ಹುಬ್ಬಳ್ಳಿ : ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಅನ್ನುವುದು ಕೇವಲ ವದಂತಿ.ಬಸವರಾಜ ಬೊಮ್ಮಾಯಿ ಬದಲಾಗಲ್ಲ, ಕೇಂದ್ರದ ಪರವಾಗಿ ತಾವು ಹೇಳುತ್ತಿದ್ದೇನೆ. ಬದಲಾವಣೆ ಬಗ್ಗೆ ಯಾರು ಹಾಗೆ ಮಾತನಾಡಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರಾಜ್ಯ ನಾಯಕರಿಗೆ ತಾಕೀತು ಮಾಡಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು 2023ರವರೆಗೂ ಬೊಮ್ಮಾಯಿಯವರೇ ಮುಂದುವರಿಯುತ್ತಾರೆ ಎಂದು ಸಿಎಂ ಪರ ತಮ್ಮ ಸದ್ದಿಲ್ಲದ ಬ್ಯಾಟಿಂಗ್ ನಡೆಸಿದರಲ್ಲದೇ, ಈಶ್ವರಪ್ಪನವರೂ ಸಹ ಶೀಘ್ರವೇ ಬದಲಾವಣೆ ಆಗ್ತಾರೆ ಅಂತ ಹೇಳಿಲ್ಲ. ಆದರೂ ಇಂತಹ ಹೇಳಿಕೆ ನೀಡೋದು ತಪ್ಪು ಎಂದರು.
ಗುತ್ತಿಗೆದಾರರ ಸಂಘದಿಂದ ಶೇ.40 ಪರ್ಸಂಟೇಜ್ ಸರ್ಕಾರ ಎಂದು ಪ್ರಧಾನಿಯವರಿಗೆ ಪತ್ರ ಬರೆದ ವಿಚಾರ ಕೇಳಿದಾಗ, ಅದೊಂದು ಆಧಾರ ರಹಿತ ಆರೋಪ. ಅವರ ಹತ್ತಿರ ಏನಾದ್ರು ಸಾಕ್ಷಿ ಇದ್ರೆ ಕೊಡಲಿ.
ತನಿಖೆ ಮಾಡುತ್ತೇವೆ.ಅಲ್ಲದೇ ಮೋದಿ ಸರ್ಕಾರದಲ್ಲಿ ಭ್ರಷ್ಟಾಚಾರವನ್ನ ಸಹಿಸೋದಿಲ್ಲ ಎಂದರು.
ಪ್ರಧಾನ ಮಂತ್ರಿಯವರನ್ನು ಮಾಜಿ ಪಿಎಂ ದೇವೇಗೌಡರು ಭೇಟಿಯಾಗಿ ದ್ದರಲ್ಲಿ ಯಾವುದೇ ರಾಜಕೀಯ ಇಲ್ಲ. ಮೈತ್ರಿ ಬಗೆಗೆ ತಮಗೆ ಯಾವುದೇ ಮಾಹಿತಿಯಿಲ್ಲ. ಹಾಸನದಲ್ಲಿ ಐಐಟಿ ಆಗಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆಂದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಪರಿಷತ್ ಅಭ್ಯರ್ಥಿ ಪ್ರದೀಪ ಶೆಟ್ಟರ, ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ, ಬಸವರಾಜ ಕುಂದಗೋಳಮಠ ಇನ್ನಿತರರಿದ್ದರು.
ಜೋಶಿ ಗೋಷ್ಠಿಗೂ ಬೆಲ್ಲದ ಗೈರು
ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್, ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮುಂತಾದವರಿದ್ದರೂ ಮಹಾನಗರ ಅಧ್ಯಕ್ಷ, ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಪಾಲ್ಗೊಂಡಿರಲಿಲ್ಲ. ಪರಿಷತ್ ಚುನಾವಣೆಗೆ ವಿವಿಧ ಸಭೆಗಳು ನಡೆಯುತ್ತಿದ್ದರೂ ಬೆಲ್ಲದ ಬಹುತೇಕ ಸಭೆಗಳಿಗೆ ಗೈರಾಗುತ್ತಿದ್ದು ಅನೇಕ ಗುಸು ಗುಸುಗಳಿಗೆ ಕಾರಣವಾಗಿದೆ.
ಬಿಜೆಪಿಗೆ ಭರ್ಜರಿ ಗೆಲುವು
ಹುಬ್ಬಳ್ಳಿ : ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ದಾಖಲಿಸಿದೆ. ಅವಿಭಾಜ್ಯ ಧಾರವಾಡ ಜಿಲ್ಲೆಯಿಂದ ಪ್ರದೀಪ ಶೆಟ್ಟರ್ ಪ್ರಥಮ ಪ್ರಾಶಸ್ತ್ಯದಲ್ಲೇ ಗುರಿ ಮುಟ್ಟಲಿದ್ದಾರೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
2014 ರಿಂದ ಈಚೆಗೆ ಗ್ರಾಮೀಣಾಭಿವೃದ್ದಿಗೆ ಬಜೆಟ್‌ನಲ್ಲಿ ಬಹಳಷ್ಟು ಹಣವನ್ನ ಇಡಲಾಗಿದೆ.ನರೇಗಾ ಯೋಜನೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಹಿಂದೆ ಹಳೆ ಕಲ್ಲು ಹೊಸ ಬಿಲ್ಲು ಅನ್ನುವಂತಹ ಸ್ಥಿತಿ ಇತ್ತು ಈಗ ನೇರವಾಗಿ ಯಾರು ಕೆಲಸ ಮಾಡುವರೋ ಅವರ ಖಾತೆಗೆ ಹಣ ಹಾಕಲಾಗುತ್ತಿದೆ ಎಂದರು.
ಗ್ರಾಮ ಪಂಚಾಯತ್‌ಗಳಲ್ಲಿ ಜಲಜೀವನ ಮಿಷನ್ ಪ್ರಾರಂಭವಾಗಿದೆ
8.60 ಕೋಟಿ ಮನೆಗಳಿಗೆ ಕುಡಿಯುವ ನೀರು ಕೊಡಲಾಗುವುದು ಎಂದು ಹೇಳಿದರು.