ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಆಕ್ರೋಶ
ಹುಬ್ಬಳ್ಳಿ : ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಇಡಿ (ಜಾರಿ ನಿರ್ದೇಶನಾಲಯ) ವಿಚಾರಣೆ ಖಂಡಿಸಿ ರಾಜ್ಯಾದ್ಯಂತ ಇಂದು ಕೂಡ ಕಾಂಗ್ರೆಸ್ ಪ್ರತಿಭಟನೆ ತೀವ್ರಗೊಳಿಸಿದೆ. ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಮಹಾನಗರ ಹಾಗೂ ಗ್ರಾಮೀಣ ಘಟಕದ ವತಿಯಿಂದ ಹಮ್ಮಿಕೊಳ್ಳಲಾದ ಪ್ರತಿಭಟನೆಗೂ ಮೊದಲು ಸ್ಟೇಷನ್ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಡಿಕೆ ಶಿವಕುಮಾರ್ ಅವರು ಮಾಲಾರ್ಪಣೆ ಮಾಡಿ ಮರೆವಣಿಗೆ ಚಾಲನೆ ನೀಡಿದರು. ಮೆರವಣಿಗೆಯು ಕಿತ್ತೂರ ಚೆನ್ನಮ್ಮ ವರ್ತುಳಕ್ಕೆ ಆಗಮಿಸಿದಾಗ ಶಿವಕುಮಾರ ಮತ್ತು ಕಾಂಗ್ರೆಸ್ ನಾಯಕರು ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಮಾನಸಿಕ ಕಿರುಕುಳ ನೀಡುವ ಉದ್ದೇಶದಿಂದ ಇಡಿ ವಿಚಾರಣೆ ಮಾಡಲಾಗುತ್ತಿದೆ.ಗಾಂಧಿ ಕುಟುಂಬ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದೆ.ಇಂತಹ ಕುಟುಂಬಕ್ಕೆ ಪ್ರಧಾನಿ ಮೋದಿ ಅಪಕೀರ್ತಿ ತರಲು ಯತ್ನಿಸುತ್ತಿದ್ದಾರೆ ಎಂದರು ಆರೋಪಿಸಿದರು. “ಇಡಿ, ಆದಾಯ ತೆರಿಗೆ ಇಲಾಖೆಗಳನ್ನು ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಹಾಲು, ಮೊಸರು ಇನ್ನಿತರ ಅಗತ್ಯ ವಸ್ತುಗಳ ಮೇಲೆ ತೆರೆಗೆ ಹಾಕಿದ್ದಾರೆ. ಇದರಿಂದ ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ. ನ್ಯಾಶನಲ್ ಹೆರಾಲ್ಡ್ ಒಂದು ಸಂಸ್ಥೆಯಾಗಿದೆ. ಸೋನಿಯಾ ಮತ್ತು ರಾಹುಲ್ ಗಾಂಧಿಯವರನ್ನು ಜೈಲಿಗೆ ಹಾಕಿ ಕೇಂದ್ರ ಸರ್ಕಾರವು ಕಾಂಗ್ರೆಸ್ ಮುಗಿಸುವ ಹುನ್ನಾರ ನಡೆಸಿದೆ” ಎಂದರು.
ಬ್ರಿಟಿಷ್ ಆಡಳಿತಕ್ಕೆ ಹೆದರದ ಭಾರತೀಯರು ಬಿಜೆಪಿ ಬೆದರಿಕೆ ಹೆದುರುವುದಿಲ್ಲ. ಪೊಲೀಸ್ ಇಲಾಖೆಯಲ್ಲಿ ಲಂಚ ನಡೆಯುತ್ತಿದೆ. ಗೃಹ ಸಚಿವರು, ಸಚಿವರು ಉತ್ತರ ಪತ್ರಿಕೆ ತಿದ್ದುವ ಪ್ರಯತ್ನ ಮಾಡುತ್ತಾರೆ. 40 ರಷ್ಟು ಲಂಚದ ಸರ್ಕಾರವಾಗಿದೆ. ಮತ್ತೆ ಸರ್ಕಾರ ಬರುತ್ತದೆ. ಆರೋಪಿಗಳಿಗೆ ಶಿಕ್ಷೆ ನೀಡುವ ಕೆಲಸ ಮಾಡಲಾಗುತ್ತದೆ. ಲಕ್ಷ ಜನರು ಖಾದಿ ಧ್ವಜವನ್ನು ಹಾರಿಸುವ ಮೂಲಕ 75 ನೇ ಸ್ವಾತಂತ್ರ್ಯ ಮಹೋತ್ಸವ ಮಾಡಬೇಕು ಎಂದು ತಿಳಿಸಿದರು.
ಶಾಸಕರಾದ ಪ್ರಸಾದ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ಮಾಜಿ ಸಂಸದ ಪ್ರೊ.ಐ.ಜಿ.ಸನದಿ, ಉಭಯ ಘಟಕಗಳ ಅಧ್ಯಕ್ಷರಾದ ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ, ಮುಖಂಡರಾದ ಎ.ಎಂ.ಹಿಂಡಸಗೇರಿ, ಎಂ.ಎಸ್.ಅಕ್ಕಿ, ಎನ್.ಎಚ್.ಕೋನರೆಡ್ಡಿ, ಚಂದ್ರು ಜುಟ್ಟಲ, ಬಂಗಾರೇಶ ಹಿರೇಮಠ, ಸುರೇಶ ಸವಣೂರ, ದೊರೆರಾಜ್ ಮಣಿಕುಂಟ್ಲಾ, ಸದಾನಂದ ಡಂಗನವರ, ಶಾಕೀರ ಸನದಿ, ರಾಬರ್ಟ್ ದದ್ದಾಪುರಿ, ವಿನೋದ ಅಸೂಟಿ, ರಜತ ಉಳ್ಳಾಗಡ್ಡಿಮಠ, ಅಲ್ತಾಫ್ ಕಿತ್ತೂರ, ದಶರಥ ವಾಲಿ, ಸತೀಶ ಮೆಹರವಾಡೆ, ಮಹೇಶ ದಾಬಡೆ, ಶಾಜಮಾನ್ ಮುಜಾಹೀದ್, ಬಸವರಾಜ ಮಲಕಾರಿ, ನಾಗರಾಜ ಗೌರಿ, ಬಶೀರ ಗೂಡಮಾಲ್, ರಾಜಶೇಖರ ಮೆಣಸಿನಕಾಯಿ, ಇಮ್ರಾನ್ ಯಲಿಗಾರ ಸೇರಿದಂತೆ ಅನೇಕರಿದ್ದರು.
ಉಳಿದ ಪ್ರಮುಖರು ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಕೇವಲ ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಸಂಸತ್ ಅಧಿವೇಶನ ಆರಂಭವಾಗಿದ್ದರೂ ಅಧಿವೇಶನಕ್ಕೆ ತೆರಳಲು ಅವಕಾಶ ನೀಡದೇ ಸೋನಿಯಾ ಗಾಂಧಿಯವರನ್ನು ಇಡಿ ಅಧಿಕಾರಿಗಳಿಂದ ವಿಚಾರಣೆಗೊಳ ಪಡಿಸಲಾಗುತ್ತಿದೆ. ಕಾಂಗ್ರೆಸ್ ನಾಯಕರಿಗೆ ಮಾನಸಿಕ ಕಿರುಕುಳ ನೀಡಲಾಗು ತ್ತಿದೆ ಎಂದು ಆರೋಪಿಸಿದರು.
ಇಡಿ ವಿಚಾರಣೆ ಖಂಡಿಸಿ ರಾಜ್ಯದಲ್ಲಿ ಜಿಲ್ಲಾವಾರು ಕಾಂಗ್ರೆಸ್ ಪ್ರತಿಭಟನೆ ಆರಂಭಿಸಿದ್ದುಬೆಂಗಳೂರು, ಮೈಸೂರು, ಉಡುಪಿ, ದಾವಣಗೆರೆ, ಮಂಗಳೂರು, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೈ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಹಾಗೂ ಮೈಸೂರಿನಲ್ಲಿ ಜಿ.ಪರಮೇಶ್ವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಹಲವಡೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ.