ಕಲಘಟಗಿ: ದೇಶಕ್ಕೆ ಅನ್ನಹಾಕುವ ರೈತ ಇಂದು ತಾನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಹಾಗೂ ಸಾಲ ಮಾಡಿ ಬಿತ್ತನೆ ಮಾಡಿದ ಶ್ರಮಕ್ಕೆ ಪ್ರತಿಫಲ ಸಿಗದೇ ಇರುವ ಹಿನ್ನೆಲೆಯಲ್ಲಿ ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಿದ್ದು, ಇಂತಹ ಪರಿಸ್ಥಿತಿಯನ್ನು ಅರ್ಥೈಸಿ ಕೊಂಡು ರಾಜ್ಯ ಸರ್ಕಾರ ಕೂಡಲೇ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹತ್ತು ಲಕ್ಷ ಪರಿಹಾರ ವನ್ನು ನೀಡಬೇಕು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ನಾಗರಾಜ ಛಬ್ಬಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ಕೆಲವು ದಿನಗಳ ಹಿಂದೆ ಕಲಘಟಗಿ ತಾಲೂಕಿನ ಜಿ.ಬಸವನಕೊಪ್ಪದ ಯುವ ರೈತ ಮಹಾಂತೇಶ ಮಹಾದೇವಪ್ಪ ಹೊನ್ನಾಪೂರ ಅವರ ಕುಟುಂಬಕ್ಕೆ ಸಿಎಂ ಬಸವರಾಜ ಬೊಮ್ಮಾಯಿಯವರು ಕೂಡಲೇ ಮೃತ ರೈತನ ಕುಟುಂಬಕ್ಕೆ ನೆರವು ನೀಡುವ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿ ಯಿಂದ ಹತ್ತು ಲಕ್ಷ ಪರಿಹಾರವನ್ನು ನೀಡಬೇಕು. ಯುವ ರೈತ ಮಹಾಂತೇಶನ ಆತ್ಮಹತ್ಯೆಯಿಂದ ರೈತನ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ರಾಜ್ಯ ಸರ್ಕಾರ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗುರುನಾಥ ದಾನವೇನವರ, ಅರ್ಜುನ ಅಂಗಡಿ, ಹನುಮಂತಪ್ಪ ಹೊನ್ನಾಪೂರ, ಹನುಮಂತಪ್ಪ ಡೊಳ್ಳಿನ, ಮಡಿವಾಳಪ್ಪ ಮಡಿವಾಳರ, ಹುಲ್ಲಪ್ಪ ಕೊಟಗುಣಸಿ, ಮಾಯಪ್ಪ ಅಪ್ಪೋಜಿ, ತಿಪ್ಪಣ್ಣ ಹೊನ್ನಾಪೂರ, ಬಸನಗೌಡ ಪಾಟೀಲ, ಈರಪ್ಪ ಕೊಟಗುಣಸಿ, ಬಸಯ್ಯ ದುರ್ದಂಡಿಮಠ, ಶ್ರೀಶೈಲ್ ಬಡಿಗೇರ, ಸತ್ಯಪ್ಪ ಹರಿಜನ, ಕಿರಣ ಪಾಟೀಲ ಕುಲಕರ್ಣಿ, ಮದನ್ ಕುಲಕರ್ಣಿ, ಅಣ್ಣಪ್ಪ ಓಲೇಕಾರ, ಶಂಕರ ಮುಗಳಿ, ಮುದಕಪ್ಪ ಮೊರೆಯ, ಕಾಡಪ್ಪ, ಇಮಾಮ್ ಸಾಬ ಸೇರಿದಂತೆ ಊರಿನ ಹಿರಿಯರು ಉಪಸ್ಥಿತರಿದ್ದರು.