ಮೀರಜ್ ಮೂಲದ ಐವರು ಸೇರಿ ಎಂಟು ಜನ ಅಂದರ್
ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಮೀರಜ್ ಮೂಲದ ಐವರು ಸೇರಿ ಒಟ್ಟು ಎಂಟು ಆರೋಪಿಗಳನ್ನು ಘಟನೆ ನಡೆದ 72 ಗಂಟೆಗಳಲ್ಲೇ ಬಂಧಿಸುವಲ್ಲಿ ಗದಗ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಿರಜ್ ಮೂಲದ ಸಾಹಿಲ್ ಆಸ್ಪಾಕ್ ಖಾಜಿ(19), ಸೊಹೇಲ್ ಆಸ್ಪಾಕ್ ಖಾಜಿ(19), ಸುಲ್ತಾನ್ ಜಿಲಾನಿ ಶೇಖ್(23), ಮಹೇಶ ಜಗನ್ನಾಥ ಸಾಳೋಂಕೆ(21), ವಾಹಿದ ಆಯಾಕತ್ ಬೇಪಾರಿ(21), ಗದಗ ರಿಯಲ್ ಎಸ್ಟೇಟ್ ಉದ್ಯಮಿ, ಪ್ರಕಾಶ ಬಾಕಳೆಯ 1ನೇ ಪತ್ನಿಯ ಪುತ್ರ ವಿನಾಯಕ ಪ್ರಕಾಶ ಬಾಕಳೆ(31), ಫೈರೋಜ್ ನಿಸಾರಹ್ಮದ ಖಾಜಿ(29) ಹಾಗೂ ಜಿಶಾನ್ ಮೆಹಬೂಬಲಿ ಖಾಜಿ(24) ಎಂಬುವರೇ ಬಂಧಿಸಲ್ಪಟ್ಟವರಾಗಿದ್ದಾರೆ.
ಗದಗ ನಗರದ ದಾಸರ ಓಣಿಯಲ್ಲಿ ನಡೆದಿದ್ದ ನಾಲ್ವರ ಭೀಕರ ಹತ್ಯೆಗೆ ಸ್ವಂತ ಮಗನೇ ಸುಪಾರಿ ನೀಡಿದ್ದ ಎಂಬ ಅಂಶ ಬಯಲಾಗಿದೆ.
ಗದಗ ನಗರದ ದಾಸರ ಓಣಿಯಲ್ಲಿ ಏ. 19ರಂದು ಬೆಳಗಿನ ಜಾವ ನಗರಸಭೆ ಉಪಾಧ್ಯಕ್ಷೆ ಕಿರಿಯ ಮಗ ಕಾರ್ತಿಕ್ ಬಾಕಳೆ (28), ಪರಶುರಾಮ ಹಾದಿಮನಿ (55), ಪತ್ನಿ ಲಕ್ಷ್ಮೀ ಹಾದಿಮನಿ (45), ಪುತ್ರಿ ಆಕಾಂಕ್ಷಾ ಹಾದಿಮನಿ (16) ಕೊಲೆಯಾಗಿತ್ತು. ಇದೀಗ ಪ್ರಕಾಶ್ ಬಾಕಳೆ ಅವರ ಹಿರಿಯ ಮಗ, ಮೊದಲನೇ ಪತ್ನಿಯ ಪುತ್ರ ವಿನಾಯಕ್ ಬಾಕಳೆ ಕೊಲೆಗೆ ಸುಪಾರಿ ನೀಡಿದ್ದು ಬಹಿರಂಗವಾಗಿದೆ.
ಕುಟುಂಬ ಮುಗಿಸಲು ಪ್ರಕಾಶ್ ಬಾಕಳೆ ಅವರ ಹಿರಿಯ ಪುತ್ರ ವಿನಾಯಕ್ ಬಾಕಳೆ ಮಿರಜ್ ಮೂಲದ ಫಯಾಜ್ ಆಂಡ್ ಗ್ಯಾಂಗ್ಗೆ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಾನೆ. ಕೊಲೆ ಹಿಂದೆ ಆಸ್ತಿ ಹಂಚಿಕೆ ವಿಷಯ ಇರುವ ಬಗ್ಗೆ ಅನುಮಾನ ಮೂಡಿದೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಅವರಿಂದ ಕೃತ್ಯಕ್ಕೆ ಬಳಸಿದ್ದ ಆಲ್ಟೋ ಕಾರ್ನ್ನು ಜಪ್ತಿ ಮಾಡಿದ್ದಾರೆ. ತಂದೆ, ಮಲತಾಯಿ, ಮಲತಾಯಿಯ ಮಗನ ಕೊಲೆ ಮಾಡಲು ವಿನಾಯಕ ಬಾಕಳೆ 65 ಲಕ್ಷದ ಸುಪಾರಿ ನೀಡಿದ್ದು ಮುಂಗಡವಾಗಿ ೨ ಲಕ್ಷ ನೀಡಿದ್ದ.
ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಶ್ ಕುಮಾರ್ ಅವರು ಪತ್ರಿಕಾಗೋಷ್ಠಿ ಯಲ್ಲಿಂದು ಈ ವಿಷಯ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಹೆಚ್ಚುವರಿ ಎಸ್ಪಿ ಎಂ.ಬಿ. ಸಂಕದ, ಧಾರವಾಡದ ಹೆಚ್ಚುವರಿ ಎಸ್ಪಿ ನಾರಾಯಣ ಭರಮನಿ, ಬಾಗಲಕೋಟೆಯ ಹೆಚ್ಚುವರಿ ಎಸ್ಪಿ ಮಹಾಂತೇಶ್ವರ ಜಿದ್ದಿ ನೇತೃತ್ವದಲ್ಲಿ ಗದಗ ಡಿಎಸ್ಪಿ ಜೆ.ಎಚ್. ಇನಾಂದಾರ, ನರಗುಂದ ಡಿಎಸ್ಪಿ ಪ್ರಭುಗೌಡ ಡಿ. ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ ಎಂದು ಐಜಿಪಿ ತಿಳಿಸಿದರು.