ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;   ಮನವೇ ಸರ್ಪ

ವಚನ ಬೆಳಕು; ಮನವೇ ಸರ್ಪ

ಮನವೇ ಸರ್ಪ

ಮನವೇ ಸರ್ಪ, ತನು ಹೇಳಿಗೆ;
ಹಾವಿನೊಡತಣ ಹುದುವಾಳಿಗೆ!
ಇನ್ನಾವಾಗ ಕೊಂದಿಹುದೆಂದರಿಯೆ.
ಇನ್ನಾವಾಗ ತಿಂದಿಹುದೆಂದರಿಯೆ.
ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲಡೆ
ಅದೇ ಗಾರುಡ, ಕೂಡಲಸಂಗಮದೇವಾ.
-ಬಸವಣ್ಣ

ಬಸವಣ್ಣನವರು ಈ ವಚನದಲ್ಲಿ ಮನಸ್ಸು, ದೇಹ ಮತ್ತು ಪೂಜೆಗೆ ಸಂಬಂಧಿಸಿದಂತೆ ಪರಿಣಾಮಕಾರಿಯಾದ ಕಾವ್ಯಪ್ರತಿಮೆಯನ್ನು ಸೃಷ್ಟಿಸಿದ್ದಾರೆ. ಮಾನವನ ಮನಸ್ಸೆಂಬುದು ವಿಷಸರ್ಪ. ದೇಹವೆಂಬುದು ಹಾವಿನ ಬುಟ್ಟಿ. ದೇಹದೊಳಗಿರುವ ಈ ವಿಷಸರ್ಪ ಮಾನವರನ್ನು ಯಾವಾಗ ಕೊಲ್ಲುವುದೊ ಗೊತ್ತಿಲ್ಲ. ಯಾವಾಗ ನುಂಗುವುದೊ ಗೊತ್ತಿಲ್ಲ. ಈ ವಿಷಸರ್ಪದ ಜೊತೆಗೇ ಮಾನವ ಸಹಬಾಳ್ವೆ ಮಾಡಬೇಕಿದೆ. ಹಾಗೇ ಸಹಬಾಳ್ವೆ ಮಾಡುತ್ತ ಹಾವಿನ ಬಾಯಿಗೆ ತುತ್ತಾಗದೆ ಬದುಕಬೇಕಿದೆ. ಈ ಎಚ್ಚರದೊಂದಿಗೆ ಸದಾ ಇರಬೇಕಾಗಿದೆ. ಆದರೆ ಮಾನವರು ಈ ಭಯದಿಂದ ಮುಕ್ತರಾಗುವುದಕ್ಕೆ ಬಸವಣ್ಣನವರು ಗರುಡಮಂತ್ರವನ್ನು ಹೇಳಿಕೊಡುತ್ತಿದ್ದಾರೆ. ನಿತ್ಯ ದೇವರಧ್ಯಾನದಲ್ಲಿರುವುದೇ ಆ ಗರುಡಮಂತ್ರ. ಎಂಥದೇ ವಿಷಕಾರಿ ಸರ್ಪವಾಗಿದ್ದರೂ ಗರುಡನ ಮುಂದೆ ನಿಷ್ಕ್ರಿಯವಾಗುತ್ತದೆ. ನಿರಂತರ ದೇವರಧ್ಯಾನವು ಎಂಥ ಕ್ರೂರ ಮನಸ್ಸನ್ನು ಕೂಡ ಹದ್ದುಬಸ್ತಿನಲ್ಲಿಡುತ್ತದೆ. ಆಗ ಆ ಮನಸ್ಸೆಂಬ ಸರ್ಪ ನಮ್ಮ ಜೊತೆಗೆ ಇದ್ದರೂ ನಮ್ಮನ್ನು ಕೊಲ್ಲುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ.
ಈ ಮನಸ್ಸೆಂಬ ಸರ್ಪ ಅನೇಕ ಪ್ರಕಾರದ ವಿಷಗಳನ್ನು ತನ್ನೊಳಗೆ ಇಟ್ಟುಕೊಂಡಿದೆ. ಕಾಮ, ಕ್ರೋಧ, ಮದ, ಮತ್ಸರ, ಮೋಹ, ಲೋಭ ಮುಂತಾದ ನಾನಾರೀತಿಯ ವಿಷಗಳು ಈ ಮನಸ್ಸಿನಲ್ಲಿ ತುಂಬಿಕೊಂಡಿವೆ. ಈ ವಿಷದಿಂದ ದಿವ್ಯೌಷಧಿಯನ್ನು ಮಾಡುವ ಕಲೆಯನ್ನೂ ಬಸವಣ್ಣನವರು ಕಲಿಸಿದ್ದಾರೆ. ಕಾಮಿಯು ಲಿಂಗಕಾಮಿಯಾದಾಗ ಕಾಮನೆಗಳಿಂದ ಮುಕ್ತನಾಗುವನು. ಕ್ರೋಧ ಉಳ್ಳಾತ ತನ್ನ ಅವಗುಣಗಳ ವಿರುದ್ಧ ಕ್ರೋಧ ವ್ಯಕ್ತಪಡಿಸಬೇಕು. ಮದ ಉಳ್ಳಾತ ತನ್ನ ಅಹಂಕಾರದ ಸೊಕ್ಕು ಮುರಿಯಬೇಕು. ಹೀಗೆ ಅರಿಷಡ್ವರ್ಗಗಳನ್ನು ಶರಣರು ಶಿವಧ್ಯಾನವೆಂಬ ಗರುಡಮಂತ್ರದಿಂದ ಪಳಗಿಸಿದರು. ಹೀಗೆ ಅವುಗಳ ಜೊತೆಗೆ ಬದುಕುತ್ತ ಲೋಕಕ್ಕೆ ಮಾಗದರ್ಶಿಯಾದರು.
ಈ ರೀತಿ ಲಿಂಗಕಾಮಿಯಾದವರು ಜಂಗಮಪ್ರೇಮಿಯಾಗುತ್ತಾರೆ ಎಂದು ಬಸವಣ್ಣನವರು ಇನ್ನೊಂದು ವಚನದಲ್ಲಿ ಹೇಳಿದ್ದಾರೆ. ವಿವಿಧ ಧರ್ಮಗಳ ಬಹುಪಾಲು ಜನರು ತಮ್ಮ ತಮ್ಮ ದೇವರುಗಳ ಮೇಲೆ ಪ್ರೇಮಭಾವವನ್ನು ವ್ಯಕ್ತಪಡಿಸುತ್ತಾರೆ. ಆದರೆ ಜಗತ್ತಿನ ವಸ್ತುಗಳನ್ನು ಪಡೆದುಕೊಳ್ಳುವ ಕಾಮನೆಗಳನ್ನು ಹೊಂದಿರುತ್ತಾರೆ. ಶಿವಕಾಮಿಯಾದವರು, ಅಂದರೆ ಸರ್ವಸುಖವನ್ನು ಮತ್ತು ದಿವ್ಯಾನಂದವನ್ನು ದೇವರ ಧ್ಯಾನದಲ್ಲೇ ಕಾಣುವವರು ಭೌತಿಕ ವಸ್ತಗಳ ಬಗ್ಗೆ ಕಾಮನೆಗಳನ್ನು ಹೊಂದಿರುವುದಿಲ್ಲ. ಆಗ ಅವರಲ್ಲಿ ಜಗತ್ತಿನ ಸಕಲ ಚರಾಚರಗಳ ಬಗ್ಗೆ ಪ್ರೇಮಭಾವ ಮೂಡುತ್ತದೆ. ತಮಗಾಗಿ ಹೆಚ್ಚಿನದೇನನ್ನೂ ಬಯಸದಂಥ ಸ್ಥಿತಿಯನ್ನು ತಲುಪುತ್ತಾರೆ. ಆಗ ಅದೇ ಮನಸ್ಸೆಂಬ ಸರ್ಪ ಅವರ ಜೊತೆ ನಿಜವಾದ ಅರ್ಥದಲ್ಲಿ ಸಹಬಾಳ್ವೆ ಮಾಡಲು ಆರಂಭಿಸುತ್ತದೆ. ಹೀಗೆ ಮಾನವನು ತನ್ನ ಮನಸ್ಸಿನ ಮೇಲೆ ವಿಜಯ ಮತ್ತು ಸಾಂಗತ್ಯವನ್ನು ಸಾಧಿಸಿ ಈ ಬದುಕನ್ನು ಆನಂದಿಸಬೇಕೆಂಬುದು ಬಸವಣ್ಣನವರ ಆಶಯವಾಗಿದೆ.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *