ಅನಾದಿಯ ಮಗನು ಆದಿ
ಅನಾದಿಯ ಮಗನು ಆದಿ, ಆದಿಯ ಮಗನತೀತ,
ಅತೀತನ ಮಗನು ಆಕಾಶ, ಆಕಾಶನ ಮಗನು ವಾಯು,
ವಾಯುವಿನ ಮಗನಗ್ನಿ, ಅಗ್ನಿಯ ಮಗನು ಅಪ್ಪು,
ಅಪ್ಪುವಿನ ಮಗನು ಪೃಥ್ವಿ,
ಪೃಥ್ವಿಯಿಂದ ಸಕಲ ಜೀವರೆಲ್ಲರು ಉದ್ಭವಿಸಿದರು ಗುಹೇಶ್ವರಾ.
-ಅಲ್ಲಮಪ್ರಭುದೇವರು
ಇಂದಿನ ವಿಜ್ಞಾನಿಗಳು ಹೇಳುವಂತೆ ಕೋಟ್ಯಂತರ ವರ್ಷಗಳ ಹಿಂದೆ ಸೂಕ್ಷ್ಮಬಿಂದುವೊಂದರ ಮಹಾಸ್ಫೋಟದಿಂದಾಗಿ ಅಸಂಖ್ಯಾತ ಕಣಗಳು ಸೃಷ್ಟಿಯಾದವು. ಅವು ಕೂಡುತ್ತ ಕೂಡುತ್ತ ಕೂಡಲಸಂಗಮವಾಗುತ್ತ ನಕ್ಷತ್ರಗಳಾದವು. ನಕ್ಷತ್ರಗಳ ಸುತ್ತೆಲ್ಲ ತಿರುಗುವ ಕಣಗಳೆಲ್ಲ ಕೂಡುತ್ತ ಕೂಡುತ್ತ ಗ್ರಹಗಳಾದವು. ಗ್ರಹಗಳ ಸುತ್ತ ತಿರುಗುವ ಕಣಗಳು ಕೂಡಿಕೊಂಡು ಉಪಗ್ರಹಗಳಾದವು. ಹೀಗೆ ಬ್ರಹ್ಮಾಂಡದ ಸೃಷ್ಟಿಯಾಯಿತು. ಇದನ್ನೇ ೧೨ನೇ ಶತಮಾನದ ವ್ಯೋಮಮೂರುತಿ ಅಲ್ಲಮಪ್ರಭುದೇವರು ಮಹಾ ಪ್ರತಿಮಾ ವಿಧಾನದಲ್ಲಿ ತಿಳಿಸಿದ್ದಾರೆ.
ಮಹಾಸ್ಫೋಟಕ್ಕೆ ಮೊದಲು ಬ್ರಹ್ಮಾಂಡವೇ ಇಲ್ಲದ ಸ್ಥಿತಿಗೆ ಅಲ್ಲಮಪ್ರಭುಗಳು ಅನಾದಿ ಎಂದು ಕರೆದಿದ್ದಾರೆ. ಮಹಾಸ್ಫೋಟದ ನಂತರ ಅದು ಆದಿ ಸ್ಥಿತಿ ತಲುಪಿತು. ಅಸಂಖ್ಯಾತ ಕಣಗಳು ಉದ್ಭವವಾಗುತ್ತ ಹೋದಾಗ ಅತೀತ ಸೃಷ್ಟಿಯಾಯಿತು. ಅತೀತದ ನಂತರ ಆಕಾಶ ಗೋಚರಿಸಿತು. ಈ ಆಕಾಶದಲ್ಲಿ ವಾಯುವಿನ ಸೃಷ್ಟಿಯಾಯಿತು. ವಾಯುವಿನ ಸಂಸರ್ಗದಲ್ಲಿ ಅಗ್ನಿಯ ಸೃಷ್ಟಿಯಾಯಿತು. ಈ ಅಗ್ನಿಯ ಗರ್ಭದಲ್ಲೇ ಜಲಜನಕವಿದೆ. ಇವೆಲ್ಲ ಸೇರಿ ಸೂರ್ಯನಂಥ ನಕ್ಷತ್ರಗಳ ಸೃಷ್ಟಿಯಾಯಿತು. (ಸೂರ್ಯನು ಹೀಲಿಯಂ ಮತ್ತು ಜಲಜನಕ ಅನಿಲಗಳಿಂದ ಸೃಷ್ಟಿಯಾಗಿದ್ದಾನೆ. ಸೂರ್ಯನಲ್ಲಿ ಜಲಜನಕವೂ ಇರುವುದರಿಂದ ನೀರಿನ ಅಂಶವೂ ಇದೆ ಎಂಬುದು ವೈಜ್ಞಾನಿಕ ಸತ್ಯವಾಗಿದೆ.) ಗ್ರಹವಾಗಿರುವ ಪೃಥ್ವಿಯಿಂದ ನಾವೆಲ್ಲ ಉದ್ಭವಿಸಿದವರು. ಸಸ್ಯಲೋಕ, ಪ್ರಾಣಿಲೋಕ ಹೀಗೆ ಜೀವಜಗತ್ತೆಲ್ಲ ಪೃಥ್ವಿಯಿಂದಲೇ ಉದ್ಭವಿಸಿದೆ. ಚರಾಚರವೆಲ್ಲ ಒಂದಾಗುತ್ತ ಪೃಥ್ವಿಯಲ್ಲಿ ಜೀವಜಾಲದ ಸರಪಳಿ ನಿರ್ಮಾಣವಾಗಿದೆ.
ಅನಾದಿ ಎಂಬುದು ಅಲ್ಲಮಪ್ರಭುಗಳು ಇನ್ನೊಂದು ವಚನದಲ್ಲಿ ತಿಳಿಸುವಂತೆ ಏನೂ ಏನೂ ಇಲ್ಲದ ಬಯಲು. “ಏನೂ ಏನೂ ಇಲ್ಲದ ಬಯಲೊಳಗೊಂದು ಬಗೆಗೊಳಗಾದ ಬಣ್ಣ ತಲೆದೋರಿತ್ತು. ಆ ಬಣ್ಣವು ಆ ಬಯಲ ಶೃಂಗರಿಸಲು, ಬಯಲು ಸ್ವರೂಪಗೊಂಡಿತ್ತು. ಅಂತಪ್ಪ ಸ್ವರೂಪಿನ ಬೆಡಗು ತಾನೆ, ನಮ್ಮ ಗುಹೇಶ್ವರಲಿಂಗದ ಪ್ರಥಮ ಭಿತ್ತಿ.” ಹೀಗೆ ಬಯಲು ಸ್ವರೂಪಗೊಂಡು ಆಕಾಶದ ನಿರ್ಮಾಣವಾಯಿತೆಂದು ಅಲ್ಲಮಪ್ರಭುಗಳು ಹೇಳುತ್ತಾರೆ. ಅನಂತವಾದ ಬಯಲಿನಲ್ಲಿ ಆಕಾಶವಿದೆ. ಆಕಾಶ, ವಾಯು, ಅಗ್ನಿ, ಜಲ ಮತ್ತು ಪೃಥ್ವಿ ಎಂಬ ಪಂಚಮಹಾಭೂತಗಳನ್ನು ಬಯಲು ಒಳಗೊಂಡಿದೆ. ಈ ಬಯಲಿಗೆ ಶರಣರು ‘ಶೂನ್ಯ’ ಎಂದು ಕರೆದರು. ಶೂನ್ಯದಲ್ಲಿ ಇಡೀ ವಿಶ್ವ ಇದೆ. ಹೀಗೆ ಶೂನ್ಯದಿಂದ ಎಲ್ಲವೂ ಉದ್ಭವವಾಯಿತೆಂದು ವಿಜ್ಞಾನ ಕೂಡ ಹೇಳುತ್ತದೆ. ವಿಶ್ವದಲ್ಲಿ ಎಲ್ಲವೂ ಒಂದರಿಂದ ಇನ್ನೊಂದಾಗಿವೆ. ಒಂದರ ಮೇಲೊಂದು ಅವಲಂಬಿಸಿವೆ. ಈ ಘನಸಂಬಂಧ ಕ್ರಿಮಿಕೀಟ ಮೊದಲು ಮಾಡಿ ಸಕಲಜೀವಾತ್ಮರ ಮಧ್ಯೆ ಕೂಡ ಇದೆ. ಇದೇ ಬಸವಾದಿ ಶರಣರ ಸಗುಣ ಅದ್ವೈತತತ್ತ್ವ.