ಹುಬ್ಬಳ್ಳಿ-ಧಾರವಾಡ ಸುದ್ದಿ
ಹಾನಗಲ್ ಉಪಚುನಾವಣೆ: ಕಟ್ಟೇಗೌಡರ ಹೆಸರು ಮುನ್ನೆಲೆಗೆ!

ಹಾನಗಲ್ ಉಪಚುನಾವಣೆ: ಕಟ್ಟೇಗೌಡರ ಹೆಸರು ಮುನ್ನೆಲೆಗೆ!

ಹಾವೇರಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದ್ದು ತನ್ಮಧ್ಯೆ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ದಿಢೀರ್ ಆಗಿ ಅಕ್ಟೋಬರ್ ೩೦ಕ್ಕೆ ಉಪಚುನಾವಣೆ ಘೋಷಣೆಯಾಗಿದೆ.


ಮಾಜಿ ಸಚಿವ, ಜಿಲ್ಲೆಯ ಹಿರಿಯ ರಾಜಕಾರಣಿ ಸಿ.ಎಂ.ಉದಾಸಿಯವರ ನಿಧನದಿಂದ ತೆರವಾದ ಸ್ಥಾನಕ್ಕೆ ಬಿಜೆಪಿಯಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಕಳೆದ ಅನೇಕ ವರ್ಷಗಳಿಂದ ಪಕ್ಷದಲ್ಲಿರುವ ಅಲ್ಲದೇ ’ಸಂಘ’ ಮೂಲದವರಾಗಿರುವ ರಾಜಶೇಖರಗೌಡ ಕಟ್ಟೆಗೌಡರ ಹೆಸರು ಏಕಾಏಕಿ ಮುಂಚೂಣಿಗೆ ಬಂದಿದೆ.


೨೦೧೮ರಲ್ಲಿ ಮುಂಬೈ, ಅಲ್ಲದೇ ತೆಲಂಗಾಣದ ಮಲಕಾಜರಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿರುವ ಅಲ್ಲದೇ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಟೊಂಕ ಕಟ್ಟಿ ಕಾರ್ಯ ನಿರ್ವಹಿಸಿರುವ ಕಟ್ಟೆಗೌಡರಿಗೆ ಮಾಜಿ ಮುಖ್ಯಮಂತ್ರಿ ಗ್ರಾಮೀಣಾಭೀವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸಹಿತ ಅನೇಕ ಮುಖಂಡರುಗಳ ಬೆಂಬಲವಿದ್ದು ಈಗಾಗಲೇ ತಮಗೆ ಟಿಕೆಟ್ ನೀಡಬೇಕೆಂದು ವರಿಷ್ಠರಿಗೆ ಅಹವಾಲು ಸಲ್ಲಿಸಿದ್ದಾರಲ್ಲದೇ ಕ್ಷೇತ್ರದಲ್ಲಿನ ಪೂರಕ ವಾತಾವರಣದ ಬಗೆಯೂ ವಿವರಿಸಿದ್ದಾರೆ.


’ಸಂಜೆ ದರ್ಪಣ’ದೊಂದಿಗೆ ಮಾತನಾಡಿದ ಅವರು ಹಾನಗಲ್ ಕ್ಷೇತ್ರದ ಆಕಾಂಕ್ಷಿಯಾಗಿದ್ದು ಪಕ್ಷದ ವರಿಷ್ಠರು ಅವಕಾಶ ನೀಡಿದಲ್ಲಿ ಕಣಕ್ಕಿಳಿಯುವುದಾಗಿ ಹೇಳಿದರಲ್ಲದೇ ತಮ್ಮ ಸೇವೆ, ಹಿರಿತನ ಆಧರಿಸಿ ಒಲವು ತಮ್ಮ ಪರವಾಗಿದೆ ಎಂದು ಹೇಳಿದರು.
ಕಾಂಗ್ರೆಸ್‌ನಿಂದ ಕಳೆದ ಬಾರಿ ಪರಾಭವಗೊಂಡಿರುವ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಮತ್ತೆ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತವಾಗಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೂ ತವರು ಜಿಲ್ಲೆಯ ಚುನಾವಣೆ ಪ್ರತಿಷ್ಠೆಯಾಗಿದ್ದು, ಕಮಲ ಪಡೆ ಯಾರಿಗೆ ಮಣೆ ಹಾಕಲಿದೆ ಎಂದು ಕಾದುನೋಡಬೇಕಾಗಿದೆ. ಸಂಸದ ಶಿವಕುಮಾರ ಉದಾಸಿ ತಮ್ಮ ಪತ್ನಿಯನ್ನು ಇಳಿಸಲಿದ್ದಾರೆಂಬ ವದಂತಿಯೂ ಹರಿದಾಡುತ್ತಿದೆ.

administrator

Related Articles

Leave a Reply

Your email address will not be published. Required fields are marked *