ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;             ಲಿಂಗವ ಪೂಜಿಸಿ ಫಲವೇನಯ್ಯಾ

ವಚನ ಬೆಳಕು; ಲಿಂಗವ ಪೂಜಿಸಿ ಫಲವೇನಯ್ಯಾ

ಲಿಂಗವ ಪೂಜಿಸಿ ಫಲವೇನಯ್ಯಾ

ಲಿಂಗವ ಪೂಜಿಸಿ ಫಲವೇನಯ್ಯಾ,
ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ?
ಲಿಂಗವ ಪೂಜಿಸಿ ಫಲವೇನಯ್ಯಾ,
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ?
-ಬಸವಣ್ಣ

ಅಂಗಮಯವಾದ ಜೀವಾತ್ಮ ಮತ್ತು ಲಿಂಗಮಯವಾದ ಪರಮತ್ಮ ಒಂದಾಗುವುದೇ ಲಿಂಗಾಂಗ ಸಾಮರಸ್ಯ. ಇದನ್ನು ಸಾಧಿಸಲಿಕ್ಕಾಗಿ ಇಷ್ಟಲಿಂಗ ಪೂಜೆ (ಶಿವಯೋಗ) ಇದೆ. ಹೀಗೆ ಸಾಧನೆ ಮಡಿದವರು ತಮ್ಮೊಳಗಿನ ಘನವನ್ನು ಅರಿತುಕೊಳ್ಳುತ್ತಾರೆ. ಲಿಂಗಾಂಗ ಸಾಮರಸ್ಯ ಸಾಧಿಸಬೇಕಾದರೆ ಜೀವಾತ್ಮನು ಮೊದಲಿಗೆ ಜಂಗಮಾತ್ಮ ಆಗಬೇಕಾಗುತ್ತದೆ. ಅಂದರೆ ವಿಶ್ವಕಲ್ಯಾಣಕ್ಕಾಗಿ ಬದುಕನ್ನು ಸವೆಸುತ್ತ ಎಲ್ಲ ಜೀವಾತ್ಮರ ಜೊತೆ ಒಂದಾಗಬೇಕಾಗುತ್ತದೆ. ಹೀಗೆ ಜೀವಾತ್ಮನು ಜಂಗಮಾತ್ಮ ಆದಮೇಲೆ ಪರಮಾತ್ಮನ ಜೊತೆ ಒಂದಾಗುವ ಯೋಗ್ಯತೆಯನ್ನು ಪಡೆಯುತ್ತಾನೆ. ಈ ರಹಸ್ಯವನ್ನು ಅರಿತು ಸಾಧಿಸುವುದೇ ಇಷ್ಟಲಿಂಗ ಪೂಜಾಫಲವಾಗಿದೆ.
ಜಂಗಮಾತ್ಮನಾಗಲು ಸಮರತಿ, ಸಮಕಳೆ ಮತ್ತು ಸಮಸುಖದ ಅರಿವನ್ನು ಪಡೆಯಬೇಕು. ಸಮರತಿ ಎಂದರೆ ಸತಿಪತಿ ಒಂದಾಗಿ ಏಕೋಭಾವದಿಂದ ಸಮಾನತಾ ಪ್ರಜ್ಞೆಯೊಂದಿಗೆ ಬದುಕುವುದು. ಪತ್ನಿಯನ್ನು ಸಮಾನತಾ ಭಾವದಿಂದ ಕಾಣದೆ ಬದುಕುವವನು ದೇವರಿಗೆ ದೂರಾಗುವನು. ಸಕಲ ಜೀವಕೋಟಿಗೆ ಜಗನ್ನಿಯಾಮಕನಾದ ಒಬ್ಬನೇ ದೇವರಿದ್ದಾನೆ. ಎಲ್ಲ ಜೀವಾತ್ಮರು ಆ ವಿಶ್ವಪತಿಗೆ ಸತಿಯಾಗಿರುವಂಥವರು. ಹೆಂಡತಿಯಂತೆ ಗಂಡ ಕೂಡ ಜೀವಾತ್ಮನೇ ಆಗಿರುವುದರಿಂದ ಆತನೂ ವಿಶ್ವಪತಿಗೆ ಸತಿಯಗುತ್ತಾನೆ. ಪ್ರೀತಿಗೆ ಪಾತ್ರನಾಗುವ ಪರಮಾತ್ಮನೇ ಪತಿ. ಮಧುರ ಭಕ್ತಿಭಾವದಿಂದ ಪರಮಾತ್ಮನನ್ನು ಪ್ರೀತಿಸುವ ಜೀವಾತ್ಮರೆಲ್ಲರೂ ಸತಿಯರು. ಆದ್ದರಿಂದ ಜೀವಾತ್ಮರಲ್ಲಿ ಲಿಂಗತಾರತಮ್ಯ ಇರಬಾರದು.
ಎಲ್ಲ ಜೀವಾತ್ಮರಿಗೆ ಜೀವಕಳೆ ಎಂಬ ಸಮಕಳೆ ಇದೆ. ಬ್ರಹ್ಮತೇಜಸ್ಸು ಮತ್ತು ಕ್ಷಾತ್ರತೇಜಸ್ಸು ಎಂಬುದು ಸುಳ್ಳು. ಮನವ ತೇಜಸ್ಸೊಂದೇ ಸತ್ಯ. ಹೀಗೆ ಎಲ್ಲರೂ ಸಮಕಳೆಯವರಾದ ಕಾರಣ ವರ್ಣಭೇದ ಮಡಬಾರದು ಎಂದು ಬಸವಣ್ಣನವರು ತಿಳಿಸಿದ್ದಾರೆ. ಅದೇ ರೀತಿ ಬಡವರು ಮತ್ತು ಶ್ರೀಮಂತರು ಒಂದೇ ಎಂಬ ಸಮಸುಖದ ಪ್ರಜ್ಞೆ ಮೂಡಿಸಿದ್ದಾರೆ. ಮಾನವರೆಲ್ಲರೂ ಸುಖದುಃಖದಲ್ಲಿ ಕೂಡ ಒಂದೇ ಆಗಿದ್ದಾರೆ ಎಂಬುದನ್ನು ಸೂಚಿಸಿದ್ದಾರೆ.
ಆದ್ದರಿಂದ ಲೋಕದ ಮಾನವರೆಲ್ಲ ಲಿಂಗಭೇದ, ವರ್ಣಭೇದ ಮತ್ತು ವರ್ಗಭೇದ ಮಾಡದೆ ಸಕಲಜೀವಾತ್ಮರೊಂದಿಗೆ ಮತ್ತು ಪರಮಾತ್ಮನೊಂದಿಗೆ ಒಂದಾಗಿ ಬದುಕಬೇಕು ಎಂಬುದು ಬಸವಣ್ಣನವರ ಆಶಯವಾಗಿದೆ. ಹೀಗೆ ಸಮರತಿ, ಸಮಕಳೆ ಮತ್ತು ಸಮಸುಖದ ಅರಿವನ್ನು ಆಚರಣೆಗೆ ತರುವುದರ ಮೂಲಕ ಜೀವಾತ್ಮನು ಜಂಗಮಾತ್ಮನಾಗಬೇಕು. ನಂತರ ನದಿಯೊಳಗೆ ನದಿ ಬೆರೆತ ಹಾಗೆ ಸಕಲಜೀವಾತ್ಮರಲ್ಲಿ ಭಾವೈಕ್ಯ ಸಾಧಿಸಿ, ಪರಮಾತ್ಮನನ್ನು ಧ್ಯಾನಿಸುತ್ತ ಲಿಂಗಾಂಗ ಸಾಮರಸ್ಯದ ಪರಮಾನಂದದೊಂದಿಗೆ ಈ ಲೋಕದೊಳಗೆ ಬಾಳಬೇಕು. ಇದನ್ನೆಲ್ಲ ಸಾಧಿಸದಿದ್ದರೆ ಇಷ್ಟಲಿಂಗವನ್ನು ಪೂಜಿಸಿ ಪ್ರಯೋಜನವಿಲ್ಲ ಎಂದು ಬಸವಣ್ಣನವರು ಹೇಳುತ್ತಾರೆ.

ವಚನ -ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *