ಹುಬ್ಬಳ್ಳಿ-ಧಾರವಾಡ ಸುದ್ದಿ
ಕುಖ್ಯಾತ ಬ್ಯಾಂಡ್ ಬಾಜಾ ಬಾರಾತ್ ಕಳ್ಳತನ ತಂಡ ವಶಕ್ಕೆ

ಕುಖ್ಯಾತ ಬ್ಯಾಂಡ್ ಬಾಜಾ ಬಾರಾತ್ ಕಳ್ಳತನ ತಂಡ ವಶಕ್ಕೆ

61.14 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ

ಧಾರವಾಡ : ರಾಯಾಪೂರ ಸಮೀಪದ ಓಶಿಯನ್ ಪರ್ಲ್ ಕನ್ವೇಷ್ನನಲ್ ಹಾಲ್ ನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿ, ಆರೋಪಿಯಿಂದ 61.14ಲಕ್ಷ ಮೌಲ್ಯದ 964 ಗ್ರಾಂ ತೂಕದ ಚಿನ್ನದ ಆಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ರೇಣುಕಾ ಸುಕುಮಾರ ಹೇಳಿದರು.


ನಗರದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮಾ. 3 ರಂದು ಹುಬ್ಬಳ್ಳಿಯ ಅಧ್ಯಾಪಕ ನಗರದ ಅರುಣಕುಮಾರ ಗಿರಿಯಾಪೂರ ಎಂಬುವರ ಮಗಳ ಮದುವೆ ಆರತಕ್ಷತೆ ಸಂದರ್ಭದಲ್ಲಿ ನಡೆದ ಕಳ್ಳತನದ ಬಗ್ಗೆ ದೂರು ದಾಖಲಾಗಿತ್ತು. ನಂತರ ಎಸಿಪಿ ಬಸವರಾಜ ಬಿ.ಎಸ್. ಮತ್ತು ಸಿಪಿಐ ಸಂಗಮೇಶ ದಿಡಿಗಿನಾಳ ಅವರ ನೇತೃತ್ವದಲ್ಲಿ ತನಿಖೆ ಆರಂಭಿಸಲಾಯಿತು.


ತನಿಖಾ ತಂಡವು ಕಳ್ಳತನದ ಸಿಸಿ ದೃಶ್ಯವೊಂದನ್ನು ಆಧಾರವಾಗಿಟ್ಟುಕೊಂಡು ಪ್ರಕರಣದ ತನಿಖೆಯನ್ನು ಬಾಂಬೆ, ಭೋಪಾಳ, ಇಂದೋರ, ಉಜ್ಜೈನ್, ಗುಜರಾತ್ ಇತರೆಡೆ ಸಂಚರಿಸಿತು. ನಂತರ ಮಧ್ಯಪ್ರದೇಶದ ರಾಜಗಡ ಜಿಲ್ಲೆಯ ಪಚೌರಿ ತಾಲೂಕಿನಲ್ಲಿ ಗ್ರಾಮವೊಂದರ ಹೊರವಲಯದಲ್ಲಿನ ಅಪ್ರಾಪ್ತನನ್ನು ವಶಕ್ಕೆ ಪಡೆದ ತಂಡ, ಆತ ನೀಡಿದ ಮಾಹಿತಿ ಆಧರಿಸಿ ಒಟ್ಟು 61.14ಲಕ್ಷ ಮೌಲ್ಯದ 964 ಗ್ರಾಂ ತೂಕದ ಚಿನ್ನದ ಆಭರಣ ಜಪ್ತಿ ಮಾಡಿದೆ. ಪ್ರಕರಣದಲ್ಲಿ ಭಾಗಿಯಾದ ಮೂವರು ಪ್ರಮುಖ ಆರೋಪಿಗಳು ನಾಪತ್ತೆಯಾಗಿದ್ದು, ಅವರ ಶೋಧನಾ ಕಾರ್ಯ ಮುಂದುವರೆದಿದೆ ಎಂದರು.


ಅಂತರ್ ರಾಜ್ಯ ಕಳ್ಳತನ ಪ್ರಕರಣದಲ್ಲಿ ತೊಡಗಿದ್ದ ಅಪ್ರಾಪ್ತನು, ಹಲವು ಪ್ರಕರಣದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಆದರೆ, ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಯ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.


ಎಸಿಪಿ ಬಸವರಾಜ ಬಿ.ಎಸ್. ಮತ್ತು ಸಿಪಿಐ ಸಂಗಮೇಶ ದಿಡಿಗಿನಾಳ ಅವರ ನೇತೃತ್ವದ ತನಿಖಾ ತಂಡದಲ್ಲಿ ಪಿಎಸ್‌ಐಗಳಾದ ಪ್ರಮೋದ ಎಚ್.ಜಿ., ಬಾಬಾ ಎಂ., ಸಿಬ್ಬಂದಿಗಳಾದ ಐ.ಐ.ಮದರಖಂಡಿ, ಎಂ.ಎಫ್.ನದಾಫ್, ಬಾಬು ಧುಮಾಳ, ಎಂ.ಸಿ.ಮಂಕಣಿ, ಮಹಾಂತೇಶ ಲಮಾಣಿ, ಸಾಗರ ಕುಂಕುಮಗಾರ, ರಮೇಶ ಕೋತಂಬ್ರಿ, ಬಿ.ಎಂ.ಪಟಾತ, ಆನಂದ ಬಡಿಗೇರ, ದಯನಂದ ಗುಂಡಗೈ, ಶಿವಾನಂದ ಕೆಂಪೋಡಿ, ಎಂ.ಎಸ್.ಚಿಕ್ಕಮಠ, ಆರ್.ಕೆ.ಬಡಂಕರ, ಆರ್.ಎಸ್.ಗೋಮಪ್ಪನವರ ಇತರರು ಕಾರ್ಯನಿರ್ವಹಿಸಿದ್ದರು ಎಂದು ಆಯುಕ್ತರು ತಿಳಿಸಿದರು. ಡಿಸಿಪಿಗಳಾದ ರಾಜೀವ ಪಿ., ರವೀಶ ಸಿ.ಆರ್., ಎಸಿಪಿ ಬಸವರಾಜ ಬಿ.ಎಸ್., ಸಿಪಿಐ ಸಂಗಮೇಶ ದಿಡಿಗಿನಾಳ ಮತ್ತು ಸಿಬ್ಬಂದಿ ಸುದ್ದಿಗೋಷ್ಠಿಯಲ್ಲಿದ್ದರು.

administrator

Related Articles

Leave a Reply

Your email address will not be published. Required fields are marked *