ಧಾರವಾಡ : ಇಲ್ಲಿನ ಸಿಟಿ ಸರ್ವೆ ಕಚೇರಿಯಲ್ಲಿನ ಸಿಬ್ಬಂದಿ ಕಚ್ಚಾಟದಿಂದ ನಾಗರಿಕರಿಗೆ ಸಕಾಲಕ್ಕೆ ಸೇವೆ ಸಿಗಲಾರದ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಕೆ .ಸಿ. ಪಾರ್ಕ್ ಬಳಿಯಿರುವ ನಗರ ಭೂಮಾಪನ ಇಲಾಖೆಯ ಕಚೇರಿಯಲ್ಲಿನ ಸಿಬ್ಬಂದಿಯ ಮಧ್ಯೆ ಕಳೆದ ಕೆಲವು ದಿನಗಳಿಂದ
ಜಾತಿ ಕಲಹ ನಡೆಯುತ್ತಿರುವುದೇ ನಾಗರಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಕಚೇರಿಯಲ್ಲಿನ ಭೂ ಮಾಪಕರಾದ ಬಸವರಾಜ ಬೇವಿನಮಟ್ಟಿ ಮತ್ತು ಇತರ ಭೂ ಮಾಪಕರ ನಡುವೆ ತಿಕ್ಕಾಟ ನಡೆಯುತ್ತಿದ್ದು, ಇದು ಜಾತಿ ವೈಷಮ್ಯ ಸೃಷ್ಠಿಸಿದೆ.
ಇತ್ತೀಚಿಗೆ ತಮ್ಮ ಮೇಲೆ ಜಾತಿ ದೌರ್ಜನ್ಯ ನಿರಂತರ ಎಸಗಲಾಗುತ್ತಿದೆ ಎಂದು
ಬಸವರಾಜ ಬೇವಿನಮಟ್ಟಿ ಕಳೆದ ದಿನಾಂಕ 9 ರಂದು, ಭೂಮಾಪಕರಾದ ಬಿ.ಎಂ.ಪಾಟೀಲ ಮತ್ತು ಅವರ ಪತ್ನಿ ಅಶ್ವಿನಿ ಕಂಬಳಿ ವಿರುದ್ಧ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಂತರ ಬಿ.ಎಂ.ಪಾಟೀಲ ಮತ್ತು ಅವರ ಪತ್ನಿ ಅಶ್ವಿನಿ ನ್ಯಾಯಾಲದಿಂದ ಜಾಮೀನು ಕೂಡ ಪಡೆದಿದ್ದಾರೆ. ಈ ತಿಕ್ಕಾಟದಿಂದ ಬೇಸತ್ತ ಕೆಲವು ಭೂಮಾಪಕರು ತಮ್ಮನ್ನು ಬೇರೆ ಕಡೆಗೆ ವರ್ಗಾವಣೆ ಮಾಡುವಂತೆ ಮೇಲಾಧಿಕಾರಿಗಳಲ್ಲಿ ಲಿಖಿತವಾಗಿ ಮನವಿ ಮಾಡಿದ್ದಾರೆ. ಕಚೇರಿಯಲ್ಲಿನ ಸಿಬ್ಬಂದಿಯ ಈ ಆಂತರಿಕ ಕಚ್ಚಾಟದಿಂದ ಬೇಸತ್ತ ಕಚೇರಿ ಮುಖ್ಯಸ್ಥರು, ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೂ ತಂದು ಪರಿಹಾರ ಮಾಡುವಂತೆ ಕೇಳಿದ್ದಾರೆ.
ಇತ್ತ ಕಚೇರಿಯಲ್ಲಿ ಉತಾರ, ಮ್ಯುಟೇಶನ್, ನಕಾಶ ಇತರ ಸೇವೆಗಳಿಗೆ ನಿತ್ಯ ಬರುವ ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ಆಗುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.
ಅಲ್ಲದೇ ಕಚೇರಿಯಲ್ಲಿ ಬಹಳ ವರ್ಷಗಳಿಂದ ಬೀಡುಬಿಟ್ಟಿರುವ ಸಿಬ್ಬಂದಿಯನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿ, ಬೇರೆಯವರನ್ನು ನಿಯೋಜಿಸಬೇಕು ಎಂದೂ ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳು ಅಥವಾ ಜಿಲ್ಲಾಧಿಕಾರಿಗಳು ಕೂಡಲೇ ಗಮನಹರಿಸಿ ಸಮಸ್ಯೆ ಇತ್ಯರ್ಥಗೊಳಿಸಬೇಕು. ಇಲ್ಲದಿದ್ದರೆ ಸಿಬ್ಬಂದಿ ಕಿತ್ತಾಟದ ಪ್ರಹಸನ ಬೀದಿಗೆ ಬರುವುದು ನಿಶ್ಚಿತ. ಇತ್ತ ಸಾರ್ವಜನಿಕರು ಕೂಡ ಗಂಭೀರವಾಗಿ ಪರಿಗಣಿಸಿದರೆ ಇಲಾಖೆಗೂ ಮುಜುಗರ ಆಗುವ ಸಾಧ್ಯತೆ ಇದೆ.