ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು; ಅಂಗಕ್ಕೆ ಬಡತನ

ವಚನ ಬೆಳಕು; ಅಂಗಕ್ಕೆ ಬಡತನ

 ಅಂಗಕ್ಕೆ ಬಡತನ

ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ?
ಬೆಟ್ಟ ಬಲ್ಲಿತ್ತೆಂದಡೆ, ಉಳಿಯ ಮೊನೆಯಲ್ಲಿ
ಬಡತನವಿದ್ದಡೆ ಒಡೆಯದೆ?
ಘನಶಿವಭಕ್ತರಿಗೆ ಬಡತನವಿಲ್ಲ, ಸತ್ಯರಿಗೆ ದುಷ್ಕರ್ಮವಿಲ್ಲ.
ಎನಗೆ ಮಾರಯ್ಯಪ್ರಿಯ ಅಮಲೇಶ್ವರಲಿಂಗವುಳ್ಳನ್ನಕ್ಕ
ಆರ ಹಂಗಿಲ್ಲ ಮಾರಯ್ಯ.
                                                     -ಆಯ್ದಕ್ಕಿ ಲಕ್ಕಮ್ಮ
ಇದೊಂದು ಮಹತ್ವದ ವಚನ. ದುಡಿಯುವ ವರ್ಗದ ಒಗ್ಗಟ್ಟನ್ನು ಒತ್ತಿ ಹೇಳುತ್ತದೆ. ಇದು ಬಡವರಲ್ಲಿ ಆತ್ಮಶಕ್ತಿ ತುಂಬುವ ಗುಣವುಳ್ಳದ್ದಾಗಿದೆ. ಬಡತನವು ನಮ್ಮ ದೈನಂದಿನ ಭೌತಿಕ ಜೀವನಕ್ಕಿದೆ ಆದರೆ ದೃಢಮನಸ್ಸಿಗೆ ಬಡತನವಿರಲಾರದು ಎಂಬ ವಿಚಾರವನ್ನು ಆಯ್ದಕ್ಕಿ ಲಕ್ಕಮ್ಮ ಮಾರ್ಮಿಕವಾಗಿ ಹೇಳಿದ್ದಾಳೆ. ’ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ?’ ಎಂದು ತಿಳಿಸುತ್ತಾಳೆ. ಶೋಷಕರ ಸಂಖ್ಯೆ ಕಡಿಮೆ ಇದೆ. ಆದರೆ ಬಡವರು ಬಹುಸಂಖ್ಯೆಯಲ್ಲಿದ್ದಾರೆ. ಶೋಷಕರ ವ್ಯವಸ್ಥೆ ಭಾರಿ ಏಕಶಿಲಾ ಬೆಟ್ಟದಂತೆ ಸದೃಢವಾಗಿದೆ. ಆದರೆ ಬಡವರು ಒಂದೊಂದು ಉಳಿಯಂತಾಗಿ ಒಗ್ಗಟ್ಟಾದರೆ ಬೆಟ್ಟದಂತಿರುವ ಶೋಷಕರು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾರೆ ಎಂಬುದನ್ನು ಲಕ್ಕಮ ಸೂಚಿಸಿದ್ದಾಳೆ. ಬೆಟ್ಟ ಬಲ್ಲಿತ್ತೆಂದಡೆ, ಉಳಿಯ ಮೊನೆಯಲ್ಲಿ ಬಡತನವಿದ್ದಡೆ ಒಡೆಯದೆ? ಎಂದು ಕೇಳುವುದರ ಮೂಲಕ ಕಾಯಕಜೀವಿಗಳಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಾಳೆ.
ಕಾಯಕಜೀವಿಗಳಾದ ಶರಣರು ಆರ್ಥಿಕವಾಗಿ ಬಡವರಾಗಿರಬಹುದು. ಆದರೆ ಆತ್ಮಿಕವಾಗಿ ಶ್ರೀಮಂತರಾಗಿದ್ದಾರೆ. ತಮ್ಮೊಳಗೆ ದೇವರನ್ನೇ ಪ್ರತಿಷ್ಠಾಪಿಸಿದವರು ಅದು ಹೇಗೆ ಬಡವರಾಗುತ್ತಾರೆ? ಇಂಥ ಸತ್ಯವಂತರು ದುಷ್ಕರ್ಮದಲ್ಲಿ ತೊಡಗದೆ ಇರುವುದರಿಂದ ಇವರೇ ನಿಜವಾದ ಶ್ರೀಮಂತರು ಎಂದು ಸೂಚಿಸಿದ್ದಾಳೆ. ದೇವರು ತನ್ನ ಜೊತೆ ಇರುವ ತನಗೆ ಯಾರ ಹಂಗೂ ಇಲ್ಲ ಎಂದು ತನ್ನ ಪತಿ ಮಾರಯ್ಯನಿಗೆ ಈ ಮೂಲಕ ತಿಳಿಸುತ್ತಾಳೆ.
ಕಾರ್ಲ್ ಮಾರ್ಕ್ಸ್ ೧೯ನೇ ಶತಮಾನದಲ್ಲಿ ’ವಿಶ್ವದ ಕಾರ್ಮಿಕರೇ ಒಂದಾಗಿರಿ’ ಎಂದು ಕರೆಕೊಟ್ಟರು. ’ನೀವು ಒಗ್ಗಟ್ಟಾಗುವುದರಿಂದ ನೀವು ಏನನ್ನೂ ಕಳೆದುಕೊಳ್ಳಲಾರಿರಿ ನಿಮ್ಮ ಸಂಕೋಲೆಗಳ ಹೊರತಾಗಿ’ ಎಂದು ತಿಳಿಸಿದರು. ಸಮತಾವಾದದ ಹೊಸ ಸಿದ್ಧಾಂತದಿಂದ ಐರೋಪ್ಯದೇಶಗಳ ಕಾಯಕಜೀವಿಗಳು ಎಚ್ಚರಗೊಂಡು ಒಗ್ಗಟ್ಟಾದರು. ಇದೇ ಭಾವ ಆಯ್ದಕ್ಕಿ ಲಕ್ಕಮ್ಮನದಾಗಿದೆ.
ವಿಶ್ವದಲ್ಲಿ ಮೊದಲಬಾರಿಗೆ ಕಾಯಕಜೀವಿಗಳನ್ನು ಒಗ್ಗೂಡಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಈ ಒಗ್ಗಟ್ಟಿನಿಂದಲೇ ವಚನಚಳವಳಿ ಆರಂಭವಾಯಿತು. ಇಂಥ ಚಳವಳಿಯಲ್ಲಿ ಬೆಳದು ಪತಿಯಂತೆ ತಾನೂ ವಚನಕಾರ್ತಿಯಾದ ಲಕ್ಕಮ್ಮ ನಮಗೆ ಈ ವಚನದಲ್ಲಿ ಬಡವರ ಶಕ್ತಿಯ ವಿರಾಟಸ್ವರೂಪದ ದರ್ಶನ ಮಾಡಿಸಿದ್ದಾಳೆ. ಶೋಷಕರು ಮತ್ತು ಶೋಷಿತರು ತದ್ವಿರುದ್ಧ ವರ್ಗಗಳಿಗೆ ಸೇರಿದವರು ಎಂಬುದನ್ನು ಎತ್ತಿ ತೋರಿಸಿದ್ದಾಳೆ.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *