ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು; ಬ್ರಾಹ್ಮಣ ಭಕ್ತನಾದರೇನಯ್ಯಾ?

ವಚನ ಬೆಳಕು; ಬ್ರಾಹ್ಮಣ ಭಕ್ತನಾದರೇನಯ್ಯಾ?

 ಬ್ರಾಹ್ಮಣ ಭಕ್ತನಾದರೇನಯ್ಯಾ?

ಬ್ರಾಹ್ಮಣ ಭಕ್ತನಾದರೇನಯ್ಯಾ? ಸೂತಕಪಾತಕಂಗಳ ಬಿಡ.
ಕ್ಷತ್ರಿಯ ಭಕ್ತನಾದರೇನಯ್ಯಾ? ಕ್ರೋಧವ ಬಿಡ.
ವೈಶ್ಯ ಭಕ್ತರಾದರೇನಯ್ಯಾ? ಕಪಟವ ಬಿಡ.
ಶೂದ್ರ ಭಕ್ತನಾದರೇನಯ್ಯಾ? ಸ್ವಜಾತಿಯೆಂಬುದ ಬಿಡ.
ಇಂತೀ ಜಾತಿಡಂಭಕರ ಮೆಚ್ಚುವನೆ ಕೂಡಲಚೆನ್ನಸಂಗಮದೇವ?
                                                                                           -ಚೆನ್ನಬಸವಣ್ಣ
12ನೇ ಶತಮಾನದಲ್ಲಿ ಬಸವಣ್ಣನವರು ಶರಣರ ಜೊತೆಗೂಡಿ ಲಿಂಗಾಯತ ಧರ್ಮ ಸ್ಥಾಪನೆ ಮಾಡಿದರು. ಇದು ದುಡಿಯುವ ಜನರ ಮೊದಲ ಧರ್ಮವಾಯಿತು. ಇವರ ಸಮಾಜಕ್ಕೆ ಶರಣಸಂಕುಲ ಎಂದು ಕರೆಯಲಾಯಿತು. ಇದೊಂದು ಕ್ರಾಂತಿಕಾರಕ ಧರ್ಮವಾಗಿದ್ದು ಎಲ್ಲ ಜಾತಿ ಜನಾಂಗದವರು ಈ ಧರ್ಮವನ್ನು ಸ್ವೀಕಾರ ಮಾಡುವುದರ ಮೂಲಕ ಜಾತಿಸಂಕರಗೊಂಡು ಕೇವಲ ಲಿಂಗಾಯತರಾಗಿ ಸಮಾನತೆಯನ್ನು ಸಾಧಿಸುತ್ತಿದ್ದರು. ಇದೊಂದು ಸಮಾನತೆಯ ಹೊಸ ಧಾರ್ಮಿಕ ಮತ್ತು ಸಾಮಾಜಿಕ ಪ್ರಯೋಗವಾಗಿತ್ತು. ಆದರೆ ಕೆಲವರು ಈ ಹೊಸ ಧರ್ಮವನ್ನು ಸ್ವೀಕರಿಸಿದರೂ ತಮ್ಮ ಹಳೆಯ ಚಾಳಿಗೆ ಅಂಟಿಕೊಂಡಿದ್ದರು. ಲಿಂಗಾಯತ ಧರ್ಮದ ರೂಪುರೇಷೆಗಳನ್ನು ಎತ್ತಿತೋರಿಸಿದ ಚೆನ್ನಬಸವಣ್ಣನವರು ಈ ರೀತಿಯ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದ ನಂತರ ಬರೆದ ವಚನವಿದು.
ಈ ಹೊಸ ಧಾರ್ಮಿಕ ಚಳವಳಿ ಪ್ರವಾಹೋಪಾದಿಯಲ್ಲಿ ಬಂದಿತು. ಇದರಿಂದ ದೂರ ಉಳಿದವರು ಮುಜುಗರ ಪಡುವಂಥ ವಾತಾವರಣದ ನಿರ್ಮಾಣವಾಗಿತ್ತು. ಇಂಥ ಸಂದರ್ಭದಲ್ಲಿ ಅನೇಕರು ಲಿಂಗವಂತ ಧರ್ಮ ಸ್ವೀಕರಿಸಿದರು. ಆದರೆ ಅವರಲ್ಲಿ ಕೆಲವರು ತಮ್ಮ ಹಳೆಯ ಪದ್ಧತಿಯನ್ನೇ ಮುಂದುವರಿಸಿದರು. ಕೆಲ ಬ್ರಾಹ್ಮಣರು ವೈದಿಕ ವ್ಯವಸ್ಥೆಯಿಂದ ಹೊರಬಂದು ಲಿಂಗಾಯತ ಧರ್ಮ ಸ್ವೀಕರಿಸಿ ಭಕ್ತ ಎನಿಸಿಕೊಂಡರೂ ವೈದಿಕದ ಸೂತಕಪಾತಕಗಳನ್ನು ಉಳಿಸಿಕೊಂಡಿದ್ದರು. ಕ್ಷತ್ರಿಯರು ಈ ಹೊಸ ಧರ್ಮ ಪ್ರತಿಪಾದಿಸುವ ಶಾಂತ ಸ್ವಭಾವಕ್ಕೆ ವ್ಯತಿರಿಕ್ತವಾದ ಸಿಟ್ಟಿನ ಗುಣವನ್ನೇ ಹೊಂದಿದ್ದರು. ವೈಶ್ಯವರ್ಣದವರು ಭಕ್ತರಾದ ಮೇಲೂ ವ್ಯವಹಾರದಲ್ಲಿ ಮೋಸ ಮಾಡುವುದರಲ್ಲೇ ತೊಡಗುವುದರ ಮೂಲಕ ಲಿಂಗಾಯತ ಧರ್ಮದ ಪ್ರಾಮಾಣಿಕ ಬದುಕಿಗೆ ಒಗ್ಗಿಕೊಳ್ಳಲಿಲ್ಲ. ಶೂದ್ರರು ಲಿಂಗಾಯತ ಧರ್ಮವನ್ನು ಸ್ವೀಕರಿಸಿ ಶೂದ್ರತ್ವವನ್ನು ಕಳೆದು ಕೊಂಡು ಹೊಸ ವ್ಯಕ್ತಿತ್ವವನ್ನು ಪಡೆದರೂ ಸ್ವಜಾತಿ ಮೋಹದಿಂದ ಹೊರಬರಲಿಕ್ಕಾಗಲಿಲ್ಲ. ಎಲ್ಲ ಜಾತಿ ಮತ್ತು ವರ್ಣಗಳಲ್ಲಿಯ ಇಂಥ ಕೆಲವರು ವರ್ಣವ್ಯವಸ್ಥೆಗೆ ವಿರುದ್ಧವಾದ ಲಿಂಗಾಯತ ಧರ್ಮವನ್ನು ಸ್ವೀಕರಿಸಿದರೂ ಜಾತಿಡಂಭಕರಾಗೇ ಉಳಿದರು. ಇಂಥವರನ್ನು ದೇವರು ಮೆಚ್ಚುವುದಿಲ್ಲ ಎಂದು ಚೆನ್ನಬಸವಣ್ಣನವರು ಈ ವಚನದಲ್ಲಿ ತಿಳಿಸಿದ್ದಾರೆ.
ಇಂದು ಲಿಂಗಾಯತ ಧರ್ಮದಲ್ಲಿ ಇಂಥ ಜಾತಿಡಂಭಕರೇ ಹೆಚ್ಚಾಗಿದ್ದಾರೆ. ಅವರ ನಾಲಗೆ ಮೇಲೆ ಬಸವಣ್ಣ ಇದ್ದರೆ ಮೆದುಳಿನೊಳಗೆ ಮನು ಮನೆ ಮಾಡಿದ್ದಾನೆ. ಹೀಗಾಗಿ ಇಂದು ಲಿಂಗಾಯತ ಧರ್ಮದಲ್ಲಿ ನೂರೆಂಟು ಜಾತಿಗಳು ಉಳಿದುಕೊಂಡಿವೆ.

ವಚನ – ನಿರ್ವಚನ: ರಂಜಾನ್ ದರ್ಗಾ
administrator

Related Articles

Leave a Reply

Your email address will not be published. Required fields are marked *