ಹುಬ್ಬಳ್ಳಿ: ಲೋಕಸಭೆ ಚುನಾವಣೆ ಘೋಷಣೆ ಯಾವಾಗ ಆಗುತ್ತದೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಇದ್ದರೆ, ಟಿಕೆಟ್ ಪಡೆದು ಆಯ್ಕೆಯಾಗಿ ದೆಹಲಿ ದರ್ಬಾರ್ ಪ್ರವೇಶಿಸಬೇಕು ಎಂದು ಹವಣಿಸುತ್ತಿರುವ ನಾಯಕರ ಕಸರತ್ತು ಈಗಾಗಲೇ ಶುರುವಾಗಿದೆ.
ಮೋದಿ ಮತ್ತೊಮ್ಮೆ ಎಂದು ಘೋಷಣೆ ಎಲ್ಲೆಡೆ ಕೇಳಿ ಬರುತ್ತಿದ್ದು, ಇದೇ ಹವಾದಲ್ಲಿ ಮತ್ತೆ ತಾವೇ ಎಂ.ಪಿ ಆಗಬೇಕು ಎಂದು ಕಾದು ಕುಳಿತಿರುವ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಜೋಡಿ ಬಿಗ್ ಶಾಕ್ ನೀಡಲಿದ್ದಾರೆಂಬ ಸುದ್ದಿ ಸುಂಟರಗಾಳಿಯಂತೆ ಬಿಜೆಪಿ ಮುಖಂಡರ ವಲಯದಲ್ಲಿ ಚರ್ಚಿತವಾಗುತ್ತಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಕೆಲವರಿಗೆ ಕುತುಹೂಲ ತಂದಿದ್ದರೆ, ಬಹುತೇಕ ನಾಯಕರಿಗೆ ನಡುಕ ಶುರುವಾಗಿದೆ.
ಬಿಜೆಪಿ 14 ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಿ ಬಿಗ್ ಶಾಕ್ ನೀಡಲಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಆದರೆ, ಯಾರು ಎಂಬುದು ಮುಚ್ಚಿದ ಲಕೋಟೆ ಬಿಚ್ಚಿದ ಮೇಲೆಯೇ ಬಹಿರಂಗ ಎಂಬುದು ಕುತೂಹಲಕಾರಿಯಾಗಿದೆ.
ಮಿನಿಸ್ಟರ್ ಆಗಿ ಗೂಟದ ಕಾರಿನಲ್ಲಿ ಓಡಾಡುತ್ತಾ ಕರ್ನಾಟಕದಿಂದ ದೆಹಲಿವರೆಗೆ ಹೈ ಲೆವಲ್ ಹವಾ ಮೆಂಟೆನ್ ಮಾಡಿದವರಿಗೆ ಈ ಎಲೆಕ್ಷನ್ ಗಿಂತ ಟಿಕೆಟ್ ಪಡೆಯುವುದು ಪ್ರತಿಷ್ಠೆಯಾಗಿ ಬಿಟ್ಟಿದೆ. ಪಕ್ಷಕ್ಕೆ ಹಿರಿಯರಾಗಿದ್ದರೂ ಪಕ್ಷ ಬಿಟ್ಟು ರೀ ಎಂಟ್ರಿ ಆದವರಿಗೆ, ಟಿಕೆಟ್ ಹಂಚಿಕೆಯಲ್ಲಿ ಅವರ ಮಾತು ನಡೆದು, ಅವರು ಹೇಳಿದವರಿಗೆ ಆದ್ಯತೆ ಸಿಗಬಾರದು ಎಂಬ ಎಚ್ಚರದ ನಡೆ ವಹಿಸಿದ್ದಾರೆ ಎನ್ನಲಾಗಿದೆ.
ಕಳೆದ ಚುನಾವಣೆಯಲ್ಲಿ ಪಾರ್ಟಿ ಸಾಧನೆ, ಮೋದಿ ಸಾಧನೆ ನೋಡಿ ವೋಟ್ ಹಾಕಿರಿ ಎಂದು ಕೈ ಮುಗಿಯುತ್ತಿದ್ದವರು ಈಗಾಗಲೇ ಗುಪ್ತವಾಗಿಟ್ಟಿದ್ದ ತೈಲಿ ಹೊರತೆಗೆದು ಗರಿ ಗರಿ ನೋಟುಗಳನ್ನು ಆಪ್ತರ ಕೈಗೆ ನೀಡಿ ಮುಖಂಡರು, ಕಾರ್ಯಕರ್ತರನ್ನು ತಮ್ಮ ಪರವಾಗಿ ನಿಲ್ಲಲು ಸಜ್ಜು ಗೊಳಿಸುತ್ತಿದ್ದಾರೆ ಎಂಬ ಗುಲ್ಲು ಹರಡಿದೆ. ಅಷ್ಟೇ ಅಲ್ಲ ತಮ್ಮ ಹಿಂಬಾಲಕರೊಂದಿಗೆ ಮತದಾರರ ಬಳಿಗೆ ತೆರಳಿ ಕಷ್ಟ ಕೇಳಿ, ಸಾರ್ವಜನಿಕ ಕೆಲಸವಷ್ಟೇ ಅಲ್ಲ, ವೈಯಕ್ತಿಕ ಕೆಲಸ, ಸಹಾಯ ಮಾಡಿ ವೋಟ್ ಗ್ಯಾರಂಟಿ ಮಾಡುವಲ್ಲಿಯೂ ನಿರತರಾಗಿದ್ದಾರೆ.