ಹುಬ್ಬಳ್ಳಿ-ಧಾರವಾಡ ಸುದ್ದಿ

ಭಕ್ತರ ಹರಸಲು ಸಜ್ಜುಗೊಂಡ ಭವ್ಯ ಶಿವಮಂದಿರ

ಮಂದಿರ ಪ್ರಾಂಗಣದಲ್ಲಿ ಶಿವ, ಗಣೇಶ, ಪಾರ್ವತಿ, ಶನೈಶ್ಚರ, ನವಗ್ರಹ, ಕಾಳಭೈರವ ಸೇರಿದಂತೆ ವಿವಿಧ ದೇಗುಲ

ಆರಾಧನಾ ಟ್ರಸ್ಟ್ ಅದ್ಭುತ ಕಾರ್ಯ: ಸಕಲ ಸೌಲಭ್ಯವುಳ್ಳ ಯಾತ್ರಿನಿವಾಸಗಳು

ಭದ್ರತೆಗೆ ಅತ್ಯಾಧುನಿಕ ಸಿಸಿ ಕ್ಯಾಮೆರಾ ವ್ಯವಸ್ಥೆ:

ಹುಬ್ಬಳ್ಳಿ: ಪ್ರಸಿದ್ಧ ಸಿದ್ಧಾರೂಢ ಮಠ, ಮೂರುಸಾವಿರ ಮಠ, ಶಿರೂರ ಪಾರ್ಕ್‌ನ ತದ್ರೂಪಿ ಅಯ್ಯಪ್ಪಸ್ವಾಮಿ ಮಂದಿರ, ಜೈನ ಮಂದಿರಗಳು, ವರೂರಿನ ನವಗ್ರಹ ತೀರ್ಥ, ಐತಿಹಾಸಿಕ ಉಣಕಲ್ಲ ಚಂದ್ರಮೌಳೇಶ್ವರ ದೇವಸ್ಥಾನ ಹೀಗೆ ಐತಿಹಾಸಿಕ ಹಾಗೂ ನವ್ಯ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಂದ ಹೆಸರುವಾಸಿಯಾಗಿರುವ ಹುಬ್ಬಳ್ಳಿ -ಧಾರವಾಡ, ಇದೀಗ ಮತ್ತೊಂದು ಭವ್ಯ ಮಂದಿರದ ಮೂಲಕ ಭಕ್ತರ ಸುಕ್ಷೇತ್ರವಾಗಿ ಹೊರಹೊಮ್ಮುತ್ತಿದೆ.


ತಾಲೂಕಿನ ಪಾಲಿಕೊಪ್ಪ ಬಳಿ ಪುಣೆ-ಬೆಂಗಳೂರು ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಶಿವ ದೇವಸ್ಥಾನ ಭಕ್ತಗಣವನ್ನು ಕೈಬೀಸಿ ಕರೆಯುತ್ತಿದೆ. ಆಕರ್ಷಕ ದೇಗುಲ, ವಿಶಾಲ ದೇವಸ್ಥಾನದ ಆವರಣ ಕಣ್ಮನ ಸೆಳೆಯುತ್ತಿವೆ.
ಶಿವ ಎಂದರೆ ಸರ್ವ ಭಕ್ತರ ಆರಾಧ್ಯದೈವ. ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಮಹಾದೇವನಾಗಿದ್ದಾನೆ. ಅಂತಹ ಶಿವನ ಭವ್ಯ ಮಂದಿರ ಇದೀಗ ಹುಬ್ಬಳ್ಳಿ ಸಮೀಪದಲ್ಲಿ ನಿರ್ಮಾಣ ಮಾಡಿರುವುದು ಜನರಿಗೆ ಭಕ್ತಿ- ಶ್ರದ್ಧೆಯ ಹೊಸ ತಾಣವಾಗಿದೆ. ಸಂಪೂರ್ಣ ಶಿಲೆಯಲ್ಲಿ ನಿರ್ಮಿಸಿದ ಇದರ ವಿಶೇಷ ಶೈಲಿ ಆಕರ್ಷಣೀಯವಾಗಿದೆ.


ದೇವಸ್ಥಾನ ಆವರಣದಲ್ಲಿ ಶಿವ, ಗಣೇಶ, ಪಾರ್ವತಿ ಹೀಗೆ ವಿವಿಧ ದೇಗುಲಗಳು ಇವೆ. ದೇವಸ್ಥಾನವನ್ನು ಆಗಮ ಶಿಲ್ಪ ಶಾಸ್ತ್ರದ ಪ್ರಕಾರ ಸಂರಚನೆ ಮಾಡಿ ನಿರ್ಮಿಸಲಾಗಿದೆ. ವಾಸ್ತು ಪ್ರಕಾರ ಹಾಗೂ ಯಾವ ಸ್ಥಾನ ಯಾವ ದೇವರಿಗೆ ಶ್ರೇಷ್ಠ ಎಂಬುದನ್ನು ಪರಿಶೀಲಿಸಿ ಪ್ರತಿಷ್ಠಾಪನೆ ಮಾಡಲಾಗಿದೆ. ಮುಖ್ಯವಾಗಿ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸುವಾಗ ತಳಭಾಗದಲ್ಲಿ ಶಿವಲಿಂಗವು ಚೌಕ ಆಕಾರದಲ್ಲಿ ನಿರ್ಮಿಸಲಾಗಿದೆ. ಏಕಶಿಲೆಯ ಮೂರ್ತಿ ಇದಾಗಿದೆ.


ಇಲ್ಲಿನ ಎಲ್ಲ ಮೂರ್ತಿಗಳನ್ನು ವಿಶಿಷ್ಟ ಪದ್ಧತಿಯಲ್ಲಿ ಕೆತ್ತಲಾಗಿದೆ. ಗರ್ಭಗೃಹ ಇದು ನಮ್ಮ ಶಿರ ಅಥವಾ ತಲೆ ಇದ್ದಂತೆ, ಮಹಾಮಂಟಪ, ಧ್ವಜಸ್ಥಂಭ, ರಾಜಗೋಪುರ ಎಲ್ಲವೂ ಅತ್ಯಂತ ಸುಂದರ ಹಾಗೂ ಆಕರ್ಷಕ ರೀತಿಯಲ್ಲಿ ಸಜ್ಜುಗೊಂಡಿವೆ. ಸುಂದರ ಪುಷ್ಕರಣಿಯಲ್ಲಿ ಶುದ್ಧ ಜಲ ಸಂಗ್ರಹವಾಗಿದೆ.

ಆರಾಧನಾ ಟ್ರಸ್ಟ್ ಅದ್ಭುತ ಕಾರ್ಯ :
ಆರಾಧನಾ ಟ್ರಸ್ಟ್ ವತಿಯಿಂದ ಆರೂವರೆ ಎಕರೆ ಜಮೀನಿನಲ್ಲಿ ಬೃಹತ್ ದೇವಾಲಯ ನಿರ್ಮಿಸಲಾಗಿದ್ದು, ಭಕ್ತರ ತನು-ಮನಗಳನ್ನು ಸಂತೈಸುವ ತಾಣವಾಗಿದೆ. ಅತ್ಯಂತ ಸುಂದರ ಹಾಗೂ ಹಸಿರು ಉದ್ಯಾನದ ಮಧ್ಯ ತಲೆ ಎತ್ತಿರುವ ಮಂದಿರ ಆಹ್ಲಾದಕರ ವಾತಾವರಣದಲ್ಲಿ ಭಕ್ತರಿಗೆ ತಂಪೆರೆಯುತ್ತದೆ. ಪ್ರಾಂಗಣದಲ್ಲಿ ಶಿವ ದೇವಾಲಯ, ಪಾರ್ವತಿ ದೇವಾಲಯ, ಗಣಪತಿ, ಶನೈಶ್ಚರ, ನವಗ್ರಹ, ಕಾಳಭೈರವ ದೇವಸ್ಥಾನಗಳಿವೆ. ರಥಬೀದಿ, ೬೦ ಅಡಿ ಎತ್ತರ ೫ ಅಂತಸ್ತುವುಳ್ಳ ರಾಜಗೋಪುರ, ಹೋಮಕುಂಡ, ಏಕಶಿಲೆ ಧ್ವಜಸ್ತಂಭ ಚಿತ್ತಾಕರ್ಷಿಸುತ್ತವೆ.

ನಿರ್ಮಾಣ ತಂಡ :
ಮುರುಡೇಶ್ವರದ ಗೋಪುರ, ದೇಗುಲ ನಿರ್ಮಿಸಿದ್ದ ತಮಿಳುನಾಡಿನ ಕೆ. ಸ್ವಾಮಿನಾಥನ್ ಸ್ಥಪತಿ (ಆರ್ಕಿಟೆಕ್ಟ್) ಇದರ ಉಸ್ತುವಾರಿ ವಹಿಸಿದ್ದು, ಅವರ ಪುತ್ರ ವೆಂಕಟಕೃಷ್ಣ ಡಿಸೈನ್ ಮಾಡಿದ್ದಾರೆ. ರಾಮಕೃಷ್ಣ ಅವರ ಪುತ್ರ ಮಗೇಶ್ವರ ಶಿಲ್ಪಕಲೆ ರಚನೆ ಮಾಡಿದ್ದಾರೆ. ದಕ್ಷಿಣ ಭಾರತದ ದ್ರಾವಿಡ ಶೈಲಿಯಲ್ಲಿ ಶಿವಾ ದೇವಾಲಯ ಮೂಡಿ ಬಂದಿದೆ. ಮುಖ್ಯ ಮಹಾದ್ವಾರವು 40ಅಡಿ ಎತ್ತರ ಇದೆ. ರಾಘವೇಂದ್ರ ಅವರು ಮುಖ್ಯ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಮಣಿ ಸೂಪರ್‌ವೈಸರ್ ಆಗಿ ಕಾರ್ಯ ನಿರ್ವಹಿಸಿದ್ದು, ಮಧುರೈನ 50 ಶಿಲ್ಪಿಗಳು ಕಾರ್ಯನಿರ್ವಹಿಸಿದ್ದಾರೆ.

ಸಕಲ ಸೌಲಭ್ಯಗಳು :

ಸೇವಾ ಕೈಂಕರ್ಯ ಕೊಠಡಿಗಳು, ಸೇವಾ ಕಚೇರಿ, ಸೆಕ್ಯೂರಿಟಿ ಕೊಠಡಿ, ಪೂಜಾ ಕೊಠಡಿ, ಬಜಾರ್ ಸ್ಟ್ರೀಟ್, ವಿಶಿಷ್ಟ ಗೋಶಾಲೆ, ಬೃಹತ್ ಊಟದ ಮನೆ, ಋತ್ವಿಕರ ೬ ಕೊಠಡಿಗಳು, ಅತಿಥಿಗೃಹ, ಪ್ರವಚನ ಸಭಾಗೃಹ, ಮಹಿಳೆಯರು, ಪುರುಷರು ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ. ಭಕ್ತರು ಹೋಗಿ ಬರಲು ೨ ಲಿಫ್ಟ್ ಹಾಗೂ ಊಟದ ಸಾಮಗ್ರಿ, ಪಾತ್ರೆ ಕಳುಹಿಸಲು ಡಂಬ್ ಎಲಿವೇಟರ್, ೬೦ ಸಿಸಿ ಕ್ಯಾಮೆರಾ, ೩ ಪಿಟಿಜೆಡ್ ಕ್ಯಾಮರಾಗಳಿವೆ.

ಹೀಗೆ ಹೋಗಿ 
ಹುಬ್ಬಳ್ಳಿಯಿಂದ ಪಿ.ಬಿ. ರಸ್ತೆ ಮೂಲಕ ಹಾವೇರಿಯತ್ತ ಹೋಗುವಾಗ ಹೊರವಲಯದ ಪಾಲಿಕೊಪ್ಪ ಬಳಿ ಬಲ ಬದಿಯಲ್ಲಿ ಹೆದ್ದಾರಿಗೆ ಅಂಟಿಕೊಂಡೆ ವಿಶಾಲ ಹಾಗೂ ಭವ್ಯ ಶಿವ ಮಂದಿರ ಗೋಚರಿಸುತ್ತದೆ.

 

administrator

Related Articles

Leave a Reply

Your email address will not be published. Required fields are marked *