30 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಗಟಾರ ನಿರ್ಮಾಣ- ಅಬ್ಬಯ್ಯ
ಹುಬ್ಬಳ್ಳಿ: ಬೀರಬಂದ್ ಓಣಿ ಹಾಗೂ ಬಾಣತಿಕಟ್ಟಾ ಪ್ರದೇಶದ ಒಳ ರಸ್ತೆಗಳ ಕಾಂಕ್ರೀಟಿಕರಣ ಹಾಗೂ ಗಟಾರ ನಿರ್ಮಾಣಕ್ಕೆ 30 ಲಕ್ಷ ರೂ. ಅನುದಾನ ಒದಗಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಭರವಸೆ ನೀಡಿದರು.
ಸೋಮವಾರ ಇಲ್ಲಿನ ವಾರ್ಡ್ ನಂ.62ರಲ್ಲಿ ಬರುವ ಹಳೇ ಹುಬ್ಬಳ್ಳಿ ಬೀರಬಂದ್ ಓಣಿ ಹಾಗೂ ಬಾಣತಿಕಟ್ಟಾ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಕುಂದು ಕೊರತೆ ಆಲಿಸಿ ಮಾತನಾಡಿದ ಅವರು, ಸಿಸಿ ರಸ್ತೆ, ಗಟಾರ ನಿರ್ಮಾಣದ ಜೊತೆಗೆ ಯುಜಿಡಿ ಸಮಸ್ಯೆ ನಿವಾರಣೆಗೂ ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೀರಬಂದ್ ಓಣಿಯ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು, ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳ ದುರಸ್ತಿ ಹಾಗೂ ನೂತನ ಕೊಠಡಿಗಳ ನಿರ್ಮಾಣಕ್ಕೆ ಶೀಘ್ರ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೇ, ಅತ್ಯಂತ ಶಿಥಿಲಾವಸ್ಥೆಯಲ್ಲಿರುವ ಸಮುದಾಯ ಭವನ ಕಟ್ಟಡವನ್ನು ಕೂಡಲೇ ತೆರವುಗೊಳಿಸಿ, ಅಲ್ಲಿನ ಅಂಗನವಾಡಿ ಕೇಂದ್ರವನ್ನು ಬೇರೆಡೆ ಸ್ಥಳಾಂತರಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ಹಳೇಹುಬ್ಬಳ್ಳಿ ಭಾಗವನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ್ದು, ಇಲ್ಲಿನ ಅನೇಕ ಕೊಳಚೆ ಪ್ರದೇಶಗಳು ಇದೀಗ ಪ್ರತಿಷ್ಠಿತ ಬಡಾವಣೆಗಳ ರೀತಿಯಲ್ಲಿ ಪರಿವರ್ತನೆಗೊಂಡಿವೆ ಎಂದು ಹೇಳಿದರು.
ಪಾಲಿಕೆ ಮಾಜಿ ಸದಸ್ಯರಾದ ಅಲ್ತಾಫ್ ಕಿತ್ತೂರು, ದಶರಥ ವಾಲಿ, ವಿಜನಗೌಡ ಪಾಟೀಲ, ಮುಖಂಡರಾದ ಮುಸ್ತಾಕ್ ಮುದಗಲ್, ಅಬ್ಬು ಬಿಜಾಪುರ, ಸೈಯದ್ ಸಲೀಂ ಮುಲ್ಲಾ, ನಾಸಿರ್ ಅಸುಂಡಿ, ಪ್ರಸನ್ನ ಮಿರಜಕರ್, ಪಾಲಿಕೆ ವಲಯ ಅಧಿಕಾರಿ ರಿಯಾಜ್, ಇತರರು ಇದ್ದರು.