ಹುಬ್ಬಳ್ಳಿ-ಧಾರವಾಡ ಸುದ್ದಿ
ಹುಡಾಕ್ಕೊಂದು ಹೊಸ ಖದರ್ ನೀಡಿದ್ದ ಕಲಬುರ್ಗಿ

ಹುಡಾಕ್ಕೊಂದು ಹೊಸ ಖದರ್ ನೀಡಿದ್ದ ಕಲಬುರ್ಗಿ

12 ನಗರಾಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರಿಗೆ ಕೊಕ್

ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದ ನಂತರ ಹುಡಾ ಅಧ್ಯಕ್ಷರಾಗಿ ನಿಯುಕ್ತಿಗೊಂಡ ನಾಗೇಶ ಕಲಬುರ್ಗಿ ತಮ್ಮ 27 ತಿಂಗಳ ಅವಧಿಯಲ್ಲಿ ಅನೇಕ ರಚನಾತ್ಮಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದಾರೆ.


ಸಾಮಾನ್ಯವಾಗಿ ನೂತನವಾಗಿ ಅಧಿಕಾರ ವಹಿಸಿಕೊಳ್ಳುವ ಅಧ್ಯಕ್ಷರುಗಳು ಆಡುವ ಮೊದಲ ಮಾತು ಅನಧಿಕೃತ ಲೇಔಟ್‌ಗಳ ವಿರುದ್ದ ಕಾರ್ಯಾಚರಣೆ ಮಾಡುವುದಾಗಿ ಹೇಳುವುದು.ಆದರೆ ಕಲಬುರ್ಗಿಯವರ ಹೇಳಿಕೆ ಕೇವಲ ಹೇಳಿಕೆಯಾಗಿ ಉಳಿಯಲಿಲ್ಲ. ಅಕ್ಷರಶಃ ಕಾರ್ಯರೂಪಕ್ಕೆ ಬಂದಿತು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಹಿತ ಎಲ್ಲ ಶಾಸಕರ ವಿಶ್ವಾಸಪಡೆದು ಅಕ್ರಮ ಲೇಔಟ್‌ಗಳ ವಿರುದ್ಧ ಸಮರವನ್ನೇ ಸಾರಿದರು. ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ ತೆರವು ಕಾರ್ಯಾಚರಣೆ ಮೂಲಕ ನಡುಕವನ್ನೇ ಹುಟ್ಟಿಸಿದ್ದಾರೆ.


ನೂರಾರು ಮೂಲೆ ನಿವೇಶನವನ್ನೇ ಹಂಚಿಕೆ ಮಾಡುವ ಮೂಲಕ ಹುಡಾಕ್ಕೆ ದೊಡ್ಡ ಆದಾಯ ತಂದು ಕೊಟ್ಟಿದ್ದು 2012ರಿಂದ ಹಾಗೇ ಉಳಿದಿದ್ದ ಲಕಮನಹಳ್ಳಿ, ಅಲ್ಲದೇ ತಡಸಿನಕೊಪ್ಪದ ಲೇ ಔಟ್‌ಗಳ ಸುಮಾರು 337 ನಿವೇಶನಗಳನ್ನು ಹಂಚಿಕೆ ಮಾಡಿದ್ದು ಅನೇಕ ಸೂರಿನ ಕನಸು ಕಂಡವರಿಗೆ ಆಸರೆಯಾಗಿದ್ದಾರೆ.
16 ಕೋಟಿ ವೆಚ್ಚದಲ್ಲಿ ಉದ್ಯಾನ ಅಭಿವೃದ್ಧಿ, 18 ಕೋಟಿ ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ತಮ್ಮ ಕೈಗೊಂಡಿದ್ದರು.
ಸಿಎ ನಿವೇಶನವನ್ನು ಪಡೆದು ಬಳಕೆ ಮಾಡದೇ ಇದ್ದವರಿಗೆ ನೋಟಿಸ್ ನೀಡುವ ಮೂಲಕ ಸಂಚಲನವನ್ನೇ ಸೃಷ್ಟಿಸಿದ್ದರಲ್ಲದೇ ತಾವು ಯಾರ ಬೆದರಿಕೆಗೂ ಬಗ್ಗುವುದಿಲ್ಲ. ಸುಮಾರು 200ಕ್ಕೂ ನಾಗರಿಕ ಸೌಲಭ್ಯ ನಿವೇಶನಗಳು ದುರ್ಬಳಕೆಯಾಗಿದ್ದನ್ನು ಪತ್ತೆ ಹಚ್ಚಿದ್ದು ನಿಜಕ್ಕೂ ಕಲಬುರ್ಗಿ ಹಾಗೂ ತಂಡದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

ಮೋದಿನಗರ – ವಾಜಪೇಯಿ ನಗರ

ತಡಸಿನಕೊಪ್ಪಕ್ಕೆ ನರೇಂದ್ರ ಮೋದಿ ನಗರ ಹಾಗೂ ಲಕಮನಹಳ್ಳಿಗೆ ವಾಜಪೇಯಿ ನಗರ ಎಂದು ನಾಮಕರಣ ಮಾಡಲು ಸಹ ಹುಡಾ ಸಭೆಯಲ್ಲಿ ಗೊತ್ತುವಳಿ ಸ್ವೀಕರಿಸಿದ್ದು, ಇಷ್ಟರಲ್ಲೇ ಕಾರ್ಯಕ್ರಮ ಸಹ ಅಂತಿಮಗೊಳ್ಳುವುದಿತ್ತು.

ಹಿಂದುಳಿದ ಸಮುದಾಯಕ್ಕೆ ಆಯಕಟ್ಟಿನ ಹುದ್ದೆ

ಅವಳಿನಗರದಲ್ಲಿ ಹಿಂದುಳಿದ ಸಮುದಾಯದವರಿಗೆ ಅದೂ ಬಿಜೆಪಿಯ ಮತಬ್ಯಾಂಕ್ ಎಂದೇ ಕರೆಸಿಕೊಳ್ಳುವ ಎಸ್ ಎಸ್ ಕೆ ಸಮಾಜದವರಿಗೆ ಪೂರ್ವ ಕ್ಷೇತ್ರ ಮೀಸಲು ಕ್ಷೇತ್ರವಾದ ನಂತರ ಹೇಳಿಕೊಳ್ಳುವ ಅವಕಾಶ ದೊರೆತಿರಲಿಲ್ಲ. ಬಿಜೆಪಿ ಸರ್ಕಾರ ಬಂದ ನಂತರ ಸಂಘಟನೆಯಲ್ಲಿ ಅತ್ಯುತ್ತಮ ಕಾರ್ಯ ಮಾಡಿದ್ದ ಕಲಬುರ್ಗಿಯವರಿಗೆ ಹುಡಾ ಅಧ್ಯಕ್ಷ ಸ್ಥಾನ ನೀಡಿ ಸಮಾಜಕ್ಕೆ ಆದ್ಯತೆ ನೀಡಿತ್ತು.
ಈಗ ನಾಮ ನಿರ್ದೇಶನ ರದ್ದಾಗಿರುವುದರಿಂದ ಸಮಾಜಕ್ಕೆ ದೊರೆತ ಆಯಕಟ್ಟಿನ ಹುದ್ದೆ ಕೈ ತಪ್ಪಿದ್ದು ಅವರನ್ನೇ ಪುನಃ ಮುಂದುವರಿಸುವಂತೆ ಸಮಾಜದ ಮುಖ್ಯ ಧರ್ಮದರ್ಶಿ ನೀಲಕಂಠಸಾ ಜಡಿ ಸರ್ಕಾರವನ್ನು ಒತ್ತಾಯಿಸಿದ್ದಾರಲ್ಲದೇ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರಿಗೂ ಆಗ್ರಹಿಸಿದ್ದಾರೆ.

12 ನಗರಾಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರಿಗೆ ಕೊಕ್

ಮತ್ತಷ್ಟು ನೇಮಕಾತಿ ರದ್ದು ಬಿಎಸ್‌ವೈ,ವಿಜಯೇಂದ್ರ ಬೆಂಬಲಿಗರಿಗೆ ಗೇಟಪಾಸ್

ಬೆಂಗಳೂರು: ಇತ್ತೀಚೆಗಷ್ಟೆ ನಾನಾ ನಿಗಮ ಮಂಡಳಿಗಳ ಅಧ್ಯಕ್ಷರ ನಾಮನಿರ್ದೇಶನ ರದ್ದು ಮಾಡಿದ್ದ ರಾಜ್ಯ ಸರ್ಕಾರವು ನಿನ್ನೆ ಮಧ್ಯರಾತ್ರಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಸಹಿತ ರಾಜ್ಯದ 12 ನಗರಾಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರ ನೇಮಕಾತಿ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಬೊಮ್ಮಾಯಿ ಸರ್ಕಾರ ಈ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಮತ್ತಷ್ಟು ಬೆಂಬಲಿಗರಿಗೆ ಕೊಕ್ ನೀಡಿದೆ.

ಹುಡಾ ಅಧ್ಯಕ್ಷ ನಾಗೇಶ ಪುಂಡಲೀಕಸಾ ಕಲಬುರ್ಗಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್ ವಿ ರಾಜೀವ್, ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಲಾಟಮೂರ್ತಿ, ಚಾಮರಾಜ ನಗರ ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಬಿ. ಶಾಂತ ಮೂರ್ತಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ರಮೇಶ್ ಹೊಳ್ಳ ಅವರ ನಾಮ ನಿರ್ದೇಶನ ರದ್ದುಗೊಳಿಸಲಾಗಿದೆ.
ಅಂತೆಯೇ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಅಶ್ವಿನಿ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಜೀರೆ, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ ಆನಂದ, ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವಲಿಂಗಪ್ಪ ಕಾಶಿನಾಥ್ ನಾವಲಗಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ್ ಪ್ರಹ್ಲಾದ ರಾವ್ ಧಾರವಾಡಕರ್ ಅವರ ನಾಮ ನಿರ್ದೇಶನ ವನ್ನು ರದ್ದುಗೊಳಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ಲತಾ ಅವರು ಆದೇಶ ಹೊರಡಿಸಿದ್ದಾರೆ.
ಸ್ಥಳೀಯ ಪಕ್ಷದ ಹಾಗೂ ಶಾಸಕರ ಅಭಿಪ್ರಾಯ ಆಲಿಸಿ ಹೊಸದಾಗಿ ನಾಮ ನಿರ್ದೇಶನ ಮಾಡಬಹುದಾಗಿದ್ದು, ಕೆಲವರು ಮತ್ತೆ ಪುನಃ ನಾಮನಿರ್ದೇಶನಗೊಳ್ಳುವ ಸಾಧ್ಯತೆಗಳೂ ಇವೆ.

administrator

Related Articles

Leave a Reply

Your email address will not be published. Required fields are marked *