ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;   ಶೈವಕ್ಕೆ ಕೈಲಾಸ, ವೈಷ್ಣವಕ್ಕೆ ವೈಕುಂಠ

ವಚನ ಬೆಳಕು; ಶೈವಕ್ಕೆ ಕೈಲಾಸ, ವೈಷ್ಣವಕ್ಕೆ ವೈಕುಂಠ

ಶೈವಕ್ಕೆ ಕೈಲಾಸ, ವೈಷ್ಣವಕ್ಕೆ ವೈಕುಂಠ

ಶೈವಕ್ಕೆ ಕೈಲಾಸ, ವೈಷ್ಣವಕ್ಕೆ ವೈಕುಂಠ,
ಬೌದ್ಧಂಗೆ ಮೋಕ್ಷಗಾಮಿನಿಯೆಂಬ ಗೊತ್ತುಗಳು ಬೇರಾದಲ್ಲಿ,
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಬೇರಾದುದಿಲ್ಲ.
ಸುವರ್ಣ ಒಂದು, ಆಭರಣ ಹಲವಾದಂತೆ,
ಪರಬ್ರಹ್ಮವಸ್ತುವೊಂದೆಂಬುದಕ್ಕೆ ಇದೆ ದೃಷ್ಟ.
ಮತ್ತಿದಿರು ದೈವವುಂಟೆಂದು ಗದಿಯಬೇಡ.
ನೆರೆ ನಂಬಿ, ಸದಾಶಿವಮೂರ್ತಿಲಿಂಗವಲ್ಲದಿಲ್ಲಾಯೆಂದೆ.

                                                                                  -ಅರಿವಿನ ಮರಿತಂದೆಗಳ ವಚನ

ಶೈವವೆಂಬುದು ಶಿವಮತವಾಗಿದೆ. ಶಿವೋಪಾಸಕರು ಶೈವರು. ಶೈವ ಮತದಲ್ಲಿ ಶೈವ, ಪಾಶುಪತ, ಸೋಮ, ದಕ್ಷಿಣ, ಕಾಳಾಮುಖ, ಲಾಕುಳ (ಯಾಮಳ), ಆದಿಶೈವ, ಮಹಾಶೈವ, ಅನುಶೈವ, ಅವಾಂತರ ಶೈವ, ಅಂತ್ಯಶೈವ, ಪ್ರವರಶೈವ, ಆದಿಶೈವರೆನಿಸಿಕೊಳ್ಳುವ ಶಿವದ್ವಿಜರು, ದೀಕ್ಷೆಹೊಂದಿ ಮಹಾಶೈವರಾದ ಶಿವದ್ವಿಜರು, ದೀಕ್ಷೆ ಪಡೆದ ರಾಜರು ಮತ್ತು ವೈಶ್ಯರು ಅನುಶೈವರು, ದೀಕ್ಷೆ ಪಡೆದ ಶೂದ್ರರು ಅವಾಂತರ ಶೈವರು, ಬ್ರಾಹ್ಮಣರಿಂದ ಶೂದ್ರ ಸ್ತ್ರೀಯರಲ್ಲಿ ಹುಟ್ಟಿದ ಪ್ರವರ ಶೈವರು, ಶೈವ ಮತ ಸ್ವೀಕರಿಸಿದ ಅಂತ್ಯಜರು ಅಂತ್ಯಶೈವರು, ಶಕ್ತಿಪರವಾದ ವಾಮ ಶೈವರು, ಭೈರವಪರವಾದ ದಕ್ಷಿಣಶೈವರು, ಸಪ್ತಮಾತೃಕಾ ಪರವಾದ ಮಿಶ್ರಶೈವರು, ಶುದ್ಧಶೈವರು, ಸಾಮಾನ್ಯ ಶೈವರು, ಶಿವ, ವಿಷ್ಣು, ಬ್ರಹ್ಮ, ಷಣ್ಮುಖ, ಗಣಪತಿ ಮುಂತಾದ ದೇವತೆಗಳನ್ನು ಪೂಜಿಸುವ ಮಿಶ್ರಶೈವರು, ಶಿವನನ್ನೇ ಪೂಜಿಸುವ ಶುದ್ಧಶೈವರು, ವೀರಶೈವರು ಎಂದು ಮುಂತಾದ ಶೈವಪ್ರಭೇದಗಳಿವೆ ಎಂದು ಫ.ಗು. ಹಳಕಟ್ಟಿ ಅವರು ಶಿವಾನುಭವ ಶಬ್ದಕೋಶದಲ್ಲಿ ತಿಳಿಸಿದ್ದಾರೆ. ಪರಶಿವನು ನೆಲೆಸಿದ ಸ್ಥಳವೇ ಕೈಲಾಸ ಎಂದು ಇವರೆಲ್ಲ ಭಾವಿಸಿದ್ದಾರೆ. ಇಷ್ಟೊಂದು ಶೈವಪ್ರಭೇದಗಳಿದ್ದರೂ ಈ ಎಲ್ಲ ಉಪಾಸಕರು ಮುಕ್ತಿಹೊಂದಿ ಕೈಲಾಸ ಸೇರುವುದಾಗಿ ನಂಬಿದ್ದಾರೆ.
ಬ್ರಹ್ಮ, ವಿಷ್ಣು ಮಹೇಶ್ವರರೆಂಬ ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವಿನ ಭಕ್ತರಿಗೆ ವೈಷ್ಣವರು ಎಂದು ಕರೆಯುತ್ತಾರೆ. ಕೊನೆಯಲ್ಲಿ ವಿಷ್ಣುವಿನ ನಿವಾಸವಾದ ವೈಕುಂಠ ಸೇರುವುದಾಗಿ ಹೇಳುತ್ತಾರೆ. ಆತ್ಮವು ಜನನ ಮರಣಗಳಿಂದ ದೂರವಾಗುವುದಕ್ಕೆ ಮೋಕ್ಷ ಎಂದು ಕರೆಯುತ್ತಾರೆ. ಬಹುಜನರ ಸುಖವನ್ನು ಮತ್ತು ಹಿತವನ್ನು ಸಾಧಿಸುತ್ತ ಪರಿನಿರ್ವಾಣಹೊಂದಿ ಮೋಕ್ಷಸಾಧಿಸುವುದು ಬೌದ್ಧರ ಕ್ರಮವಾಗಿದೆ.
ಹೀಗೆ ವಿವಿಧ ಧರ್ಮಗಳಲ್ಲಿ ಮೋಕ್ಷಸಾಧನೆಯ ಗುರಿಗಳು ಮೇಲ್ನೋಟಕ್ಕೆ ಬೇರೆಬೇರೆಯಾಗಿರಬಹುದು. ಆದರೆ ಎಲ್ಲರೂ ಸೇರುವುದು ಒಂದೇ ನಿಶ್ಚಿತ ಸ್ಥಳವನ್ನು. ಮನುಷ್ಯರು ಬೇರೆಬೇರೆಯಾದರೂ ಅವರೆಲ್ಲ ಪಂಚಮಹಾಭೂತಗಳಿಂದ ಸೃಷ್ಟಿಯಾಗಿದ್ದಾರೆ. ಅವು ಎಲ್ಲರಿಗೂ ಒಂದೇ ಆಗಿವೆ. ಚಿನ್ನದ ಆಭರಣಗಳು ಬೇರೆಬೇರೆಯಾದರೂ ಅವುಗಳಿಗೆ ಬಳಿಸಿದ ಚಿನ್ನ ಒಂದೇ ಆಗಿರುತ್ತದೆ. ಹಾಗೆಯೆ ದೇವರನ್ನು ಯಾವುದೇ ಹೆಸರಿನಿಂದ ಕರೆದರೂ ದೇವರು ಒಬ್ಬನೇ ಆಗಿರುತ್ತಾನೆ. ಮತ್ತೆ ಬೇರೆ ದೈವವಿದೆ ಎಂದು ಹೇಳಬೇಡರಿ ಎಂದು ಅರಿವಿನ ಮಾರಿತಂದೆ ಹೇಳುತ್ತಾರೆ. ‘ಕೈಲಾಸವಾಸಿಗಳಾದರು’, ‘ವೈಕುಂಠವಾಸಿಗಳಾದರು’, ‘ಪರಿನಿರ್ವಾಣ ಹೊಂದಿದರು’ ಹೀಗೆ ಏನೆಲ್ಲ ಹೇಳಿದರೂ ಅವುಗಳ ನಿಜಾರ್ಥ ಒಂದೇ ಆಗಿರುತ್ತದೆ.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *