ಕೈನಲ್ಲಿ ಲಾಡ್ – ಛಬ್ಬಿ ಹಣಾಹಣಿ, ಬಿಜೆಪಿಯಲ್ಲಿ ಡಜನ್ಗೂ ಹೆಚ್ಚು ಆಕಾಂಕ್ಷಿಗಳು
ಹುಬ್ಬಳ್ಳಿ: ಕಲಘಟಗಿ, ನೂತನ ಅಳ್ನಾವರ ತಾಲೂಕು ಮತ್ತು ಧಾರವಾಡ ತಾಲೂಕಿನ ಕೆಲ ಗ್ರಾಮಗಳ ವ್ಯಾಪ್ತಿ ಹೊಂದಿರುವ ಕಲಘಟಗಿ ಮತಕ್ಷೇತ್ರದ ’ಲಾರ್ಡ್’ ಆಗಲು ಬಿಜೆಪಿಯಲ್ಲಿ ಡಜನ್ಗೂ ಹೆಚ್ಚು ಆಕಾಂಕ್ಷಿಗಳ ಮಧ್ಯೆ ಬಿಗ್ ಫೈಟ್ ನಡೆದಿದ್ದರೆ, ಕಾಂಗ್ರೆಸ್ನಲ್ಲಿ ಇಬ್ಬರ ಮಧ್ಯೆ ಮೆಗಾ ಫೈಟ್ ಆರಂಭವಾಗಿದೆ.
ಸಂತೋಷ ಲಾಡ್ ಅವರ ಎದುರು ಕಳೆದ ಬಾರಿ ಕಮಲ ಅರಳಿಸಿದ ಹಾಲಿ ಶಾಸಕ ಸಿ.ಎಂ.ನಿಂಬಣ್ಣವರ ಅವರಿಗೆ ಟಿಕೆಟ್ನ್ನು ವಯಸ್ಸಿನ ಕಾರಣದಿಂದ ಅಥವಾ ಕಳೆದ ಬಾರಿಯ ’ಗುಪ್ತ’ ಮಾತುಕತೆಯ ಹಿನ್ನೆಲೆಯಲ್ಲಿ ಈ ಬಾರಿ ಬಿಜೆಪಿ ಟಿಕೆಟ್ ನೀಡುವುದಿಲ್ಲ ಎಂಬ ಅಂಶ ಕಳೆದ ಕೆಲ ತಿಂಗಳುಗಳಿಂದ ಇರುವ ಪರಿಣಾಮ ಬಿಜೆಪಿಯಲ್ಲಿ ಎರಡಂಕಿಗೂ ಹೆಚ್ಚು ಆಕಾಂಕ್ಷಿಗಳ ದಂಡು ಇದೆ.
ಕಾಂಗ್ರೆಸ್ನಲ್ಲಿ ಮಾತ್ರ ಮಾಜಿ ಸಚಿವ ಸಂತೋಷ ಲಾಡ್ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ನಡುವೆ ಟಿಕೆಟ್ಗಾಗಿ ಮುಸುಕಿನ ಗುದ್ದಾಟ ಕಳೆದ ಮೂರು ವರ್ಷಗಳಿಂದ ನಡೆದೆ ಇದ್ದು ಯಾರೂ ಹಿಂದೆ ಸರಿಯದ ಸ್ಥಿತಿ ಇದ್ದು ಇದು ವರಿಷ್ಠರಿಗೂ ತಲೆನೋವಾಗಿ ಪರಿಣಮಿಸಿದೆ. ಇಬ್ಬರಿಗೂ ಕ್ಷೇತ್ರದಲ್ಲಿ ತಮ್ಮದೇ ಆದ ಹಿಂಬಾಲಕರ ಪಡೆಯಿದ್ದು ಅದು ಲಕ್ಷ್ಮಣರೇಖೆಯಂತೆ ಇದೆ.
ಸಮಾಜಮುಖಿ ಕೆಲಸಗಳ ಮೂಲಕ ಲಾಡ್ ಫೌಂಡೇಶನ್ ಎಲ್ಲೆಡೆ ಕಾರ್ಯ ನಡೆಸುತ್ತಿದ್ದರೆ, ಮುಂದಿನ ತಿಂಗಳು ಸಾಮೂಹಿಕ ವಿವಾಹದ ಸಿದ್ದತೆಗಳು ಜೋರಾಗಿವೆ. ಛಬ್ಬಿ ಗೆಳೆಯರ ಬಳಗವೂ ಹಳ್ಳಿ ಹಳ್ಳಿಗಳಲ್ಲಿ ಕುಕ್ಕರ್ ಹಂಚುವ ಮೂಲಕ ಸುದ್ದಿಯಲ್ಲಿದೆ. ಲಾಡ್ ಬಣದವರನ್ನು ಕೇಳಿದರೆ ಛಬ್ಬಿಯವರ ಮಾತುಕತೆ ಬಿಜೆಪಿವರೊಂದಿಗೆ ಆಗಿದೆ ಎನ್ನುತ್ತಿದ್ದರೆ, ಛಬ್ಬಿ ಬೆಂಬಲಿಗರನ್ನು ಪ್ರಶ್ನಿಸಿದರೆ ಲಾಡ್ ಬಿಜೆಪಿ ಹೊಸ್ತಿಲಲ್ಲಿ ನಿಂತಿದ್ದಾರೆ ಇಲ್ಲವೇ ಅವರು ಬಳ್ಳಾರಿಗೆ ಹೋಗುತ್ತಾರೆಂಬ ಮಾತು ಸಾಮಾನ್ಯವಾಗಿ ಕೇಳಿ ಬರುತ್ತಿವೆ.
ಹಾಲಿ ಶಾಸಕ ಸಿ.ಎಂ ನಿಂಬಣ್ಣವರ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಲು ಯತ್ನವನ್ನು ನಡೆಸಿದ್ದು ತಮಗೆ ಟಿಕೆಟ್ ನಿರಾಕರಿಸಿದಲ್ಲಿ ತಮ್ಮ ಪತ್ರ ಶಶಿಧರ ನಿಂಬಣ್ಣವರಗೆ ನೀಡಲು ಪಟ್ಟು ಹಿಡಿವ ಸಾದ್ಯತೆಗಳಿವೆ. ಕಳೆದ ಬಾರಿ ಟಿಕೆಟ್ ಘೋಷಣೆಯಾಗಿ ತದನಂತರ ಕೈ ತಪ್ಪಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿಯವರ ಹೆಸರು ಪ್ರಮುಖವಾಗಿ ಕಲಘಟಗಿಯಿಂದ ಕೇಳಿ ಬರುತ್ತಿದೆ. ಕ್ಷೇತ್ರದಾದ್ಯಂತ ತಮ್ಮದೇ ಯುವ ಪಡೆ ಹೊಂದಿರುವ ಟೆಂಗಿನಕಾಯಿ ಬಯಸಿದಲ್ಲಿ ನಿಶ್ಚಿತವಾಗಲೂಬಹುದು.ಆದರೆ ಅವರ ನಿರ್ಧಾರ ಎತ್ತ ಎಂಬುದು ನಿಗೂಢವಾಗಿದೆ. ಸಂಘ ಪರಿವಾರದ ಹಿನ್ನೆಲೆ ಹೊಂದಿರುವ ಜಯತೀರ್ಥ ಕಟ್ಟಿ ಸಹ ಕ್ಷೇತ್ರದಲ್ಲಿ ತಮ್ಮ ಹಿಡಿತ ಹೊಂದಿದ್ದು ಅವರೂ ಪ್ರಭಲ ಆಕಾಂಕ್ಷಿಗಳಾಗಿದ್ದಾರೆ.
ಕಲಘಟಗಿ ಕ್ಷೇತ್ರ ವ್ಯಾಪ್ತಿಯ ಧುರೀಣರಿಗೆ ಕಮಲ ಟಿಕೆಟ್ ನೀಡಬೇಕು ಎಂಬ ಕೂಗು ಕಲಘಟಗಿ ಮೂಲದ ಆಕಾಂಕ್ಷಿಗಳಿಂದ ಕೇಳಿಬಂದಿದೆ. ವೈದ್ಯರಾಗಿ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಚಿರಪರಿಚಿತರಾಗಿರುವ ಡಾ.ಮಹೇಶ ತಿಪ್ಪಣ್ಣವರ, ಮಾಜಿ ಜಿ.ಪಂ ಅಧ್ಯಕ್ಷ ವಿ.ಎಸ್.ಪಾಟೀಲ, ಮಾಜಿ ಜಿ.ಪಂ.ಸದಸ್ಯರಾದ ಸಿ.ಎಫ್.ಪಾಟೀಲ, ಬಸವರಾಜ ಕರಡಿಗುಡ್ಡ, ಇತರ ಮುಖಂಡರಾದ ಸದು ಚಿಂತಾಮಣಿ, ಶಿವಾನಂದ ಹಿರೇಮಠ, ಶಂಕರ ಬಸವರೆಡ್ಡಿ,ಶಂಕರ ಹುದ್ದಾರ ಮುಂತಾದವರು ತಮ್ಮ ತಮ್ಮ ಮುಖಂಡರುಗಳ ಮೂಲಕ ಒತ್ತಡ ಮುಂದುವರಿಸಿದ್ದಾರೆ.
ಕವಿವಿ ಸಿಂಡಿಕೇಟ್ ಸದಸ್ಯ ಅಲ್ಲದೇ ಚಿತ್ರನಟರಾಗಿಯೂ ಗುರುತಿಸಿಕೊಂಡಿರುವ ನಿರ್ಣಾಯಕ ವಾಲ್ಮೀಕಿ ಸಮುದಾಯದ ಡಾ.ಕಲ್ಮೇಶ ಹಾವೇರಿಪೇಟ್ ಸಹ ಈಗಾಗಲೇ ಪ್ರತಿ ಹಳ್ಳಿಗಳಿಗೂ ಭೇಟಿ ನೀಡುತ್ತಿದ್ದಾರಲ್ಲದೇ ಯುವಕರ ಮನ ಗೆಲ್ಲುವ ಯತ್ನ ನಡೆಸಿದ್ದು, ಧಾರವಾಡ ಎಪಿಎಂಸಿ ಮಾಜಿ ಉಪಾಧ್ಯಕ್ಷ ಕೃಷ್ಣಾ ಕೊಳ್ಳಾನಟ್ಟಿ ಸಹ ಹಿಂದುಳಿದ ವರ್ಗದ ನಾಯಕರಾಗಿದ್ದು ತಮ್ಮದೇ ಆದ ಬೆಂಬಲಿಗರ ಪಡೆ ಹೊಂದಿದ್ದು ಒಬಿಸಿ ಅಸ್ತ್ರದ ಮೂಲಕ ಪಟ್ಟು ಹಿಡಿದಿದ್ದಾರೆ.
ಜೆಡಿಎಸ್ಗೆ ಹೇಳಿಕೊಳ್ಳುವಂತಹ ನೆಲೆ ಇಲ್ಲವಾಗಿದ್ದು, ಆಮ್ ಆದ್ಮಿ ಪಕ್ಷದ ಮಂಜುನಾಥ ಜಕ್ಕಣ್ಣವರ ಪ್ರಭಲ ಆಕಾಂಕ್ಷಿಯಾಗಿದ್ದು ಅವರೆ ಅಂತಿಮಗೊಳ್ಳುವ ಸಾಧ್ಯತೆ ಇದೆ. ಸುಮಾರು ಎರಡು ಲಕ್ಷ ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ನ ಆಕಾಂಕ್ಷಿಗಳಾದ ಲಾಡ್ ಮತ್ತು ಛಬ್ಬಿ ಇವರಲ್ಲೊಬ್ಬರಿಗೆ ಟಿಕೆಟ್ ಸಿಕ್ಕಿದಲ್ಲಿ ಮತ್ತೊಬ್ಬರು ಕಮಲ ಹಿಡಿದರೂ ಅಚ್ಚರಿಯಿಲ್ಲ ಎಂಬ ವದಂತಿಗಳಿಗೆ ಕಾಲವೇ ಉತ್ತರ ಹೇಳಬೇಕಾಗಿದೆ.
ಈಗಾಗಲೇ ತುರುಸು ಪಡೆದಿರುವ ಕಲಘಟಗಿ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಅಖಾಡಾ ಮತ್ತಷ್ಟು ರಂಗೇರುವುದು ನಿಶ್ಚಿತ.
ಪ್ರದೀಪ ಗುಸು ಗುಸು, ಮಾಜಿ ಮೇಯರ್ ಮತ್ತೆ ಅಖಾಡಕ್ಕೆ
ಕಲಘಟಗಿಯಿಂದ ಮೇಲ್ಮನೆ ಸದಸ್ಯ ಪ್ರದೀಪ ಶೆಟ್ಟರ್ ಸ್ಪರ್ಧಿಸುವರೆಂಬ ಗುಸು ಗುಸು ಇದ್ದೇ ಇದೆ.ಅಲ್ಲದೇ ಕಳೆದ ಬಾರಿ ಇಡಿ ಕ್ಷೇತ್ರ ಸಂಚರಿಸಿ ಒಂದು ಹಂತಕ್ಕೆ ಬಹುತೇಕ ಅಂತಿಮ ಎನ್ನುವ ಹಂತಕ್ಕೆ ಬಂದಿದ್ದ ಹು.ಧಾ.ಮಾಜಿ ಮೇಯರ್, ಹಾಲಿ ಸದಸ್ಯ ಶಿವು ಹಿರೇಮಠ ಹೆಸರೂ ಸಹ ಮತ್ತೆ ಚಾಲ್ತಿಗೆ ಬಂದಿದೆ. ಕಲಘಟಗಿಯ ಪ್ರಮುಖ ಆಕಾಂಕ್ಷಿಯೊಬ್ಬರ ಸಲಹೆಯ ಮೇರೆಗ ಅಖಾಡಕ್ಕೆ ಧುಮುಕಿದ್ದು, ಕುತೂಹಲ ಕೆರಳಿಸಿದೆ.
ಅಲ್ಲದೇ ಮಾಜಿ ಜಿ.ಪಂ ಸದಸ್ಯ ಗದಿಗೆಪ್ಪ ಕಳ್ಳಿಮನಿ ಸಹ ಕಲಘಟಗಿ ಕ್ಷೇತ್ರದ ಸಂಪರ್ಕ ಹೊಂದಿದ್ದು ಅವರೂ ಸಹ ಅವಕಾಶ ನೀಡಿದಲ್ಲಿ ಇಲ್ಲಿಂದಲೇ ಅದೃಷ್ಟಪರೀಕ್ಷೆ ನಡೆಸಲು ಮುಂದಾಗಿದ್ದಾರೆನ್ನಲಾಗಿದೆ.