ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;  ಸರ್ವಾಗಮ ಶ್ರುತಿ ಸ್ಮೃತಿ ಪುರಾಣ

ವಚನ ಬೆಳಕು; ಸರ್ವಾಗಮ ಶ್ರುತಿ ಸ್ಮೃತಿ ಪುರಾಣ

ಸರ್ವಾಗಮ ಶ್ರುತಿ ಸ್ಮೃತಿ ಪುರಾಣ

ಸರ್ವಾಗಮ ಶ್ರುತಿ ಸ್ಮೃತಿ ಪುರಾಣ ಪಾಠಕನಾದಡೇನು?
ಸರ್ವಮಂತ್ರತಂತ್ರಸಿದ್ಧಿ ಮರ್ಮವರಿತಡೇನು?
ನಿತ್ಯಶಿವಾರ್ಚನೆ ತ್ರಿಕಾಲವಿಲ್ಲ;
ನಿತ್ಯ ಪಾದೋದಕ ಪ್ರಸಾದ ಸೇವನೆಯಿಲ್ಲ;
ಇದೇತರ ವೀರಶೈವ ವ್ರತ;
ಇದೇತರ ಜನ್ಮಸಾಫಲ್ಯ ಅಮುಗೇಶ್ವರಲಿಂಗವೆ?
                                                                        -ಅಮುಗೆ ರಾಯಮ್ಮ
ಎಲ್ಲ 28 ಆಗಮಗಳನ್ನು, 4ವೇದಗಳನ್ನು, ಮನುಸ್ಮೃತಿಯಂಥ ಸ್ಮೃತಿಗಳನ್ನು, 18 ಪುರಾಣಗಳನ್ನು ಪಠಣ ಮಾಡಿದರೇನಾಯಿತು? ಎಲ್ಲ ಪ್ರಕಾರದ ಮಂತ್ರ ತಂತ್ರಗಳ ಸಾಧನೆ ಮಾಡಿದರೆ ಏನಾಯಿತು? ಇಷ್ಟಲಿಂಗದ ತ್ರಿಕಾಲ ಪೂಜೆ ಇಲ್ಲ. ಲಿಂಗಕ್ಕೆ ಮಜ್ಜನಕ್ಕೆರೆದುದರಿಂದ ಉಂಟಾದ ಪಾದೋದಕ ಎಂಬ ಜ್ಞಾನೋದಕದ ಮತ್ತು ಆ ಲಿಂಗಕ್ಕೆ ಅರ್ಪಿಸಿದ ಪ್ರಸಾದದ ಸೇವನೆ ಇಲ್ಲ. ಹೀಗೆ ಲಿಂಗವಂತರ ಯಾವ ಪದ್ಧತಿಯನ್ನೂ ಅನುಸರಿಸದ ವೀರಶೈವ ವ್ರತ ಇದೆಂಥದ್ದು? ಇದಾವ ಜನ್ಮಸಾಫಲ್ಯ ದೇವರೆ? ಎಂದು ಅಮುಗೆ ರಾಯಮ್ಮ ಕೇಳುತ್ತಾಳೆ. ವೀರಶೈವ ವ್ರತಿಗಳು ಶೈವ ಮತ್ತು ವೈದಿಕ ಸಂಪ್ರದಾಯಗಳನ್ನು ಏಕಕಾಲಕ್ಕೆ ಅನುಸರಿಸುತ್ತಿದ್ದರು. ಅವರು ಲಿಂಗವಂತರ ಜೀವನ ವಿಧಾನವನ್ನು ಹೊಂದಿದ್ದಿಲ್ಲ. ವೀರಶೈವ ಎಂಬುದು ಲಿಂಗಾಯತದಂತೆ ಒಂದು ಧರ್ಮವಾಗಿದ್ದಿಲ್ಲ. ಅದು ಶೈವದ ಶಾಖೆಯೂ ಆಗಿದ್ದಿಲ್ಲ. ಅದೊಂದು ಕೇವಲ ವ್ರತವಾಗಿತ್ತು ಎಂಬುದು ಈ ವಚನದಿಂದ ಸಾಬೀತಾಗುತ್ತದೆ.
ಈ ವ್ರತವು ವೈಯಕ್ತಿಕವಾದುದಾಗಿತ್ತು. ಶೈವ ಪರಂಪರೆಗೆ ಸೇರಿದ ಯಾವುದೇ ವ್ಯಕ್ತಿ ಈ ವ್ರತವನ್ನು ಪಾಲಿಸುವುದರ ಮೂಲಕ ವೀರವ್ರತಿ ಎನಿಸಿಕೊಳ್ಳುತ್ತಿದ್ದನು. ವೀರವ್ರತಿಗಳು ಒಂದೇ ತೆರನಾದ ವ್ರತವನ್ನು ಪಾಲಿಸುತ್ತಿದ್ದಿಲ್ಲ. ಅವರು ತಮಗೆ ಬೇಕಾದ ರೀತಿಯಲ್ಲಿ ವ್ರತ ಹಿಡಿಯುತ್ತಿದ್ದರು. ಕೆಲವರು ಅನ್ಯಮತದವರನ್ನು ಸೋಲಿಸುವ ವ್ರತ ಹಿಡಿಯುತ್ತಿದ್ದರು. ಕೆಲವರು ಉಗ್ರ ವ್ರತಧಾರಿಗಳಾಗುತ್ತಿದ್ದರು. ಅವರು ಹಿಡಿಯುವ ವ್ರತಗಳಲ್ಲಿ ಕೆಲವೊಂದು ಹಿಂಸಾತ್ಮಕ ಮತ್ತು ಸ್ವಯಂ ಹಿಂಸಾತ್ಮಕವಾಗಿರುತ್ತಿದ್ದವು. ಕೆಲವೊಂದು ಸಲ ಅನ್ಯ ಮತ ಪ್ರತಿಪಾದಕರ ರುಂಡವನ್ನು ಚೆಂಡಾಡುವ ವ್ರತವನ್ನೂ ಹಿಡಿಯುತ್ತಿದ್ದರು. ಅದನ್ನು ಸಾಧಿಸಿದ ನಂತರ, ಮಣಿಹ ಪೂರೈಸಿದೆವೆಂದು ಸ್ಥಾವರಲಿಂಗದ ಮುಂದೆ ನಿಂತು ತಮ್ಮ ರುಂಡವನ್ನು ಕೊಯ್ದುಕೊಂಡು ಅದರ ಮುಂದೆ ಬೀಳುವಂತೆ ಮಾಡುತ್ತಿದ್ದರು. ಇಂಥ ಭಯಂಕರ ವ್ರತಗಳನ್ನು ಕೂಡ ವೀರಶೈವ ವ್ರತಿಗಳು ಪಾಲಿಸುತ್ತಿದ್ದರು. ಅವರಿಗೆ ವೀರವ್ರತಿಗಳು ಎಂದೂ ಕರೆಯಲಾಗುತ್ತಿತ್ತು. ಹೀಗೆ ೧೨ ಶತಮಾನದಲ್ಲಿ ವೀರಶೈವ ಒಂದು ವ್ರತವಾಗಿತ್ತು ಮತ್ತು ಲಿಂಗಾಯತ ಒಂದು ಧರ್ಮವಾಗಿತ್ತು ಎಂಬುದು ಈ ವಚನದಿಂದ ವ್ಯಕ್ತವಾಗುತ್ತದೆ.
ನಂತರದ ಶತಮಾನಗಳಲ್ಲಿ ವೀರಶೈವ ಪದ ಲಿಂಗಾಯತಕ್ಕೆ ಸಮನಾಗಿ ಬಳಕೆಯಾಗತೊಡಗಿತು. ಕಲಿತವರು, ಶ್ರೀಮಂತರು, ಸಂಸ್ಕೃತ ಬಲ್ಲವರು ಮುಂತಾದವರು ಲಿಂಗಾಯತಕ್ಕೆ ಬದಲಾಗಿ ವೀರಶೈವ ಪದ ಬಳಸುವುದರಲ್ಲಿ ಹೆಚ್ಚಿನ ಆಸಕ್ತಿ ತೋರಿದರು. ಆದರೆ ಬಡವರು, ನಿರಕ್ಷರಿಗಳು ಮತ್ತು ಹಳ್ಳಿಗರು ಲಿಂಗಾಯತ ಎಂದೇ ಬಳಸಿದರು. ಬಹುಪಾಲು ಧರ್ಮಗುರುಗಳು ಮತ್ತು ವಿದ್ವಾಂಸರು ತಮ್ಮನ್ನು ವೀರಶೈವರೆಂದೇ ಕರೆದುಕೊಂಡರು. ಹೀಗಾಗಿ ವೀರಶೈವ ಮತ್ತು ಲಿಂಗಾಯತ ಒಂದೇ ಎಂಬ ಭಾವನೆ ಮೂಡಿತು. ಗೊಂದಲ ಸೃಷ್ಟಿಯಾಯಿತು.

ವಚನ – ನಿರ್ವಚನ: ರಂಜಾನ್ ದರ್ಗಾ
administrator

Related Articles

Leave a Reply

Your email address will not be published. Required fields are marked *