ಹಾನಗಲ್: ಎಡಬಿಡದೇ ಸುರಿದ ಭಾರಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ್ದರಿಂದ ಇದೀಗ ತಾಲೂಕಾಡಳಿತ ತೆರೆದಿರುವ ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಹಾನಗಲ್ ತಾಲೂಕಿನ ಚಿಕ್ಕೇರಿ ಹೊಸಳ್ಳಿ ಮತ್ತು ಹಿರೇಕಣಗಿ ಗ್ರಾಮಗಳ ಸಂತ್ರಸ್ತರನ್ನು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ಭೇಟಿ ಮಾಡಿ, ಧೈರ್ಯ ತುಂಬಿದರು.
ಸ್ಥಳದಲ್ಲಿದ್ದ ತಹಶೀಲ್ದಾರ್ ಪಿ.ಎಸ್.ರ‍್ರಿಸ್ವಾಮಿ ಅವರಿಗೆ ನಿರಾಶ್ರಿತ ಕೇಂದ್ರಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿ, ಸಂತ್ರಸ್ತರ ಮೊಗದಲ್ಲಿ ಮಂದಹಾಸ ಮೂಡಿಸುವಂತೆ ಸೂಚಿಸಿದರು.
ತಾಲೂಕಿನ ಕೆಲ ಗ್ರಾಮಗಳು ಒಂದೇ ದಿನ ಎಡಬಿಡದೇ ಮಳೆ ಸುರಿದರೆ ತೊಂದರೆಗೆ ಸಿಲುಕಲಿವೆ. ಇಂಥ ಗ್ರಾಮಗಳ ಯಾದಿ ಸಿದ್ಧಪಡಿಸಿ ಕ್ರಿಯಾ ಯೋಜನೆ ಮಾಡಿಟ್ಟುಕೊಂಡರೆ ಸರ್ಕಾರದ ಅನುದಾನದ ಲಭ್ಯತೆ ಆಧರಿಸಿ ಕಾಮಗಾರಿ ಕೈಗೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ನೀಡುವಂತೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ನಿರಾಶ್ರಿತರು, ಕಳೆದ ೪೦ ವರ್ಷಗಳಿಂದ ಮಳೆ ಸುರಿದಾಗಲೆಲ್ಲ ನಾವು ನಿರಾಶ್ರಿತರ ಕೇಂದ್ರ ಅವಲಂಬಿಸುವುದು ತಪ್ಪಿಲ್ಲ. ಈ ಬಗೆಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾರೊಬ್ಬರೂ ಕಿವಿಗೊಟ್ಟಿಲ್ಲ. ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಕೆರೆ ಕೋಡಿ ದುರಸ್ತಿ ಪಡಿಸಿ ನೀರು ಗ್ರಾಮಕ್ಕೆ ನುಗ್ಗದಂತೆ ಕ್ರಮ ಕೈಗೊಂಡರೆ ತೊಂದರೆ ತಪ್ಪಲಿದೆ ಎಂದರು.
ತಾಪA ಇಒ ಸುನೀಲ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಎಸ್. ಪಾಟೀಲ, ಹಾನಗಲ್ ಪುರಸಭೆ ಉಪಾಧ್ಯಕ್ಷ ಮಹೇಶ್ ಪವಾಡಿ, ಮುಖಂಡ ರಾದ ರಾಮೂ ಯಳ್ಳೂರ, ಮಾರುತಿ ಪುರ್ಲಿ, ರಾಜೂ ಗುಡಿ, ನಾಗಪ್ಪ ಚವ್ಹಾಣ, ನಾಗರಾಜ್ ಕರೆಣ್ಣನವರ, ಅರ್ಜುನ್ ಮಂತಗಿ, ಸೋಮಣ್ಣ ದೊಡ್ಡಕುರುಬರ, ಸುರೇಶ್ ದೊಡ್ಡಕುರುಬರ, ಸುರೇಶ್ ಹುಣಶೆಟ್ಟಿಕೊಪ್ಪ, ಬಸವರಾಜ್ ಇಂಗಳಕಿ, ವಿರುಪಾಕ್ಷಪ್ಪ ಮೂಡೂರು, ಅಣ್ಣಪ್ಪ ಅಲಗೋಡ ಸೇರಿದಂತೆ ಇತರರಿದ್ದರು.