ಕಲಘಟಗಿ: ಈಚೆಗೆ ಸುರಿದ ನಿರಂತರ ಮಳೆಯಿಂದಾಗಿ ಒಡೆದು ಹೋಗಿದ್ದ ಹಟಕಿನಾಳ ಗ್ರಾಮದ ಜಿಗಳಿ ಕೆರೆಯ ಒಡ್ಡು ದುರಸ್ತಿ ಕಾರ್ಯ ಸಣ್ಣ ನೀರಾವರಿ ಇಲಾಖೆಯಿಂದ ಭರದಿಂದ ಸಾಗಿದೆ. ತಾತ್ಕಾಲಿಕವಾಗಿ ಉಸುಕು ತುಂಬಿದ ಚೀಲಗಳಿಂದ ದುರಸ್ತಿಗೊಳಿಸಲಾಗುತ್ತಿದೆ.
ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ನಿರಂತರವಾಗಿ ಸುರಿದ ಮಳೆಯಿಂದಾಗಿ ತಾಲೂಕಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜಿಗಳಿ ಕೆರೆ ಕಟ್ಟೆ ಒಡೆದು ಹೋಗಿ ಕೆರೆಯ ಒಡಲು ಬರಿದಾಗಿತ್ತು. ಅಲ್ಲದೇ ಕೆಳಭಾಗದ ರೈತರ ಬೆಳೆ ಹಾನಿಯಾಗಿತ್ತು.
ಶಾಸಕ ಸಿ.ಎಂ. ನಿಂಬಣ್ಣವರ ಸ್ಥಳ ಪರಿಶೀಲನೆ ನಡೆಸಿ, ಕೆರೆ ಕಟ್ಟೆ ಪುನರ್ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಕಲ್ಪಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಲು ಪ್ರಸ್ತಾವನೆ ತಯಾರಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಗಳಿಗೆ ಸೂಚಿಸಿದ್ದರು. ಅಲ್ಲದೇ ಬೆಳೆ ಹಾನಿ ಕುರಿತು ಸಮರ್ಪಕ ಯಾದಿ ತಯಾರಿಸಿ ಪರಿಹಾರ ಒದಗಿಸುವಂತೆಯೂ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೂ ಸೂಚಿಸಿದ್ದರು.
ಸಣ್ಣ ನೀರಾವರಿ ಇಲಾಖೆ ಸುಪರ್ದಿಯಲ್ಲಿರುವ ಕೆರೆಯು ೨೭ ಎಕರೆ ವಿಸ್ತೀರ್ಣ ವ್ಯಾಪ್ತಿ ಹೊಂದಿದ್ದು, ೮.೪೩ ಎಂಸಿಎಫ್‌ಟಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಕೆರೆಯು ೫೪೫ ಮೀಟರ್ ಉದ್ದದ ಬಂಡನ್ನು ಹೊಂದಿದೆ. ಈಗಾಗಲೇ ಮಳೆ ಪುನಃ ಆರಂಭಗೊಳ್ಳುವ ಮುನ್ಸೂಚನೆ ಇದ್ದು, ಕೆರೆಯ ಒಡಲು ಸಂಪೂರ್ಣ ತುಂಬಿದಲ್ಲಿ ನೂರಾರು ಎಕರೆ ಜಮೀನಿಗೆ ನೀರಾವರಿಗೆ ಸಹಕಾರಿಯಾಗಲೆಂದು ತಾತ್ಕಾಲಿಕ ದುರಸ್ತಿ ಕಾಮಗಾರಿ ಆರಂಭಿಸಲಾಗಿದೆ. ಸುಮಾರು ೪ರಿಂದ ೫ ಸಾವಿರ ಉಸುಕಿನ ಚೀಲಗಳನ್ನು ತುಂಬಿಸಿ ಕೆರೆಯ ಒಡ್ಡನ್ನು ದುರಸ್ತಿಗೊಳಿಸಲು ಮುಂದಾಗಲಾಗಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಎಚ್.ಟಿ. ನಟೇಶ ತಿಳಿಸಿದ್ದಾರೆ.