ಹುಬ್ಬಳ್ಳಿ-ಧಾರವಾಡ ಸುದ್ದಿ

ಧಾರವಾಡ ; ಅಹಿಂದ ಫಾರ್ಮುಲಾ ಮುನ್ನಲೆಗೆ

ಜೋಶಿ – ಅಸೂಟಿ ಸೆಣಸಾಟ ತುರುಸಾಗುವ ನಿರೀಕ್ಷೆ

ಲೋಚನೇಶ ಹೂಗಾರ

ಹುಬ್ಬಳ್ಳಿ : 1990ರ ದಶಕದವರೆಗೂ ಕಾಂಗ್ರೆಸ್ ಪಾಲಿಗೆ ಭದ್ರಕೋಟೆಯಾಗಿದ್ದ ಧಾರವಾಡ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳಿಂದ ಬಿಜೆಪಿ ಬಲ ವೃದ್ಧಿಸಿಕೊಳ್ಳುತ್ತಲೇ ಹೋಗಿರುವ ಬಿಜೆಪಿ ’ಅಶ್ವಮೇಧ’ವನ್ನು ಕಟ್ಟಿ ಹಾಕಲೇ ಬೇಕೆಂಬ ಲೆಕ್ಕಾಚಾರದೊಂದಿಗೆ ಈ ಬಾರಿ ಕೈ ಪಡೆ ಮೂಲಕ ಪ್ರಭಾವಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರೆದುರು ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ವಿನೋದ ಅಸೂಟಿಯನ್ನು ಹುರಿಯಾಳಾಗಿಸುವುದರೊಂದಿಗೆ ಚುನಾವಣೆ ಕಣ ರಂಗೇರುವಂತೆ ಮಾಡಿದೆ.
ವಿನೋದ ಅಸೂಟಿ ಹೊಸಬ, ರಾಜಕೀಯ ಪಟ್ಟುಗಳು ಗೊತ್ತಿಲ್ಲ ಎಂಬ ಚರ್ಚೆ ನಡೆಯುತ್ತಿದೆ. ಪ್ರಹ್ಲಾದ ಜೋಶಿಯವರ ಬಾಯಿಗೆ ಲಡ್ಡು ಬಂದು ತಾನಾಗಿಯೇ ಬಿದ್ದಿದೆ ಎಂಬುದು ಚರ್ಚೆಯ ನಡುವೆ ಅಹಿಂದ ಅಭ್ಯರ್ಥಿಯ ಪ್ರಯೋಗದ ಹಿಂದಿನ ಕಾರಣಗಳ ತಾತ್ವಿಕತೆಯು ಚರ್ಚೆಯ ಒಳಗೆ ಕಾಲು ಚಾಚುತ್ತಿದೆ.


ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಕಾರ್ಮಿಕ ಸಚಿವ ಸಂತೋಷ ಲಾಡ, ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪಕ್ಷದಿಂದ ಇತರೆ ಹಿಂದುಳಿದ ವರ್ಗಗಳ ವ್ಯಕ್ತಿಯನ್ನು ಆಯ್ಕೆ ಮಾಡುವುದರಿಂದ ಈ ಚುನಾವಣೆಯನ್ನು ಗೆಲ್ಲಬಹುದು ಎಂಬ ಲೆಕ್ಕಾಚಾರ ಹಾಕಿ, ಈಗಾಗಲೇ ನಾಲ್ಕು ಬಾರಿ ಈ ಲೋಕಸಭಾ ಕ್ಷೇತ್ರದಲ್ಲಿ ಜಯ ಸಾಧಿಸಿ, ಐದನೆಯ ಸಲವೂ ವಿಜಯದ ಹಂಬಲದಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿಗೆ ಟಕ್ಕರ ಕೊಡಬಹುದು ಎಂಬ ಅಭಿಪ್ರಾಯದೊಂದಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರುಗಳ ಒಪ್ಪಿಗೆಯನ್ನೂ ಪಡೆದು ಕೊಂಡಿದ್ದಾರೆ ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ. ಬಹುತೇಕವಾಗಿ ಇದಕ್ಕೆ ಕಾರಣ ಕಳೆದ 5 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸನ ಲಿಂಗಾಯತ ಅಭ್ಯರ್ಥಿಗಳ ವಿರುದ್ದವೇ ಬಿಜೆಪಿ ಜಯ ಸಾಧಿಸಿದೆ.


25 ವರ್ಷಗಳಲ್ಲಿ ಲಿಂಗಾಯತರ ಲಿಂಗಾತತ್ವ ಒಡೆದ ಮನೆಯ ಸಾಗಿದೆ. ಪಂಚಮಸಾಲಿಗಳು, ಬಣಜಿಗರು, ಗಾಣಿಗರು ಮೊದಲಾದ ಲಿಂಗಾಯತ ಉಪ ಪಂಗಡಗಳು ತಮ್ಮದೆ ಮಠಗಳನ್ನು ಕಟ್ಟಿಕೊಂಡು ಹಂಚಿಹೋಗಿದ್ದಾರೆ. ಹೀಗಿರುವುದರಿಂದ ಮತ್ತೊಂದು ಬಾರಿ ಲಿಂಗಾಯತರನ್ನು ಈ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ ಹಾಗೂ ರಾಜ್ಯ ಕಾಂಗ್ರೆಸ್ ನಾಯಕತ್ವ ಹಿಂದೇಟು ಹಾಕಿರಬಹುದಲ್ಲದೇ ಹಿಂದುತ್ವದ ಅಲೆಯಲ್ಲಿ ಅಲ್ಪ ಸಂಖ್ಯಾತರನ್ನು ಪ್ರಯೋಗಿಸಿ ಕೈ ಸುಟ್ಟುಕೊಳ್ಳಲು ಹಿಂದೇಟು ಹಾಕಿದೆ.
ವಿನೋದ ಅಸೂಟಿ ಕುರುಬ ಸಮುದಾಯಕ್ಕೆ ಸೇರಿದವರಾಗಿರುವದರಿಂದ ಆ ಜನಾಂಗದೊಂದಿಗೆ ಅಲ್ಪಸಂಖ್ಯಾತರು ಹಾಗೂ ಮರಾಠರು ಕೈ ಜೋಡಿಸಿದರೆ ಜೋಶಿಯವರಿಗೆ ಪ್ರಬಲ ಪೈಪೋಟಿ ನೀಡಬಹುದು. ಅಲ್ಲದೆ ಕಾಂಗ್ರೆಸ್, ಪಾರಂಪರಿಕವಾಗಿ ನಂಬಿರುವ ಪರಿಶಿಷ್ಠ ಜಾತಿ/ಜನಾಂಗದ ಮತದಾರರು ಶೇ ೬೦ ರಷ್ಟಾದರೂ ಅವರ ಕೈ ಹಿಡಿಯುತ್ತಾರೆ ಎಂಬ ಆಶಾಭಾವವೂ ಕಾಂಗ್ರೆಸಗೆ ಇದ್ಧಂತೆ ಕಾಣುತ್ತದೆ.


ಹಿಂದುತ್ವವೇ ಬೇರೆ, ಲಿಂಗಾಯತವೇ ಬೇರೆ ಎಂದು ಕೊಂಡಿರುವ ಬಸವ ತತ್ವದವರು ಕಾಂಗ್ರೆಸ್ ಬೆಂಬಲಿಸಬಹುದು. ಇದಕ್ಕೆ ಪೂರಕ ಎನ್ನುವಂತೆ ಜಗಜ್ಯೋತಿ ಬಸವೇಶ್ವರರನ್ನು ಕರ್ನಾಟಕದ ಅಧಿಕೃತ ಸಾಂಸ್ಕೃತಿಕ ನಾಯಕರೆಂದು ಸಿದ್ದರಾಮಯ್ಯ ಸರಕಾರದಿಂದ ಘೋಷಿಸಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ನೇರವಾಗಬಹುದು. ಯಡಿಯೂರಪ್ಪನವರ ಲಿಂಗಾಯತ ನಾಯಕತ್ವಕ್ಕೂ ಇದು ಸವಾಲಿನ ಪ್ರಶ್ನೆಯಾಗಿದೆ ಒಟ್ಟಾರೆ ಧಾರವಾಡ ಲೋಕಸಭಾ ಕ್ಷೇತ್ರದ ಈ ಚುನಾವಣೆ ಎರಡೂ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗುವುದರಲ್ಲಿ ಸಂಶಯವಿಲ್ಲ.

administrator

Related Articles

Leave a Reply

Your email address will not be published. Required fields are marked *