ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;  ಲೋಕದ ಡೊಂಕ ನೀವೇಕೆ ತಿದ್ದುವಿರಿ?

ವಚನ ಬೆಳಕು; ಲೋಕದ ಡೊಂಕ ನೀವೇಕೆ ತಿದ್ದುವಿರಿ?

ಲೋಕದ ಡೊಂಕ ನೀವೇಕೆ ತಿದ್ದುವಿರಿ?

ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ,
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ.

                                -ಬಸವಣ್ಣ

ಜನರು ಲೋಕದಲ್ಲಿನ ಓರೆಕೋರೆಗಳನ್ನು ತಿದ್ದಲು ಮುಂದಾಗುವ ಬದಲಿಗೆ ತಮ್ಮೊಳಗಿನ ಮತ್ತು ತಮ್ಮ ದೈನಂದಿನ ಬದುಕಿನಲ್ಲಿನ ಓರೆಕೋರೆಗಳನ್ನು ತಿದ್ದಿಕೊಳ್ಳಬೇಕು. ತಮ್ಮ ತಮ್ಮ ಶಾರೀರಿಕ ಮತ್ತು ಮಾನಸಿಕ ಬಯಕೆಗಳನ್ನು ಋಜು ಮಾರ್ಗದಲ್ಲಿ ಈಡೇರಿಸಿಕೊಳ್ಳಬೇಕು. ಆದರೆ ಈ ಮಾರ್ಗ ಬಹುಪಾಲು ಜನರಿಗೆ ಬಲು ಕಠಿಣವೆನಿಸುವುದು. ಏಕೆಂದರೆ ಋಜು ಮಾರ್ಗವು ಆತ್ಮವಿಮರ್ಶೆಯಿಂದ ಕೂಡಿರುತ್ತದೆ. ಪರಧನ, ಪರಸತಿಯರ ಬಯಸುವುದು ವಾಮಮಾರ್ಗಿಗಳ ಲಕ್ಷಣವಾಗಿರುತ್ತದೆ. ಇಂಥವರು ತತ್ತ್ವಜ್ಞಾನದ ಮಾತುಗಳನ್ನು ಆಡುತ್ತಲೇ ಸಭ್ಯಗೃಹಸ್ಥರು ಮಾಡಲಾರದಂಥ ಕೃತ್ಯಗಳಲ್ಲಿ ತೊಡಗಿರುತ್ತಾರೆ. ಲೋಕದ ಡೊಂಕನ್ನು ತಿದ್ದುವುದರಲ್ಲಿ ಇವರು ಅತ್ಯುತ್ಸಾಹಿಗಳಾಗಿರುತ್ತಾರೆ. ಸಹಾನುಭೂತಿಯ ಮಾತುಗಳನ್ನಾಡುತ್ತ ದುಃಖ ವ್ಯಕ್ತಪಡಿಸುತ್ತಿರುತ್ತಾರೆ. ಈ ರೀತಿ ಪರರ ದುಃಖಕ್ಕೆ ಅಳುವವರನ್ನು ದೇವರು ಮೆಚ್ಚುವುದಿಲ್ಲ ಎಂದು ಬಸವಣ್ಣನವರು ತಿಳಿಸುತ್ತಾರೆ.
ಪರರ ದುಃಖಕ್ಕೆ ಅಳುವುದಕ್ಕಿಂತ ಪರರ ದುಃಖ ನಿವಾರಣೆಗಾಗಿ ಪ್ರಯತ್ನಿಸುವುದು ಬಹು ಮುಖ್ಯವಾಗಿದೆ. ದುಃಖವೆಂಬುದು ಭೌತಿಕ ವಸ್ತುಗಳಿಂದ ಬರುವ ದುಃಖ ಮಾತ್ರವಲ್ಲ, ಈ ಬದುಕಿಗೆ ಸಂಬಂಧಿಸಿದಂತೆ ಇರಬೇಕಾದ ಪರಿಜ್ಞಾನವಿಲ್ಲದಿದ್ದರೆ ದುಃಖವು ಆವರಿಸುವುದು. ಬರೀ ಭೌತಿಕ ವಸ್ತುಗಳಿಗೆ ಸಂಬಂಧಿಸಿದ ದುಃಖ ಮಾತ್ರ ಜಗತ್ತಿನಲ್ಲಿ ಇದ್ದಿದ್ದರೆ ಶ್ರೀಮಂತರು ದುಃಖಿಗಳಾಗುವ ಪ್ರಸಂಗವೇ ಬರುತ್ತಿರಲಿಲ್ಲ. ನಿಜದ ನಿಲುವನ್ನು ಅರಿತವನು ದುಃಖದಿಂದ ದೂರಾಗುತ್ತಾನೆ. ಲೋಕದ ಓರೆಕೋರೆಗಳು ಸರಿಯಾಗಬೇಕಾದರೂ ಪ್ರತಿಯೊಬ್ಬ ಮಾನವ ತನ್ನ ಒಳಗೂ ಹೊರಗೂ ಬದಲಾಗಬೇಕಾಗುತ್ತದೆ. ಯಾವುದೇ ಒಬ್ಬ ವ್ಯಕ್ತಿ ಕುಳಿತು ಜಗತ್ತಿನ ಸಮಸ್ಯೆಯನ್ನು ಬಗೆಹರಿಸಲಿಕ್ಕಾಗದು. ಪ್ರತಿಯೊಬ್ಬರು ಪರಮಾತ್ಮನ ಧ್ಯಾನದಿಂದ ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತ ಅಂತರಂಗ ಶುದ್ಧಿ ಮಾಡಿಕೊಳ್ಳಬೇಕು. ಸಮಾಜಕ್ಕೆ ಉಪಕಾರಿಯಾಗುತ್ತ ಬಹಿರಂಗ ಶುದ್ಧಿ ಮಾಡಿಕೊಳ್ಳಬೇಕು. ಆಗ ನಮ್ಮಿಂದ ಬೇರೆಯವರಿಗೆ ದುಃಖವಾಗದು. ಬೇರೆಯವರು ನಮಗೆ ದುಃಖವನ್ನುಂಟು ಮಾಡಲಾರರು.
ಲೋಕ ಹೀಗೆ ಸುಂದರವಾಗಬೇಕಾದರೆ ನಮ್ಮ ದೇಹದ ಮತ್ತು ಮನಸ್ಸಿನ ದೌರ್ಬಲ್ಯಗಳನ್ನು ಅರಿತುಕೊಳ್ಳಬೇಕು. ದೇಹವು ದುರ್ಬಲವಾಗಿದೆ. ಅದು ಎಷ್ಟೇ ಶಕ್ತಿಶಾಲಿಯಾಗಿದ್ದರೂ ಕಾಲವು ಅದನ್ನು ದುರ್ಬಲಗೊಳಿಸುತ್ತದೆ. ಆದರೆ ದೇಹದೊಳಗಿನ ಮನಸ್ಸು ಸುಖದ ಬೆನ್ನು ಹತ್ತಿ ಎಲ್ಲವನ್ನೂ ಬಯಸುತ್ತಲೇ ಇರುತ್ತದೆ. ಮನಸ್ಸಿನ ಬಯಕೆಗಳು ಪ್ರಬಲವಾಗಿವೆ. ದೇಹ ದುರ್ಬಲಗೊಂಡರೂ ಅವು ಪ್ರಬಲವಾಗಿಯೇ ಇರಲು ಬಯಸುತ್ತವೆ. ದೇಹ ಮತ್ತು ಮನಸ್ಸಿನ ಎಲ್ಲ ಬಯಕೆಗಳನ್ನು ಸನ್ಮಾರ್ಗದಲ್ಲಿ ಈಡೇರಿಸಲು ಪ್ರಯತ್ನಿಸಬೇಕು. ಸನ್ಮಾರ್ಗದಿಂದ ಸಾಧ್ಯವಾಗದ ಬಯಕೆಗಳನ್ನು ಈಡೇರಿಸಲು ಪ್ರಯತ್ನಿಸದೆ ತನು ಮನಗಳನ್ನು ಸಂತೈಸುವುದನ್ನು ಕಲಿಯಬೇಕು ಎಂಬ ಸಮಾಧಾನದ ರಹಸ್ಯವನ್ನು ಬಸವಣ್ಣನವರು ಇಲ್ಲಿ ಸೂಚಿಸಿದ್ದಾರೆ.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *