ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;    ಕನಿಷ್ಠದಲ್ಲಿ ಹುಟ್ಟಿದೆ

ವಚನ ಬೆಳಕು; ಕನಿಷ್ಠದಲ್ಲಿ ಹುಟ್ಟಿದೆ

ಕನಿಷ್ಠದಲ್ಲಿ ಹುಟ್ಟಿದೆ

ಕನಿಷ್ಠದಲ್ಲಿ ಹುಟ್ಟಿದೆ, ಉತ್ತಮದಲ್ಲಿ ಬೆಳೆದೆ,
ಸತ್ಯಶರಣರ ಪಾದವಿಡಿದೆ.
ಆ ಶರಣರ ಪಾದವಿಡಿದು ಗುರುವ ಕಂಡೆ, ಲಿಂಗವ ಕಂಡೆ,
ಜಂಗಮವ ಕಂಡೆ, ಪಾದೋದಕವ ಕಂಡೆ, ಪ್ರಸಾದವ ಕಂಡೆ.
ಇಂತಿವರ ಕಂಡೆನ್ನ ಕಂಗಳಮುಂದಣ ಕತ್ತಲೆ ಹರಿಯಿತ್ತು.
ಕಂಗಳಮುಂದಣ ಕತ್ತಲೆ ಹರಿಯಲೊಡನೆ,
ಮಂಗಳದ ಮಹಾಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.

-ಹಡಪದಪ್ಪಣ್ಣನವರ ಪುಣ್ಯಸ್ತ್ರೀ ಲಿಂಗಮ್ಮ

ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ವಚನವಿದು. ಮನಸ್ಸಿಗೆ ಮುದನೀಡುವಂಥದ್ದು. ಯಾವುದೇ ರೀತಿಯ ಭೇದಭಾವವಿಲ್ಲದ ಮಾನವೀಯ ಸಮಾಜದಲ್ಲಿ ಮನಸ್ಸುಗಳು ಎಷ್ಟೊಂದು ಸುಂದರವಾಗಿ ಅರಳುತ್ತವೆ ಎಂಬುದಕ್ಕೆ ಈ ವಚನ ಸಾಕ್ಷಿಯಾಗಿದೆ. ಮಗು ಹುಟ್ಟಿದಾಗ ಮುಗ್ಧವಾಗಿರುತ್ತದೆ. ಮಗು ಬೆಳೆದಂತೆಲ್ಲ ಹೊಸ ಹೊಸ ಅನುಭವಗಳ ಮೂಲಕ ಜ್ಞಾನ ಸಂಪಾದನೆ ಮಾಡುತ್ತ ಹೋಗುತ್ತದೆ. ಆದರೆ ತನ್ನ ಮುಗ್ಧತೆಯನ್ನು ಕಳೆದುಕೊಳ್ಳುತ್ತ ಹೋಗುತ್ತದೆ. ಆದರೆ ಜ್ಞಾನದೊಂದಿಗೆ ಮುಗ್ಧತೆಯನ್ನು ಉಳಿಸಿಕೊಳ್ಳುವ ಕ್ರಮ ಇಲ್ಲಿದೆ.
ಮಾನವನು ಮುಗ್ಧತೆಯಿಂದ ಪ್ರಜ್ಞಾಪೂರ್ಣವಾದ ಮುಗ್ಧತೆಯ ಕಡೆಗೆ ಸಾಗಲು ವಾತಾವರಣ ಸೃಷ್ಟಿಸುವುದೇ ಧರ್ಮ, ಸಂಸ್ಕೃತಿ, ಸಾಹಿತ್ಯ, ಕಲೆ, ಶಿಕ್ಷಣ ಮತ್ತು ನಾಗರೀಕತೆಗಳ ಮೂಲ ಉದ್ದೇಶವಾಗಿರಬೇಕಾಗುತ್ತದೆ. ಶರಣಸಂಕುಲ ಇಂಥ ವಾತಾವರಣವನ್ನು ನಿರ್ಮಿಸಿತ್ತು. ಶರಣರು ಪ್ರಜ್ಞಾಪೂರ್ಣ ಮುಗ್ಧತೆಯನ್ನು ಹೊಂದಿದ್ದರು. ಬುದ್ಧ, ಜೀಸಸ್, ಪೈಗಂಬರ, ಬಸವ ಮುಂತಾದವರು ವಿಶ್ವಮಾನವರಾಗಿ ಬೆಳೆದರು. ಕಾರಣ ಅವರ ಮನಸ್ಸು ಮಗುವಿನ ಮನಸ್ಸಿನಷ್ಟೇ ಪವಿತ್ರವಾಗಿತ್ತು. ಬದುಕಿನ ಕಷ್ಟನಷ್ಟಗಳು, ಒತ್ತಡಗಳು ಮತ್ತು ಸವಾಲುಗಳನ್ನು ಎದುರಿಸಿದ ಈ ಮಹಾತ್ಮರು ಆ ಅನುಭವವನ್ನು ಪ್ರಜ್ಞೆಯ ವಿಸ್ತಾರಕ್ಕಾಗಿ ಬಳಸಿಕೊಂಡರೇ ಹೊರತು ಕಹಿಭಾವ ತಾಳಿ ಮುಗ್ಧತೆಯನ್ನು ಕಳೆದುಕೊಳ್ಳಲಿಲ್ಲ.
‘ಕನಿಷ್ಠದಲ್ಲಿ ಹುಟ್ಟಿದರೂ ಶರಣಸಂಕುಲದ ಉತ್ತಮ ವಾತಾವರಣದಲ್ಲಿ ಬೆಳೆದೆ’ ಎಂದು ಹಡಪದಪ್ಪಣ್ಣನವರ ಪುಣ್ಯಸ್ತ್ರೀ ಲಿಂಗಮ್ಮ ಈ ಆತ್ಮನಿವೇದನೆಯ ವಚನದಲ್ಲಿ ಹೇಳುತ್ತಾಳೆ. ಸತ್ಯಶರಣರ ಪಾದಹಿಡಿದು ಅಂದರೆ ಅವರನ್ನು ಅನುಸರಿಸಿ ವ್ಯಕ್ತಿತ್ವ ವಿಕಸನ ಮಾಡಿಕೊಂಡಳು. ಆ ಮೂಲಕ ಅರಿವೆಂಬ ಗುರುವನ್ನು ಕಂಡಳು. ಸಾಮರಸ್ಯದ ಲಿಂಗವನ್ನು ಕಂಡಳು. ನಿರಾಕಾರ ಲಿಂಗದ ಸಾಕಾರ ರೂಪವಾದ ಸಮಾಜವೆಂಬ ಜಂಗಮವ ಕಂಡಳು. ಲಿಂಗಕ್ಕೆ ಮಜ್ಜನಕ್ಕೆರೆದ ಪಾದೋದಕವ ಕಂಡಳು. ಗುರು ಲಿಂಗ ಜಂಗಮಕ್ಕೆ ಅರ್ಪಿಸಿದ ನಂತರ ಪವಿತ್ರವಾಗಿ ಬಂದುದೆಂದು ಸ್ವೀಕರಿಸುವ ಆಹಾರಪದಾರ್ಥವಾದ ಪ್ರಸಾದವ ಕಂಡಳು. ಈ ಪ್ರಕಾರವಾಗಿ ಅರಿವು ಹೊಂದಿ ವ್ಯಕ್ತಿತ್ವ ವಿಕಸನಗೊಳ್ಳುತ್ತ ಹೋದಾಗ, ಅಜ್ಞಾನವೆಂಬ ಕತ್ತಲೆ ಕರಗಿಹೋಯಿತು. ತದನಂತರ ಮಂಗಲಮಯವಾದ ಜ್ಞಾನವೆಂಬ ಮಹಾಬೆಳಗಿನಲ್ಲಿ ನಲಿದಾಡುತ್ತ ನಿಜಸುಖವೆಂಬ ಆನಂದ ಅನುಭಾವಿಸಿದೆ ಎಂದು ಲಿಂಗಮ್ಮ ಹರ್ಷ ವ್ಯಕ್ತಪಡಿಸುತ್ತಾಳೆ. ಹೀಗೆ ಮನುವಾದಿ ಸಮಾಜದಲ್ಲಿ ಕೆಳಮಟ್ಟದಲ್ಲಿದ್ದವರು ಬಸವಣ್ಣನವರ ಪರಿಕಲ್ಪನೆಯ ಸಮಾಜದಲ್ಲಿ ಮೇಲ್ಮಟ್ಟದವರಾದರು.

 

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *