ಅಪ್ಪನೆಂಬ ದೀವಿಗೆ
ನಿನ್ನ ಬದುಕನ್ನು ಬತ್ತಿಯಾಗಿಸಿ
ದೀಪವಾಗಿ ಅನವರತ ನೀನುರಿದು
ನಮ್ಮ ಬಾಲಿಗೆ ಬೆಳಕ ಚೆಲ್ಲಿ
ನೀನೇಕೆ ಕತ್ತಲಲ್ಲಿ ಉಳಿದು ಬಿಟ್ಟೆ ಅಪ್ಪಾ?
ಕಷ್ಟದ ಕಡಲಲ್ಲಿ ನೀನು ಮುಳುಗಿ ತೃಣ ಕಷ್ಟವೂ ನಮಗೆ ತಾಗದಂತೆ
ಸುಖದ ದಡವನು ಸೇರಿಸಿಬಿಟ್ಟೆ
ಬದುಕಿನ ಬವಣೆಯನು ಹೇಗೆ ಬಚ್ಚಿಟ್ಟೆಯಪ್ಪಾ?
ನಮ್ಮ ಕನಸಿಗಾಗಿ ನಿನ್ನ ಕನಸ ಮರೆತುಬಿಟ್ಟೆ
ಎದೆಯ ಒಳಗೆ ದುಃಖದ ಮಡುವಿದ್ದರೂ
ಮುಖದಲಿ ನಗೆಯ ದೋಣಿ ತೇಲಿಬಿಟ್ಟೆ
ನಿನ್ನ ನೋವು ಕಾಣದಂತೆ ಹೇಗೆ ಮರೆಮಾಚಿದೆ ಅಪ್ಪಾ?
ನಮ್ಮ ಹೊಟ್ಟೆ ತುಂಬಿಸಲೆಂದು
ರಟ್ಟೆ ಮುರಿಯುವ ಹಾಗೆ ದುಡಿದು
ನಿನ್ನ ತುತ್ತನೂ ನಮಗೆ ಉಣಿಸಿ
ನಿನ್ನ ಹಸಿವನು ಏಕೆ ಪಣಕಿಟ್ಟೆಯಪ್ಪಾ?
ನಮಗೆ ಬದುಕು ಕಟ್ಟಿಕೊಡಲು
ನಿನ್ನ ಬದುಕನು ಸವೆಸಿಬಿಟ್ಟೆ
ಬದುಕ ಭಾರ ಹೊರುವ ಭರದಿ
ನೀನು ಬದುಕುವುದನ್ನೇ ಮರೆತುಬಿಟ್ಟೆಯಲ್ಲಾ ಅಪ್ಪಾ
-ಬಾನಾ