ಹುಬ್ಬಳ್ಳಿ-ಧಾರವಾಡ ಸುದ್ದಿ
’ಹಾನಗಲ್ ಮಣ್ಣಲ್ಲೇ ಮಣ್ಣಾಗುವೆ’; ಬಹಿರಂಗ ಸಭೆಯಲ್ಲಿ ಭಾವುಕರಾದ ಮಾನೆ – ಮಂಡಿಯೂರಿ ಮತ ಯಾಚನೆ

’ಹಾನಗಲ್ ಮಣ್ಣಲ್ಲೇ ಮಣ್ಣಾಗುವೆ’; ಬಹಿರಂಗ ಸಭೆಯಲ್ಲಿ ಭಾವುಕರಾದ ಮಾನೆ – ಮಂಡಿಯೂರಿ ಮತ ಯಾಚನೆ

ಜೀವ ಇರುವವರೆಗೂ ಕ್ಷೇತ್ರದ ಜನರ ಸೇವೆ ಮಾಡುವೆ

ಹಾನಗಲ್ : ’ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ, ಭಿಕ್ಷುಕನಾದರೂ ಕನ್ನಡ ನಾಡಲ್ಲೇ ಮಡಿವೆ’ ಎನ್ನುವ ’ಸಂಗಮ’ ಚಲನ ಚಿತ್ರದ ಗಾನ ಗಾರುಡಿಗ ಡಾ. ಪಿ.ಬಿ.ಶ್ರೀನಿವಾಸ ಹಾಡಿದ ಹಾಡು ಕೇಳುತ್ತಿದ್ದಂತೆಯೇ ಪ್ರತಿಯೊಬ್ಬ ಕನ್ನಡಿಗನ ಮನದಲ್ಲೂ ಅವ್ಯಕ್ತವಾದ ಭಾವನೆ ಮೂಡಿ ಒಂದು ಕ್ಷಣ ಭಾವನಾತ್ಮಕವಾಗಿ ಕಳೆದುಹೋಗುತ್ತೇವೆ. ಅಂತಹದ್ದೆ ಭಾವನಾತ್ಮಕ ಕ್ಷಣಕ್ಕೆ ಬುಧವಾರ ಸಂಜೆ ಇಲ್ಲಿನ ತಾಲೂಕಾ ಕ್ರೀಡಾಂಗಣ ಸಾಕ್ಷಿಯಾಯಿತು.


ಹಾನಗಲ್ ಉಪಸಮರದ ಬಹಿರಂಗ ಪ್ರಚಾರದ ಕೊನೆಯ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಜೀವ ಇರುವವರೆಗೆ ಈ ಕ್ಷೇತ್ರದ ಜನರ ಸೇವೆ ಮಾಡುವ ಶಕ್ತಿಯನ್ನು ದೇವರು ತಮಗೆ ದಯಪಾಲಿಸಲಿ, ನನ್ನ ಜೀವ ಹೋದರೆ ಚಿತಾಭಸ್ಮ ಈ ಮಣ್ಣಲ್ಲೇ ಮಣ್ಣಾಗಲಿ ಎಂದು ಭಾವುಕರಾಗಿ ಹೇಳಿದಾಗ ಅಕ್ಷರಶಃ ವೇದಿಕೆಯಲ್ಲಿದ್ದ ಮುಖಂಡರಲ್ಲದೇ ನೆರೆದ ಸಹಸ್ರ,ಸಹಸ್ರ ಕಾರ್ಯಕರ್ತರ, ಅಭಿಮಾನಿಗಳ ಕಣ್ಣಾಲಿಗಳು ತುಂಬಿ ಬಂದವು.


ಮತದಾರರಿಗೆ ಹಾಗೂ ಅಭಿಮಾನಿಗಳಿಗೆ ನಮಸ್ಕರಿಸಿ ಮಾತು ಆರಂಭಿಸಿದ ಮಾನೆಯವರು ಸರಕಾರ ತನ್ನ ಅಹಂ, ಅಹಂಕಾರದಿಂದ ಜನರ ದಾರಿ ತಪ್ಪಿಸಿ ಉಪಚುನಾವಣೆ ಗೆಲ್ಲುವ ಹುನ್ನಾರದಲ್ಲಿದ್ದು ಅದನ್ನು ಈ ಕ್ಷೇತ್ರದ ಜನ ಸುಳ್ಳಾಗಿಸುವರೆಂಬುದರಲ್ಲಿ ಸಂದೇಹವೇ ಇಲ್ಲ. ಅಲ್ಲದೇ ಇಲ್ಲಿನ ಜನ ತಮ್ಮತನವನ್ನು ಎಂದು ಬಿಟ್ಟುಕೊಡುವುದಿಲ್ಲ ಸ್ವಾಭಿಮಾನಿಗಳು ಎಂದು ಹೇಳಿದಾಗ ಘೋಷಣೆ,ಶಿಳ್ಳೆ,ಕೇಕೆಗಳು ಮುಗಿಲು ಮುಟ್ಟಿದವು.


ಮುಖ್ಯಮಂತ್ರಿಯಾದಿಯಾಗಿ ಒಂದು ಡಜನ್ ಸಚಿವರು ಕಳೆದ 15 ದಿನಗಳಿಂದ ಇಲ್ಲಿಯೇ ಬಿಡಾರ ಹೂಡಿದ್ದಾರೆ.ಹಣದ ಆಮಿಷವೊಡ್ಡಿ ಮತದಾರರನ್ನು ಕೊಂಡುಕೊಳ್ಳಲು ಬಂದಿದ್ದಾರೆ.ಕ್ಷೇತ್ರದ ಜನರು ನೆರೆಹಾವಳಿಯಲ್ಲಿ ಕಣ್ಣೀರು ಹಾಕಿದಾಗ ಬಿಜೆಪಿ ನಾಯಕರು ಬರಲಿಲ್ಲ.ಕೋವಿಡ್ ಸಂಕಷ್ಟದಲ್ಲಿ ಸ್ಪಂದಿಸಲಿಲ್ಲ. ನಮ್ಮ ಜನರನ್ನು ಕಳೆದುಕೊಂಡ ನೋವು ನಮಗೆ ಗೊತ್ತು. ತಾಲೂಕಿನಲ್ಲಿ ಕೊರೊನಾ ಸುಮಾರು 500 ಜನರನ್ನು ಬಲಿತೆಗೆದುಕೊಂಡಿದೆ.ಆತ್ಮೀಯರಾದ ಅಕ್ಕಿ ಆಲೂರಿನ ಸಾಧಿಕ್ ಮತ್ತು ಶಂಕರ ದೇಸಾಯಿಯವರನ್ನು ಉಳಿಸಿಕೊಳ್ಳಲಾಗಲಿಲ್ಲ ಎನ್ನುವಾಗ ಮಾನೆ ಕಣ್ಣೀರಾದರು.


ಅಂದು ಉಸ್ತುವಾರಿ ಸಚಿವರಾಗಿದ್ದ ಇಂದಿನ ಮುಖ್ಯಮಂತ್ರಿ ಬೊಮ್ಮಾಯಿಯವರು ಇತ್ತ ಮುಖ ಹಾಕಲಿಲ್ಲ. ಆಕ್ಸಿಜನ್ ,ಬೆಡ್‌ಗಳನ್ನೂ ಕೊಡಿಸಲಿಲ್ಲ. ಬಿಜೆಪಿ ಸರ್ಕಾರ ಜನರ ಪ್ರಾಣ ಉಳಿಸುವ ಬದಲು ಕಮೀಶನ್ ಹೊಡೆಯುವುದರಲ್ಲಿ ಮುಳುಗಿತ್ತು. ಈ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.


ನನ್ನ ಮುಂದಿನ ಭವಿಷ್ಯ ಉಳಿಸುವುದು ಮತ್ತು ಅಳಿಸುವುದು ನಿಮ್ಮ ಕೈಯಲ್ಲಿದೆ. ಕುಮಾರ ಸ್ವಾಮಿಗಳು, ಕಾಶ್ಮೀರಿ ಗುರುಗಳು ನಡೆದ ಈ ಹಾನಗಲ್‌ನ ಪವಿತ್ರ ನೆಲದಲ್ಲಿ ತಮ್ಮ ಜನ್ಮವಾಗಿಲ್ಲ ಎಂಬ ಕೊರಗಿದೆ.ಇಲ್ಲಿನ ಜನತೆ ಒಂದು ಬಾರಿ ನಂಬಿದರೆ ಪ್ರಾಣ ಹೋದರೂ ಕೈ ಬಿಡುವುದಿಲ್ಲ.ಅಧಿಕಾರ ಮುಖ್ಯವಲ್ಲ. ಜನರ ಪ್ರೀತಿ ವಿಶ್ವಾಸ ಮುಖ್ಯ ಎಂದರಲ್ಲದೇ ಕೋವಿಡ್ ವೇಳೆಯಲ್ಲಿ ತಮ್ಮ ಆದಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ಕ್ಷೇತ್ರದ ಜನತೆಯ ಮಧ್ಯೆಯೇ ಇದ್ದು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇವೆ.

ಈಗ ಕಾಂಗ್ರೆಸ್‌ನವರು ಏನು ಸೇವೆ ಮಾಡಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ. ನಮ್ಮ ಪಕ್ಷದವರನ್ನು ಕೇಳಬೇಡಿ,ಮಾಧ್ಯಮದವರನ್ನು ಕೇಳಬೇಡಿ, ಆತ್ಮಸಾಕ್ಷಿಯಾಗಿ ಬಿಜೆಪಿ ಕಾರ್ಯಕರ್ತರನ್ನೇ ಕೇಳಿ ಅವರ ಸತ್ಯ ಹೇಳುತ್ತಾರೆಂದರು.
ಇದೇ ಸಂದರ್ಭದಲ್ಲಿ ಕ್ಷೇತ್ರಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ ಮನೋಹರ ತಹಶೀಲ್ದಾರರ ಕೊಡುಗೆಯನ್ನು ಮಾನೆ ಸ್ಮರಿಸುವುದನ್ನು ಮರೆಯಲಿಲ್ಲ.


ಕಳೆದ 15 ದಿನಗಳಿಂದ ಕಾಂಗ್ರೆಸ್‌ನ ಪ್ರಭಾವಿ ಮುಖಂಡರು ವ್ಯಾಪಕ ಪ್ರಚಾರ ನಡೆಸಿದ್ದರಲ್ಲದೇ ಪ್ರತಿ ಹಳ್ಳಿ ಹಳ್ಳಿಗಳನ್ನು ತಲುಪಿದ್ದರೂ ಮೊದಲ ದೊಡ್ಡ ಬಹಿರಂಗ ಸಭೆ ನಿನ್ನೆ ಕೊನೆಯ ದಿನ ಏರ್ಪಾಡಾಗಿತ್ತು.ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ ಅಹ್ಮದ, ಸತೀಶ ಜಾರಕಿಹೊಳಿ, ಮುಖಂಡರುಗಳಾದ ಡಾ.ಪರಮೇಶ್ವರ, ಕೆ.ಎಚ್.ಮುನಿಯಪ್ಪ, ಕುಲದೀಪ ರೈ ಶರ್ಮಾ, ಜಮೀರ ಅಹ್ಮದ, ಎಚ್.ಕೆ.ಪಾಟೀಲ, ಮನೋಹರ ತಹಶೀಲ್ದಾರ, ಎಚ್.ಆಂಜನೇಯ,ಆರ್.ಬಿ.ತಿಮ್ಮಾಪುರ,ಸಂತೋಷ ಲಾಡ, ರಮಾನಾಥ ರೈ, ಶಿವರಾಜ ತಂಗಡಗಿ,ಐವನ್ ಡಿಸೋಜಾ, ರಿಜ್ವಾನ್ ಅರ್ಷದ್, ಕೃಷ್ಣ ಭೈರೆಗೌಡ, ಪಿ.ಜಿ.ಆರ್.ಸಿಂಧಿಯಾ, ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಪ್ರಸಾದ ಅಬ್ಬಯ್ಯ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರಲ್ಲದೆ ಸಭೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್‌ನ ಶಕ್ತಿಯ ವಿರಾಟ್ ದರ್ಶನಕ್ಕೆ ಸಾಕ್ಷಿಯಾಯಿತು.

ಸಾಷ್ಟಾಂಗ ನಮಸ್ಕಾರ

ಕಳೆದ ಚುನಾವಣೆಯಲ್ಲಿ 6 ಸಾವಿರ ಮತಗಳಿಂದ ಸೋಲನ್ನಪ್ಪಿದರೂ ಜನರ ಮಧ್ಯೆಯೇ ಉಳಿದು ,ಕ್ಷೇತ್ರದ ಜನತೆಯ ಪ್ರತಿ ಮನೆ ಹಾಗೂ ಮನ ಎರಡನ್ನೂ ಮುಟ್ಟಿರುವ ಶ್ರೀನಿವಾಸ ಮಾನೆ ಭಾಷಣದ ಕೊನೆಗೆ ವೇದಿಕೆ ಮಧ್ಯ ಭಾಗಕ್ಕೆ ಬಂದು ಮಂಡಿಯೂರಿ ಸಾಷ್ಟಾಂಗ ನಮಸ್ಕರಿಸುವ ಮೂಲಕ ಮತ ಯಾಚಿಸಿ ಗಮನ ಸೆಳೆದರು.
ಕೈ ಸಭೆಯಲ್ಲಿ ಸಜ್ಜನರ ಸೋದರ


ಯಾರಿಗಾದರೂ ಮತ ನೀಡಿ ಆದರೆ ದುರ್ಜನರಿಗೆ ಮಾತ್ರ ಮತ ನೀಡಬೇಡಿ ಎಂದು ಪ್ರಚಾರ ನಡೆಸಿ ಎಂದು ಗಮನ ಸೆಳೆದಿದ್ದ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಸೋದರ ಪ್ರಕಾಶ ಸಜ್ಜನರ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಕಾಣಿಸಿಕೊಂಡು ಜನತೆಗೆ ಮಂಡಿಯೂರಿ ನಮಸ್ಕರಿಸಿ ಕಾಂಗ್ರೆಸ್‌ಗೆ ಮತ ನೀಡಬೇಕೆಂಬ ಸಂದೇಶ ರವಾನಿಸಿದರು.

ಸಿದ್ದರಾಮಯ್ಯ ಮಾತನಾಡುವಾಗ ಸಜ್ಜನ ಸಂಗೂರ ಸಕ್ಕರೆ ಕಾರ್ಖಾನೆ ನುಂಗಿ ನೀರು ಕುಡಿದ.ಗೌರಾಪುರ ಗುಡ್ಡವನ್ನು ಬಿಟ್ಟಿಲ್ಲ. ಇಷ್ಟೇ ಅಲ್ಲದೇ ಒಡಹುಟ್ಟಿದ ,ರಕ್ತ ಹಂಚಿಕೊಂಡ ತಮ್ಮನನ್ನೆ ಬಿಟ್ಟಿಲ್ಲ ಎಂದು ಹೇಳುವಾಗಲೇ ಪ್ರಕಾಶ ಸಜ್ಜನರ ಪ್ರತ್ಯಕ್ಷರಾಗಿ ಜನತೆಗೆ ಕೈಮುಗಿದು ಗಮನಸೆಳೆದರಲ್ಲದೇ ತಮ್ಮ ಸೋದರನ ಮತ್ತೊಂದು ಮುಖದ ಅನಾವರಣಗೊಳಿಸಿದರು.

ಕೋಯಿ ಮಾನೆ ಯಾ ನಾ ಮಾನೆ ಯೇ ’ಮಾನೆ’ ಜರೂರ ಜೀತೆಗಾ .
ಮಲ್ಲಿಕಾರ್ಜುನ ಖರ್ಗೆ ,ರಾಜ್ಯಸಭೆ ವಿಪಕ್ಷ ನಾಯಕ
ಬೊಮ್ಮಾಯಿ ಕ್ಷೇತ್ರದಲ್ಲಿ ಸುಳ್ಳಿನ ಸುರಿಮಳೆ ಸುರಿಸುತ್ತಿದ್ದಾರೆ. ಕಷ್ಟ ಕಾಲದಲ್ಲಿ ನಿಮ್ಮ ಮಧ್ಯೆ ಇರುವ ಆಪತ್ಪಾಂಧವ ಮಾನೆ ಗೆಲ್ಲಿಸುವ ಜವಾಬ್ದಾರಿ ನಿಮ್ಮದು

                                                                                 ಸಿದ್ದರಾಮಯ್ಯ, ರಾಜ್ಯ ವಿರೋಧಪಕ್ಷದ ನಾಯಕ

 

ಸೇವೆಯಿಂದ ಮನೆ ಮಾತಾಗಿರುವ ಶ್ರೀನಿವಾಸ ಮಾನೆ ದೊಡ್ಡ ಅಂತರದಲ್ಲಿ ಗೆಲ್ಲಲಿದ್ದಾರೆ.ಬಿಜೆಪಿಯವರಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ.
ಸಲೀಮ ಅಹ್ಮದ ,ಕೆಪಿಸಿಸಿ ಕಾರ್ಯಾಧ್ಯಕ್ಷ
ಹಾನಗಲ್ ಕ್ಷೇತ್ರದ ಕಷ್ಟಕ್ಕೆ ಆಗಿದ್ದು ಮನೆ ಮಗ ಮಾನೆಯೇ ಹೊರತು ಅಳಿಯ ಅಲ್ಲ.

                                                                 ರಿಜ್ವಾನ್ ಅರ್ಷದ್ ,ಕಾಂಗ್ರೆಸ್ ಶಾಸಕ

 

administrator

Related Articles

Leave a Reply

Your email address will not be published. Required fields are marked *