ಕೊಪ್ಪಳ: ತಾಲೂಕಿನ ತಹಸೀಲ್ದಾರ್ ಅಮರೇಶ ಬಿರಾದಾರ್ ಅವರು ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ (ರಿ) ರಾಜ್ಯಾಧ್ಯಕ್ಷ ಶರಣಗೌಡ ಪಾಟೀಲ ಕೆಸರಟ್ಟಿ ಅವರಿಗೆ ಕಳಿಸಿರುವ ನೊಟೀಸ್ ವಿವಾದ ಸೃಷ್ಟಿಸಿದೆ. ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ರೈತ ನಾಯಕರ ದೂರಿನ ವಿಚಾರಣೆ ನಡೆಯಬೇಕಾಗಿದ್ದ ದಿನದ ನಂತರ ನೋಟೀಸ್ ಹೋಗುವಂತೆ ತಹಸೀಲ್ದಾರ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗಂಗಾವತಿಯ ಕೆಸರಟ್ಟಿ ಗ್ರಾಮದ ಶರಣಗೌಡ ಪಾಟೀಲ್ ಅವರು ಕೊಪ್ಪಳ ತಾಲೂಕಿನ ಹಲಗೇರಿಯ ಜಮೀನಿಗೆ ಸಂಬಂಧಿಸಿದಂತೆ ಇದೇ ವರ್ಷ ಸೆಪ್ಟೆಂಬರ್ 17 ರಂದು ದೂರೊಂದನ್ನು ದಾಖಲಿಸಿದ್ದರು. ಸದರಿ ದೂರಿಗೆ ಸಂಬಂಧಿಸಿದಂತೆ 18-10-2021 ರಂದು ಮಧ್ಯಾಹ್ನ 3 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಕೊಪ್ಪಳ ತಹಸೀಲ್ದಾರ್ ಅವರು ದಿನಾಂಕ: 04-10-2021 ರಂದು ನೋಟೀಸ್ ಸಿದ್ಧಪಡಿಸುತ್ತಾರೆ.
ʼವಿಚಾರಣೆ 18-10-2021 ರಂದು ಮಧ್ಯಾಹ್ನ 3 ಗಂಟೆಗೆ ತಹಸೀಲ್ದಾರ್ ಕಾರ್ಯಾಲಯದಲ್ಲಿ ನಡೆಯಲಿದ್ದು, ಸಂಬಂಧಿಸಿದ ದಾಖಲೆಗಳೊಂದಿಗೆ ಹಾಜರಾಗಬೇಕು. ತಪ್ಪಿದಲ್ಲಿ, ದಾಖಲೆಗಳ ಆಧಾರದ ಮೇಲೆ ತಮ್ಮ ಅರ್ಜಿಯನ್ನು ವಿಲೇಗೊಳಿಸಲಾಗುವುದುʼ ಎಂದು ನೋಟೀಸಿನಲ್ಲಿ ತಿಳಿಸಿದ್ದಾರೆ.
ಆದರೆ, ಈ ನೋಟೀಸನ್ನು ಅಂಚೆಗೆ ಹಾಕಿದ್ದು ಮಾತ್ರ 16-10-2021 ರಂದು. ಅದು ಶರಣಗೌಡರನ್ನು ತಲುಪಿದ್ದು 20-10-2021 ರಂದು.
ʼಹೀಗೆ ನೋಟೀಸ್ ಕಳಿಸುವ ವ್ಯಕ್ತಿ, ಅದನ್ನು ಎಷ್ಟು ದಿನ ಮುಂಚಿತವಾಗಿ ಕಳಿಸಬೇಕು ಎಂಬುದನ್ನು ಯೋಚಿಸಲಾಗದಷ್ಟು ತಿಳಿಗೇಡಿಯೆ? ಕೆಎಎಸ್ ದರ್ಜೆಯ ಅಧಿಕಾರಿಯಾಗಿರುವ ತಹಸೀಲ್ದಾರರೇ ಈ ರೀತಿ ಕೆಲಸ ಮಾಡುವುದಾದರೆ, ಅವರ ಆಧೀನ ಸಿಬ್ಬಂದಿ ಹೇಗೆ ಕೆಲಸ ಮಾಡಬಹುದು? ಇಂತಹ ಅಸಮರ್ಥ ಹಾಗೂ ಬೇಜವಾಬ್ದಾರಿ ಅಧಿಕಾರಿಗಳಿಂದ ಏನು ಕೆಲಸವಾಗಲು ಸಾಧ್ಯ?ʼ ಎಂದು ಪ್ರಶ್ನಿಸಿ ತಮ್ಮ ಸಂಘಟನೆಯ ಫೇಸ್ ಬುಕ್‌ನಲ್ಲಿ ಶರಣಗೌಡರು ವಿವರ ಹಾಕಿದ್ದಾರೆ.
ಕೊಪ್ಪಳ ತಹಸೀಲ್ದಾರ್ ಅಮರೇಶ ಬಿರಾದಾರ್ ಕೆಲಸ ಮಾಡುವುದೇ ಹೀಗೆ. ಇದನ್ನು ನೋಡುತ್ತಿದ್ದರೆ, ಈ ವ್ಯಕ್ತಿ ಸ್ವಸಾಮರ್ಥ್ಯದಿಂದ ಕೆಲಸ ಗಿಟ್ಟಿಸಿದ್ದಾನೋ ಅಥವಾ ಲಂಚ-ಗಿಂಚ ಕೊಟ್ಟು ಅವಕಾಶ ಖರೀದಿಸಿದ್ದಾನೋ ಎಂಬ ಸಂಶಯ ಉಂಟಾಗುತ್ತಿದೆ. ಹಿಂದೆ ಇವರು ರಾಯಚೂರು ಜಿಲ್ಲೆ ಮಾನ್ವಿಯಲ್ಲಿ ತಹಸೀಲ್ದಾರ್ ಆಗಿದ್ದಾಗ, ತಮ್ಮ ಆಧೀನ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಗಳು ಕೇಳಿಬಂದಿದ್ದವು. ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈಗ ಕೊಪ್ಪಳಕ್ಕೆ ವರ್ಗವಾಗಿ ಬಂದಿರುವ ಅವರು, ಮತ್ತೆ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿರುವ ಶಂಕೆ ಇದರಿಂದ ವ್ಯಕ್ತವಾಗುತ್ತದೆ ಎಂದು ಶರಣಗೌಡ ಪಾಟೀಲ್ ಹೇಳಿದ್ದಾರೆ.