ಮಾಜಿ ಸಿಎಂ ಮುನಿಸು ಶಮನಕ್ಕೆ ಯತ್ನ – ಒಗ್ಗಟ್ಟಾಗಿ ಹೋಗಲು ನಿರ್ಧಾರ
ಹುಬ್ಬಳ್ಳಿ : ತಾವು ಮತ್ತೆ ಕಮಲ ಪಡೆ ಸೇರ್ಪಡೆಯಾಗಿ ತಿಂಗಳು ಕಳೆದರೂ ತಮ್ಮ ಕಟ್ಟಾ ಬೆಂಬಲಿಗರ ಪಡೆ ಸೇರಿಸಿಕೊಳ್ಳುವಲ್ಲಿ ಮೀನ ಮೇಷ ಎಣಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕ್ರಮಗಳಿಂದ ದೂರವೇ ಉಳಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮುನಿಸು ಶಮನಗೊಳಿಸಲು ಮಹಾನಗರ ಬಿಜೆಪಿ ಮುಂದಾಗಿದ್ದು ದಿ. 28ರಂದು ಎಲ್ಲಾ ಬೆಂಬಲಿಗರ ಕೇಸರಿ ಪಾಳೆಯಕ್ಕೆ ಸೇರಿಸಿಕೊಳ್ಳಳು ಮುಹೂರ್ತ ಫಿಕ್ಸ್ ಆಗಿದೆ.
ನಿನ್ನೆ ಡೆನಿಸನ್ಸ್ ಹೊಟೆಲ್‌ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ್, ಮಾಜಿ ಮೇಯರ್ ವೀರಣ್ಣ ಸವಡಿ, ಮಹಾನಗರ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮುಂತಾದವರು ಪಾಲ್ಗೊಂಡ ಉಪಾಹಾರ ಕೂಟ ಸಭೆಯಲ್ಲಿ ಶೆಟ್ಟರ್ ಬೆಂಬಲಿಗರಿಗೆ ಬಾಗಿಲು ತೆರೆಯಲು ಒಮ್ಮತದ ನಿರ್ಧಾರಕ್ಕೆ ಬರಲಾಗಿದ್ದು, 28ರಂದು ಬೆಳಿಗ್ಗೆ 10.30ಕ್ಕೆ ದೇಶಪಾಂಡೆ ನಗರದ ಪಕ್ಷದ ಕಾರ್ಯಾಲಯದಲ್ಲಿ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆಯೆನ್ನಲಾಗಿದ್ದು ಈಗಾಗಲೇ ಕಾರ್ಯಕರ್ತರಿಗೆ ಸಂದೇಶ ಸಹ ಹೋಗಿದೆ ಎನ್ನಲಾಗುತ್ತಿದೆ.
ಸೇರ್ಪಡೆಗೊಂಡ ನಂತರ ನಡೆದ ಮೊದಲ ಮಹಾನಗರ ಕೋರ ಕಮೀಟಿ ಸಭೆಯಲ್ಲಿ ಶೆಟ್ಟರ್ ತಮ್ಮ ಬೆಂಬಲಿಗರ ಸೇರ್ಪಡೆ ಮಾಡಿಕೊಳ್ಳಲು ಹೇಳಿದ್ದರೂ ಕೆಲವರ ಸೇರ್ಪಡೆಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಲ್ಲದೇ ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳಬೇಡಿ ಎಂದು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬೆಂಬಲಿಗರ ಘರ್ ವಾಪಸಿಯಾಗಿರಲಿಲ್ಲ. ಇದರಿಂದ ಸ್ವತಃ ಶೆಟ್ಟರ್ ಇರಿಸು ಮುರಿಸಿಗೊಳಗಾಗಿದ್ದರು.
ನಿನ್ನೆ ನಡೆದ ಸಭೆಯಲ್ಲಿ ಶೆಟ್ಟರ್ ತಮ್ಮ ಬೆಂಬಲಿಗರೆಲ್ಲರೂ ಪಕ್ಷಕ್ಕಾಗಿ ಅಹರ್ನಿಶಿ ದುಡಿದವರೇ ಆಗಿದ್ದು ಆದರೂ ಈ ರೀತಿ ವಿಳಂಭ ಸರಿಯಲ್ಲ. ಹೀಗೆ ಆದರೆ ಬೆಂಗಳೂರಲ್ಲಿ ರಾಜ್ಯ ಮುಖಂಡರ ಮುಂದೆಯೇ ಸೇರ್ಪಡೆ ಮಾಡುವುದು ಅನಿವಾರ್ಯವಾಗುತ್ತದೆ.ಅಲ್ಲದೇ ವಿಧಾನಸಭೆ ಚುನಾವಣೆಯಲ್ಲಿ ಆದ ಘಟನೆಗಳನ್ನು ಮರೆತು ಎಲ್ಲರೂ ಪಕ್ಷಕ್ಕಾಗಿ ದುಡಿಯಬೇಕಾಗಿದೆ ಎಂದಿದ್ದಾರೆನ್ನಲಾಗಿದೆ.
ಜೋಶಿಯವರ, ಟೆಂಗಿನಕಾಯಿ ಅವರ ಬಗೆಗೆ ಕೆಲವರು ಅತ್ಯಂತ ಕೀಳು ಮಟ್ಟದ ಟೀಕೆ ಮಾಡಿದ ಬಗ್ಗೆ ಪ್ರಸ್ತಾಪವಾಗಿ ತೀವ್ರ ಚರ್ಚೆಯಾಯಿತೆನ್ನಲಾಗಿದೆ.
ಅಂತಿಮವಾಗಿ ಸೇರ್ಪಡೆಗೆ ಸಮ್ಮತಿಯ ಮುದ್ರೆ ಒತ್ತಲಾಗಿದ್ದು ೨೮ಕ್ಕೆ ಶೆಟ್ಟರ್, ಜೋಶಿ, ಅಲ್ಲದೇ ಸ್ಥಳೀಯ ಶಾಸಕರ ಸಮ್ಮುಖದಲ್ಲಿ ಸೇರ್ಪಡೆ ಕಾರ್ಯ ನಡೆಯಲಿದೆ. ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ವಾಯುವ್ಯ ಸಾರಿಗೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಮಹೇಶ ಬುರ್ಲಿ, ವಿರೂಪಾಕ್ಷಿ ರಾಯನಗೌಡರ, ರಾಮನಾಥ ಶೆಣೈ, ಭಾರತಿ ಟಪಾಲ ಸೇರಿದಂತೆ ೧೦೦ಕ್ಕೂ ಹೆಚ್ಚು ಕಾರ್ಯಕರ್ತರು ಸೇರ್ಪಡೆಯಾಗಲಿದ್ದಾರೆ.
ಪಕ್ಷಕ್ಕಾಗಿ ಹಲವು ವರ್ಷಗಳ ಕಾಲ ಅಲ್ಲದೇ ಮಹಾನಗರ ಅಧ್ಯಕ್ಷನಾಗಿ ಸಂಘಟನೆಯನ್ನು ಸಮರ್ಥವಾಗಿ ನಿಭಾಯಿಸಿದ್ದು, ಈಗಲೂ ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನೂ ಸಮರ್ಪಕವಾಗಿ ನಿಭಾಯಿಸುವೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಸಂಕಲ್ಪದೊಂದಿಗೆ ಕೆಲಸ ಮಾಡುತ್ತೇವೆ.
ನಾಗೇಶ ಕಲಬುರ್ಗಿ
ಹುಡಾ ಮಾಜಿ ಅಧ್ಯಕ್ಷ, ಶೆಟ್ಟರ್ ನಿಕಟವರ್ತಿಶೆಟ್ಟರ್ ಬೆಂಬಲಿಗರೆಲ್ಲರನ್ನೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ರವಿವಾರ ನಡೆದ ಸಭೆಯಲ್ಲಿ ಚರ್ಚೆಯಾಗಿದ್ದು ಕಾರ್ಯಕ್ರಮ ಏರ್ಪಡಿಸಿ ಸೇರಿಸಿಕೊಳ್ಳಲಾಗುವುದು.
ತಿಪ್ಪಣ್ಣ ಮಜ್ಜಗಿ, ಬಿಜೆಪಿ ಮಹಾನಗರ ಅಧ್ಯಕ್ಷ