ಅನುಕ್ಷಣ, ಅನುದಿನ, ಅನುಗಾಲ ಕಂದನ ಶ್ರೇಯಸ್ಸಿಗೆ ಜೀವ ಸವೆಸುವ ಅಮ್ಮನೆಂಬ ಮಹಾನ್ ಚೇತನಕ್ಕೆ, ಮಕ್ಕಳಪಾಲಿನ ಆ ದೈವಕ್ಕೆ ಅನುಕ್ಷಣ-ಅನುದಿನ ನೆನೆಯುವಂತಾಗಲಿ, ಗೌರವ ನೀಡುವಂತಾಗಲಿ. ಇಂದು ಅವಳಿಗಾಗಿಯೇ ಮೀಸಲಿಟ್ಟ ದಿನ. ವಿಶ್ವದ ಎಲ್ಲ ಅಮ್ಮಂದಿರ ಚರಣಕಮಲಗಳಿಗೆ ಇದೋ ನಮನ.
ತಾಯಿ ಅಂದರೆ ಅವ್ವ, ಮಾ, ಅಮ್ಮ, ಮಮ್ಮಿ.. ಹೀಗೆ ತಮಗೆ ಪ್ರೀತಿ ಬಂದ ಹೆಸರಿನಲ್ಲಿ ಕರೆಸಿಕೊಳ್ಳುವ ಮಹಾನ್ ಜೀವಿ ಅವ್ವ. ಅನುಕ್ಷಣ, ಅನುದಿನ, ಅನುಗಾಲ ತನ್ನ ಮಕ್ಕಳಿಗಾಗಿ ತ್ಯಾಗ ಮನೋಭಾವದಿಂದ ಶ್ರೇಯಸ್ಸನ್ನೇ ಮಾಡುತ್ತಾ ಜೀವಸವೆಸುವ ದೈವ. ಇದನ್ನು ಅವಳು ಮಾಡುವುದು ನೋವಿನಿಂದಲ್ಲ.
ಯಾವುದೇ ಅಸಹಾಯಕತೆಯಿಂದಲ್ಲ. ಯಾವುದೇ ಅನಿವಾರ್ಯತೆಯಿಂದಲೂ ಅಲ್ಲ. ಅವಳು ಇದನ್ನೆಲ್ಲಾ ಮಾಡುವುದು ತನ್ನ ಮಗುವಿನ ಪ್ರೀತಿಯಾಗಿ, ಪ್ರೀತಿಯಿಂದ, ಪ್ರೀತಿಗೋಸ್ಕರ ಅಷ್ಟೇ. ಅದನ್ನೇ ಅಬ್ದುಲ್ ಕಲಾಮರು ತುಂಬಾ ಸುಂದರವಾಗಿ ಹೇಳುತ್ತಾರೆ. ‘Let us sacrifice our today so that our children can have letter tomorrow’ ಒಬ್ಬ ಹೆಣ್ಣುಮಗಳಿಗೆ ತಾನು ತಾಯಿ ಆಗುತ್ತೇನೆ ಎಂಬ ದಿನದಿಂದ ತನ್ನ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟು ತನ್ನ ಮಗುವಿನ ಬಗ್ಗೆ ಯೋಚನೆ ಮಾಡಲು ಪ್ರಾರಂಭಿಸುತ್ತಾಳೆ. ಸ್ವಭಾವತಹ ಕೆಟ್ಟ ಹೆಂಗಸಾಗಿದ್ದರು ಕೂಡ ತನ್ನ ಮಗುವಿಗೆ ಒಳ್ಳೆಯ ತಾಯಿಯೇ ಆಗುತ್ತಾಳೆ. ಅದಕ್ಕೇ ಹೇಳುವುದು ಜಗತ್ತಿನಲ್ಲಿ ಕೆಟ್ಟ ತಾಯಿ ಎಂದಿಗೂ ಇರಲಾರಳು ಎಂದು. ಏನೇ ಮಾಡಲಿ ಹೇಗೆ ಇರಲಿ ತನ್ನ ಮಗುವೇ ತನಗೆ ಶ್ರೇಷ್ಠ ಎಂಬ ಭಾವ ತಾಯಿಗೆ. ಅದಕ್ಕೆ ಜನಪದರು ತುಂಬಾ ಸುಂದರವಾಗಿ ಹೇಳುತ್ತಾರೆ.
’ಎಲ್ಲರ ಮಕ್ಕಳಂಗ ಅಲ್ಲ ಕಣೋ ನನ್ನಯ್ಯ ನಲ್ಲರಳುಗಣ್ಣು ನಗೆ ಮುಖ, ಕಾಮನಬಿಲ್ಲು ಹೋಲ್ತಾವ ಕುಡಿಹುಬ್ಬು’ ಇದಕ್ಕೊಂದು ದೃಷ್ಟಾಂತ – ಒಂದು ಶಾಲೆ, ಅಲ್ಲಿ ಐದನೇ ತರಗತಿಯ ಕ್ಲಾಸು. ಅಲ್ಲಿ ಒಂದು ದಿನ ಎಲ್ಲರಿಗೂ ಒಂದು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ಅದು ಇಂಗ್ಲೀಷಿನಲ್ಲಿ ಬರೆಯುವುದು. ತಾಯಿಯ ಬಗ್ಗೆ ಎರಡು ನೂರು ಶಬ್ದಗಳಿಗೆ ಮೀರದಂತೆ ಒಂದು ಪ್ರಬಂಧವನ್ನು ಅರ್ಧ ತಾಸಿನಲ್ಲಿ ಬರೆಯುವುದು. ಎಲ್ಲರೂ ಪ್ರಬಂಧವನ್ನು ಬರೆಯಲು ಪ್ರಾರಂಭಿಸುತ್ತಾರೆ. ಆದರೆ ಒಂದು ಹುಡುಗ ಮಾತ್ರ ಕೇವಲ ಎರಡು ನಿಮಿಷದಲ್ಲಿ ತನ್ನ ಪ್ರಬಂಧವನ್ನು ಬರೆದು ಮುಗಿಸಿದ. ಫಲಿತಾಂಶ ಬಂದಾಗ ಅವನು ಪೂರ್ತಿ ಮಾರ್ಕ್ಸ್ ನೊಂದಿಗೆ ಆ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದನು.“Any combination of 26 alphabets can never explain my Mother “ ಇದು ನಿಜವೂ ಹೌದು. ತಾಯಿಯ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ನಮ್ಮ ಮುಖ್ಯ ಕರ್ತವ್ಯ ನಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದರೊಂದಿಗೆ ಅವಳ ಕನಸನ್ನ ನನಸು ಮಾಡುವುದು.
ಡಾ.ಭಾಗ್ಯಜ್ಯೋತಿ ಕೋಟಿಮಠ
ಮುಖ್ಯಶಿಕ್ಷಕಿ, ಶಿರೂರು, ತಾ.ನವಲಗುಂದ