ಹುಬ್ಬಳ್ಳಿ-ಧಾರವಾಡ ಸುದ್ದಿ
ಪಶ್ಚಿಮದ ’ಬೆಲ್ಲ’ ತಿನ್ನಲು ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ!

ಪಶ್ಚಿಮದ ’ಬೆಲ್ಲ’ ತಿನ್ನಲು ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ!

ಬಿಜೆಪಿ ಹ್ಯಾಟ್ರಿಕ್ ತಡೆಯಲು ಕಸರತ್ತು

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡಗಳೆರಡರ ಪ್ರದೇಶವನ್ನೂ ಒಳಗೊಂಡಿರುವ ಪಶ್ಚಿಮ ಕ್ಷೇತ್ರದಲ್ಲಿ ಈಗಾಗಲೇ ಮುಂಬರುವ ಚುನಾವಣಾ ಕಾವು ಆರಂಭಗೊಂಡು ಸುಮಾರು 6 ತಿಂಗಳೇ ಕಳೆದಿದೆ. ಯಡಿಯೂರಪ್ಪ ರಾಜೀನಾಮೆಯ ನಂತರ ದಿಢೀರ್ ಆಗಿ ಸಿಎಂ ಸ್ಥಾನಕ್ಕೆ ಕೇಳಿ ಬಂದ ಅರವಿಂದ ಬೆಲ್ಲದ ಪ್ರತಿನಿಧಿಸುವ ಕ್ಷೇತ್ರದಲ್ಲಿ ’ಬೆಲ್ಲ’ ಸವಿಯಲು ಕಾಂಗ್ರೆಸ್ ಪಾಳೆಯದಲ್ಲಿ 10 ಆಕಾಂಕ್ಷಿಗಳಿದ್ದಾರೆ. ಒಂದು ಕಾಲದಲ್ಲಿ ಕೈ ಭದ್ರಕೋಟೆಯೆ ಆಗಿದ್ದ ಇಲ್ಲಿ ಬಹುಸಂಖ್ಯಾತರನ್ನು ಹೊರತು ಪಡಿಸಿಯೂ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಸಮುದಾಯಗಳ ಕಾಂಬಿನೇಶನ್ ಯಶಸ್ವಿ ಆದ ನಿದರ್ಶನವಿರುವುದು ತೀವ್ರ ಪೈಪೋಟಿಗೆ ಕಾರಣವಾಗಿದೆ.


ಕಳೆದೆರಡು ಚುನಾವಣೆಗಳಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಮಣೆ ಹಾಕಿ ತೀವ್ರ ಜಿದ್ದಾಜಿದ್ದಿಯ ಹೋರಾಟ ನೀಡಿತಾದರೂ ಫಲಿತಾಂಶ ಬಂದಾಗ ಮತ್ತೆ ಕಮಲ ಪಡೆಯೆ ಕೇಕೆ ಹಾಕಿತ್ತು. 2013 ಮತ್ತು 2018ರಲ್ಲಿ ಗೆಲುವು ಸಾಧಿಸಿ ಹ್ಯಾಟ್ರಿಕ್ ವಿಜಯದ ನಿರೀಕ್ಷೆಯಲ್ಲಿರುವ ಅರವಿಂದ ಬೆಲ್ಲದಗೆ ಟಿಕೆಟ್ ನಿಶ್ಚಿತ ಎನ್ನುವಂತಿದ್ದರೂ ಕುಟುಂಬ ರಾಜಕಾರಣದ ವಿಷಯ ಮುಂದಿಟ್ಟು ತೆರೆಮರೆಯ ಕಸರತ್ತು ಮಾತ್ರ ನಡೆದಿದೆ. ಹುಬ್ಬಳ್ಳಿ – ಧಾರವಾಡ ಅವಳಿನಗರದ ಪ್ರಥಮ ಪ್ರಜೆಯಾಗಿ ಭರವಸೆ ಹುಟ್ಟಿಸಿರುವ ಅಲ್ಲದೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಪರಮಾಪ್ತರಾದ ಈರೇಶ ಅಂಚಟಗೇರಿ, ಅಲ್ಲದೇ 2013ರಲ್ಲಿ ಈ ಕ್ಷೇತ್ರದಲ್ಲಿ ಪ್ರಬಲವಾಗಿ ಕೇಳಿ ಬಂದಿದ್ದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೆಸರು ಪ್ರಸ್ತಾಪಕ್ಕೆ ಬರುವಂತದ್ದಾಗಿದೆ. ಅಲ್ಲದೆ ಸಿಎಂ ಬೊಮ್ಮಾಯಿ ಅವರ ಆಪ್ತರಾಗಿರುವ ಕೆಎಸ್‌ಎಸ್‌ಐಡಿಸಿ ನಿರ್ದೇಶಕ, ಪಾಟೀಲ ಇಂಡಸ್ಟ್ರೀಜ್ ಸಿಇಒ ಎಸ್.ಸಿ.ಪಾಟೀಲ (ರಾಜು) ಕೂಡಾ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಹಲವು ಅಭಿವೃದ್ಧಿ ಕಾರ್ಯ ಅಲ್ಲದೇ ಕೇಂದ್ರದ ಅನೇಕ ಯೋಜನೆಗಳನ್ನು ತರುವಲ್ಲಿ ಯಶಸ್ವಿಯಾದ ಬೆಲ್ಲದ ಬಗ್ಗೆ ಮೇಲ್ನೋಟಕ್ಕೆ ಹೇಳಿಕೊಳ್ಳುವ ಅಸಮಾಧಾನವಿಲ್ಲದಿದ್ದರೂ ಜಾತಿ ಲೆಕ್ಕಾಚಾರ ಮಾತ್ರ ’ನಿಗೂಢ’ವಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಜತೆಗೆ ಬೆಲ್ಲದ ಸಂಬಂಧ ಅಷ್ಟಕ್ಕಷ್ಟೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯವಾಗಿದೆ.


ಉಳಿದಂತೆ ಈ ಕ್ಷೇತ್ರದಲ್ಲಿ ಕೈ – ಕಮಲ ನೇರ ಪೈಪೋಟಿಯಿದ್ದು ಕಾಂಗ್ರೆಸ್‌ನಲ್ಲಿ ಮಾತ್ರ ಟಿಕೆಟ್ ಯಾರಿಗೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಪರಿಣಮಿಸಿದೆ. 10 ಆಕಾಂಕ್ಷಿಗಳ ಪೈಕಿ ಎಲ್ಲರೂ ಜಿದ್ದಿಗೆ ಬಿದ್ದವರಂತೆ ಪ್ಲೆಕ್ಸ್, ಬ್ಯಾನರ್ ಮೇಲಾಟ ನಡೆಸಿದ್ದಾರಲ್ಲದೇ ಆರೋಗ್ಯ ತಪಾಸಣೆ, ಪಾದಯಾತ್ರೆ, ಕಾರ್ಯಕ್ರಮಗಳಿಗೆ ನೆರವಿನ ಹಸ್ತಗಳನ್ನು ನೀಡುತ್ತ ಜನಮನ ಗೆಲ್ಲುವ ಯತ್ನ ನಡೆಸಿದ್ದಾರೆ. ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಕಾಂಗ್ರೆಸ್ ವಕ್ತಾರ ಪಿ.ಎಚ್.ನೀರಲಕೇರಿ, ರಾಣಿ ಚೆನ್ನಮ್ಮ ಬ್ಲಾಕ್ ಮಾಜಿ ಅಧ್ಯಕ್ಷ ಬಸವರಾಜ ಮಲಕಾರಿ, ಹಾಲಿ ಚೆನ್ನಮ್ಮ ಬ್ಲಾಕ ಅಧ್ಯಕ್ಷ ನಾಗರಾಜ ಗೌರಿ, ಪಾಲಿಕೆ ಸದಸ್ಯ ಡಾ.ಮಯೂರ ಮೋರೆ. ಹಿರಿಯ ಮುಖಂಡ ಡಾ.ಶರಣಪ್ಪ ಮತ್ತಿಕಟ್ಟಿ, ಮಾಜಿ ಪಾಲಿಕೆ ಸದಸ್ಯ ಹಾಗೂ ಹುಬ್ಬಳ್ಳಿ ಅಂಜುಮನ್ ಉಪಾಧ್ಯಕ್ಷ ಅಲ್ತಾಫ್ ನವಾಜ ಕಿತ್ತೂರ,ಯುವ ಮುಖಂಡರಾದ ಆರ್.ಕೆ.ಪಾಟೀಲ,ರಫೀಕ್ ಸಾವಂತನವರ ಅಲ್ಲದೇ ಮಾಜಿ ಸಚಿವ ದಿ.ಎಸ್.ಆರ್.ಮೋರೆಯವರ ಪುತ್ರಿ ಕೀರ್ತಿ ಮೋರೆ ಈಗಾಗಲೇ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಎಲ್ಲರೂ ತಮ್ಮದೇ ಲೆಕ್ಕಾಚಾರದಲ್ಲಿದ್ದು ಇತ್ತೀಚೆಗೆ ನಡೆದ ಪ್ರಜಾಧ್ವನಿಯಲ್ಲೂ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ.


ಕಳೆದ ಪಾಲಿಕೆ ಚುನಾವಣೆಯಲ್ಲಿ ಈ ಕ್ಷೇತ್ರದ ೨೫ ವಾರ್ಡಗಳ ಪೈಕಿ ಬಿಜೆಪಿ 13 ಸ್ಥಾನಗಳಲ್ಲಿ ಗೆದ್ದಿದ್ದರೂ ಕಾಂಗ್ರೆಸ್ 10 ಸ್ಥಾನ ಗಳಿಸಿದೆ. ತಲಾ ಒಂದು ಸ್ಥಾನ ಜೆಡಿಎಸ್ ಮತ್ತು ಪಕ್ಷೇತರರು ಗೆದ್ದಿದ್ದಾರೆ. ಬಿಜೆಪಿ ಶೇ.41.37ರಷ್ಟು ಮತ ಪಡೆದರೆ, ಕಾಂಗ್ರೆಸ್ ಸಹ ಶೇ. 38.73ಮತ ಪಡೆದಿದೆಯಲ್ಲದೇ ಶೇ.12.91 ಮತ ಹೆಚ್ಚಿಗೆ ಪಡೆದಿರುವುದು ಕೈ ಪಾಳೆಯದಲ್ಲಿ ಆಕಾಂಕ್ಷಿಗಳು ಹೆಚ್ಚಾಗಲು ಕಾರಣವಾಗಿದೆ.


ಕಳೆದೆರಡು ಬಾರಿ ಅಲ್ಪಸಂಖ್ಯಾತರಿಗೆ ನೀಡಿ ಹಿನ್ನೆಡೆ ಆಗಿದ್ದು ಈ ಬಾರಿ ಬಹು ಸಂಖ್ಯಾತರಿಗೆ ಅಥವಾ ಹಿಂದುಳಿದವರಿಗೆ ನೀಡಬೇಕೆಂಬ ವಾದ ಕಾಂಗ್ರೆಸ್‌ನಲ್ಲಿ ಮುನ್ನೆಲೆಗೆ ಬಂದಿದೆ. ಕಳೆದ ಬಾರಿಯ ಕೈ ಹುರಿಯಾಳು ಇಸ್ಮಾಯಿಲ್ ತಮಾಟಗಾರ ಈಗ ಗ್ರಾಮೀಣದತ್ತ ಮುಖ ಮಾಡಿದ್ದಾರೆ. ಜೆಡಿಎಸ್‌ನಿಂದ ಮಹಾನಗರ ಅಧ್ಯಕ್ಷ ಗುರುರಾಜ ಹುಣಸಿಮರದ, ಆಮ್ ಆದ್ಮಿ ಪಕ್ಷದಿಂದ ಎಂ.ಅರವಿಂದ ಕಣಕ್ಕಿಳಿಯುವುದು ನಿಕ್ಕಿ ಎನ್ನಲಾಗುತ್ತಿದೆ.


ಪ್ರಬುದ್ಧ ಮತದಾರರನ್ನು ಹೆಚ್ಚಾಗಿ ಹೊಂದಿರುವ ಈ ಕ್ಷೇತ್ರದಲ್ಲಿ ಎಲ್ಲ ಪಕ್ಷಗಳ ಅಭ್ಯರ್ಥಿಗಳ ಘೋಷಣೆಯಾದ ನಂತರ ಸ್ಪಷ್ಟ ಚಿತ್ರಣ ದೊರೆಯಲಿದ್ದು ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿ,ಎಂಐಎಂಗಳು ಕಣಕ್ಕೆ ಎಂಟ್ರಿ ಕೊಟ್ಟರೂ ಯಾವುದೇ ಅಚ್ಚರಿಯಿಲ್ಲ.

administrator

Related Articles

Leave a Reply

Your email address will not be published. Required fields are marked *