ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;          ತಾ ಮಾಡುವ ಕೃಷಿ

ವಚನ ಬೆಳಕು; ತಾ ಮಾಡುವ ಕೃಷಿ

ತಾ ಮಾಡುವ ಕೃಷಿ

ತಾ ಮಾಡುವ ಕೃಷಿಯ ಮಾಡುವನ್ನಬರ ಮಾಡಿ,
ಕೃಷಿ ತೀರಿದ ಮತ್ತೆ ಗುರುದರ್ಶನ, ಲಿಂಗಪೂಜೆ, ಜಂಗಮಸೇವೆ
ಶಿವಭಕ್ತರ ಸುಖಸಂಭಾಷಣೆ, ಶರಣರ ಸಂಗ
ಈ ನೇಮವನರಿವುತಿಪ್ಪುದು ಸದ್ಭಕ್ತನ ಸದಾತ್ಮನ ಯುಕ್ತಿ.
ಆಚಾರವೇ ಪ್ರಾಣವಾಗಿಪ್ಪ ರಾಮೇಶ್ವರಲಿಂಗಕ್ಕೆ
ಆತನೆ ಚೇತನಭಾವ.
                                                               -ಅಕ್ಕಮ

ಕೆಳವರ್ಗದ ವಚನಕಾರ್ತಿ ಅಕ್ಕಮ್ಮ ಗುಲ್ಬರ್ಗಾ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಯಲೇರಿ ಗ್ರಾಮದವಳು ಎಂದು ಊಹಿಸಲಾಗಿದೆ. ಶೀಲ, ವ್ರತ, ನೇಮ ಮತ್ತು ಆಚಾರಗಳು ಈಕೆಗೆ ಅತ್ಯಂತ ಪ್ರಿಯವಾದವುಗಳು. ಕಾಯಕದಲ್ಲಿ ನಿರತರಾದ ರೈತರು ಕೃಷಿಕಾರ್ಯಗಳನ್ನು ಪೂರ್ತಿಗೊಳಿಸಿದ ನಂತರ ಉಳಿದ ಸಮಯವನ್ನು ಅರ್ಥಪೂರ್ಣವಾಗಿಸಬೇಕು ಎಂದು ಹೇಳುವ ಮೂಲಕ ಅಕ್ಕಮ್ಮ ಕಾಯಕಕ್ಕೆ ಮೊದಲ ಸ್ಥಾನ ನೀಡುತ್ತಾಳೆ. ಆದರೆ ಕಾಯಕದ ನಂತರ ಏನು ಮಡಬೇಕು ಎಂದು ತಿಳಿಸುವುದು ಈ ವಚನದ ವೈಶಿಷ್ಟ್ಯವಾಗಿದೆ.
ಅಕ್ಕಮ್ಮ ‘ಕಾಯಕ ಮತ್ತು ಅರಿವು’ ಕುರಿತು ಹೇಳುತ್ತಾಳೆ. ಕೃಷಿಕರು ಕೃಷಿಕಾರ್ಯ ಮಾಡುವುದರ ಮೂಲಕ ಕಾಯಕನಿಷ್ಠೆಯನ್ನು ತೋರುವರು. ನಂತರ ಅವರು ಗುರುದರ್ಶನ, ಲಿಂಗಪೂಜೆ, ಜಂಗಮಸೇವೆ, ಶಿವಭಕ್ತರ ಸುಖಸಂಭಾಷಣೆ ಮತ್ತು ಶರಣರ ಸಂಗವನ್ನು ಹೊಂದುವುದರ ಮೂಲಕ ಅರಿವನ್ನು ವಿಸ್ತರಿಸಿಕೊಳ್ಳಬೇಕು ಎಂಬದು ಅಕ್ಕಮ್ಮನ ಆಶಯವಾಗಿದೆ. ಕಾಯಕ ಜೀವಿಗಳೆಲ್ಲ ತಮ್ಮ ತಮ್ಮ ಕಾಯಕದ ಅನುಭವದ ಮೂಲಕವೇ ಅನುಭಾವಿಗಳಾಗಿ ಅರಿವುಳ್ಳವರಾದರು. ತಮ್ಮ ನಿತ್ಯ ಕಾಯಕದ ವಸ್ತುಗಳನ್ನೇ ಸಾಂಕೇತಿಕವಾಗಿ ಬಳಸುತ್ತ ಆತ್ಮಜ್ಞಾನದ ವಚನಗಳನ್ನು ಬರೆದರು. ಕಾಯಕದ ಅನುಭವದ ಮೂಲಕ ಶರಣಧರ್ಮದ ದರ್ಶನ ಮಾಡಿಸಿದರು. ಇದು ಹೇಗೆ ಸಾಧ್ಯ
ವಾಯಿತೆಂದರೆ ಅವರು ತಮ್ಮ ಬಿಡುವಿನ ವೇಳೆಯಲ್ಲಿ ಶಿವಜ್ಞಾನಕ್ಕಾಗಿ ಗುರುವಿನ ದರ್ಶನ ಮಾಡುತ್ತಿದ್ದರು. ಏಕಾಗ್ರತೆಯೊಂದಿಗೆ ಮನಸ್ಸನು
ದೇವರಲ್ಲಿ ತಲ್ಲೀನಗೊಳಿಸುವುದಕ್ಕಾಗಿ ಇಷ್ಟಲಿಂಗ ಪೂಜೆ ಮಾಡುತ್ತಿ ದ್ದರು. ಆ ಮೂಲಕ ಮನಸ್ಸನ್ನು ಅನಿಷ್ಟದಿಂದ ಪಾರು ಮಾಡಿ ಮಂಗಳಮಯವಾಗಿಸುತ್ತಿದ್ದರು. ಶಿವಭಕ್ತರ ಜೊತೆ ತಾತ್ತ್ವಿಕ ಮತ್ತು ಸಾತ್ವಿಕ ಚಿಂತನೆ ಮಾಡುತ್ತಿದ್ದರು. ಶರಣರ ಸಂಗದಲ್ಲಿರುತ್ತಿದ್ದರು. ಇವೆಲ್ಲ ವನ್ನು ನೇಮ (ನಿಯಮ)ದಂತೆ ಪಾಲಿಸುತ್ತಿದ್ದರು. ಈ ನೇಮವನ್ನು ಅರಿತುಕೊಳ್ಳುವುದೇ ಸದಾತ್ಮನಾದಂಥ ಸದ್ಭಕ್ತನ ಔಚಿತ್ಯಪ್ರಜ್ಞೆ.
ಈ ಔಚಿತ್ಯಪ್ರಜ್ಞೆ ನಮ್ಮ ರೈತಾಪಿ ಜನರಲ್ಲಿ ಕೂಡ ಮೂಡಬೇಕೆಂಬ ಅಕ್ಕಮ್ಮನ ಕಾಳಜಿ ಅನುಕರಣೀಯವಾಗಿದೆ. ಇದನ್ನವರು ನೇಮದ ಹಾಗೆ
ಪಾಲಿಸಬೇಕು ಎಂದು ಅಕ್ಕಮ್ಮ ಬಯಸುತ್ತಾಳೆ. ಆಚಾರವೇ ಪ್ರಾಣವಾಗಿರು
ವಂಥ ತನ್ನ ಇಷ್ಟಲಿಂಗವಾದ ರಾಮೇಶ್ವರ ಲಿಂಗಕ್ಕೆ ಇಂಥ ಕಾಯಕ ಮತ್ತು ಅರಿವಿನ ವ್ಯಕ್ತಿತ್ವವುಳ್ಳಾತ ಚೈತನ್ಯದ ಚಿಲುಮೆಯಾಗಿರುತ್ತಾನೆ ಎಂದು ಭಾವಪೂರ್ಣವಾಗಿ ಹೇಳುತ್ತಾಳೆ. ಪ್ರತಿಯೊಬ್ಬರು ತಮ್ಮ ಬದುಕಿನ ಸರ್ವಾಂಗೀಣ ವಿಕಾಸಕ್ಕೆ ಇಂಥ ನೇಮಗಳನ್ನು ಹಾಕಿಕೊಂಡು ಅವುಗಳನ್ನು ಆಚರಣೆ ಯಲ್ಲಿ ತರಬೇಕು. ಇವು ಹಾಲನೇಮ, ಹಾಲಕೆನೆಯ ನೇಮದಂಥಲ್ಲ. ನೈತಿಕತೆಯ ನೇಮಗಳು.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *