುಗೊಳಿ ಸುವ ಕಾರ್ಯಕ್ಕೆ ಮೇ ೨೮ರಿಂದ ಚಾಲನೆ ನೀಡಲಾಯಿತು.
ಜೂ.೧೮ರಿಂದ ಎರಡನೇ ಹಂತದ ಲಾಕ್‌ಡೌನ್ ತೆರವು ಚಾಲ್ತಿಯಲ್ಲಿದೆ. ಜು.೯ರಿಂದ ಮೂರನೇ ಹಾಗೂ ಜು.೩೦ರಂದು ಅಂತಿಮ ಹಂತದ ನಿರ್ಬಂಧ ತೆರವು ಆರಂಭವಾಗಲಿದೆ. ಸದ್ಯ ೧೦ಕ್ಕಿಂತ ಕಡಿಮೆ ಜನರು ಒಟ್ಟಿಗೆ ಸೇರಲು ಅವಕಾಶವಿದ್ದು, ಮೂರನೇ ಹಂತದಲ್ಲಿ ೪೦ ಜನರಿಗೆ ಏರಿಕೆ ಆಗಲಿದೆ. ಮಸೀದಿಗಳನ್ನು ತೆರೆಯಲು ಇದ್ದ ನಿರ್ಬಂಧ ಸಡಿಲಗೊಳ್ಳಲಿದ್ದು, ಶುಕ್ರವಾರದ ಪ್ರಾರ್ಥನೆಗೆ ೫೪ ಮಸೀದಿಗಳಲ್ಲಿ ಅವಕಾಶ ನೀಡಲಾಗಿದೆ. ಸದ್ಯ ಅತ್ಯಂತ ಅವಶ್ಯಕತೆ ಇರುವವರು ಮಾತ್ರ ದೋಹಾದಿಂದ ಹೊರಕ್ಕೆ ವಿಮಾನ ಪ್ರಯಾಣ ಮಾಡಬಹುದಾಗಿದ್ದು, ವಾಪಸಾದಾಗ, ಸರ್ಕಾರ ನಿಗದಿಪಡಿಸಿದ ಹೋಟೆಲ್ ಕ್ವಾರಂಟೈನ್‌ನಲ್ಲಿ ಶುಲ್ಕ ನೀಡಿ ಎರಡು ವಾರ ಇರಬೇಕು. ಮೂರನೇ ಹಂತದಲ್ಲಿ, ಕೆಲವು ವಿಮಾನಗಳ ಆಗಮನಕ್ಕೆ ಅನುಮತಿ ನೀಡಲಾಗುತ್ತದೆ.
ಚಾಲನಾ ತರಬೇತಿ ಶಾಲೆಗಳು ಮುರನೇ ಹಂತದಲ್ಲಿ ತೆರಯಲಿವೆ. ವೃತ್ತಿಪರ ತರಬೇತಿಗೆ ಸದ್ಯ ಇರುವ ೧೦ ಜನರ ಗರಿಷ್ಠ ಮಿತಿ ಮೂರನೇ ಹಂತದಲ್ಲಿ ೪೦ಕ್ಕೆ ಹೆಚ್ಚಲಿದೆ. ವೈದ್ಯಕೀಯ ಸಂಸ್ಥೆಗಳು ಸದ್ಯ ಶೇ.೬೦ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮೂರನೇ ಹಂತದಲ್ಲಿ ಶೇ.೮೦ಕ್ಕೆ ಹೆಚ್ಚಲಿದೆ. ಮಾಲ್‌ಗಳು ನಿಗದಿತ ಸಮಯಗಳಲ್ಲಿ ಮಾತ್ರ ತೆರೆದಿದ್ದು, ಮೂರನೇ ಹಂತದಲ್ಲಿ ಪೂರ್ಣ ಪ್ರಮಾಣದಲ್ಲಿ ತೆರೆಯಲಿವೆ. ಸದ್ಯ ಶೇ.೫೦ ನೌಕರರು ಕೆಲಸ ಮಾಡಬಹುದಾಗಿದ್ದು, ಮೂರನೇ ಹಂತದಲ್ಲಿ ಶೇ.೮೦ಕ್ಕೆ ಹೆಚ್ಚಲಿದೆ.
ಒಟ್ಟಿನಲ್ಲಿ ಹೇಳುವುದಾದರೆ ಕತಾರ್ ಸಾಕಷ್ಟು ಪರಿಣಾಮಕಾರಿಯಾಗಿ ಕರೊನಾ ವಿರುದ್ಧ ಹೋರಾಟದಲ್ಲಿ ಜಯದ ಹಾದಿಯಲ್ಲಿ ಸಾಗಿದೆ. ಇಷ್ಟೆಲ್ಲದರ ನಂತರವೂ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದು, ವೈಯಕ್ತಿಕ ಅಂತರ ನಿಭಾಯಿಸುವುದರ ಜತೆಗೆ ಎಲ್ಲ ಸರ್ಕಾರಿ ಸೂಚನೆಗ ಳನ್ನು ಪಾಲನೆ ಮಾಡಲಾಗುತ್ತಿದೆ. ಎಲ್ಲರೂ ಧನಾತ್ಮಕವಾಗಿ ಯೋಚಿಸೋಣ, ಆತ್ಮಸ್ಥೈರ್ಯದಿಂದಲೇ ಕರೊನಾವನ್ನು ಎದುರಿಸಬಹುದು.