ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು; ದಾಸೀಪುತ್ರ

ವಚನ ಬೆಳಕು; ದಾಸೀಪುತ್ರ

ದಾಸೀಪುತ್ರ

ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ
ಶಿವದೀಕ್ಷೆಯಾದಬಳಿಕ ಸಾಕ್ಷಾತು ಶಿವನೆಂದು ವಂದಿಸಿ ಪೂಜಿಸಿ,
ಪಾದೋದಕ ಪ್ರಸಾದವ ಕೊಂಬುದೆ ಯೋಗ್ಯ.
ಹೀಗಲ್ಲದೆ ಉದಾಸೀನವ ಮಾಡಿ ಬಿಡುವವರಿಗೆ
ಪಂಚಮಹಾಪಾತಕ ನರಕ ಕಾಣಾ,
ಕೂಡಲಸಂಗಮದೇವಾ.
                                        -ಬಸವಣ್ಣ
ಮಧ್ಯಯುಗದ ಜಮೀನುದಾರಿ ಪದ್ಧತಿಯ ಸಮಾಜದಲ್ಲಿ ಬಡವರ ಸೇವೆಗೆ ಬೆಲೆ ಇದ್ದಿಲ್ಲ. ಬಹಳಷ್ಟು ಬಡವರು ಜೀವನಪರ್ಯಂತ ಅನ್ನ ಬಟ್ಟೆಗಾಗಿ ಬಿಟ್ಟಿ ಸೇವೆ ಮಾಡುವ ಪರಿಸ್ಥಿತಿ ಇತ್ತು. ಅದೇ ರೀತಿ ಬಡ ಹೆಣ್ಣುಮಕ್ಕಳು ಕೂಡ ಅಸಹಾಯಕರಾಗಿದ್ದರು. ಅನೇಕ ಹೆಣ್ಣುಮಕ್ಕಳು ಶ್ರೀಮಂತರ ಭೋಗದ ವಸ್ತುಗಳಾಗದೆ ಬೇರೆ ದಾರಿ ಇರಲಿಲ್ಲ. ಅವರು ದಾಸಿಯರಾಗಿ ಇಲ್ಲವೆ ವೇಶ್ಯೆಯರಾಗಿ ಬದುಕನ್ನು ದೂಡುತ್ತಿದ್ದರು. ಶ್ರೀಮಂತರನೇಕರಿಗೆ ವೇಶ್ಯೆಯರ ಸಂಘ ಗೌರವದ ವಿಷಯವಾಗಿತ್ತು. ಅನೇಕರು ಮನೆಯಲ್ಲಿ ದಾಸಿಯರ ಜೊತೆ ಲೈಂಗಿಕ ಸಂಪರ್ಕವಿಟ್ಟುಕೊಳ್ಳುವುದು ಪುರುಷಪ್ರಧಾನ ಸಮಾಜದಲ್ಲಿ ಸಹಜವೆಂದೇ ಪರಿಗಣಿಸಲಾಗಿತ್ತು. ಇಂಥ ದಾಸಿಯರು ಮತ್ತು ವೇಶ್ಯೆಯರಿಗೆ ಜನಿಸಿದ ಮಕ್ಕಳಿಗೆ ಸಮಾಜದಲ್ಲಿ ಯಾವುದೇ ಸ್ಥಾನವಿರಲಿಲ್ಲ. ಆ ಮಕ್ಕಳು ದಿಕ್ಕುದೆಸೆಯಿಲ್ಲದೆ ತಿರುಗುವಂಥ ಪರಿಸ್ಥಿತಿ ಇತ್ತು. ಮುಂದೆ ದೊಡ್ಡವರಾದ ಮೇಲೆ ಅವರು ಬಿಟ್ಟಿ ಕೆಲಸ ಮಾಡುತ್ತ ಇಲ್ಲವೆ ಕಾಲಾಳುಗಳಾಗಿ ಸೈನ್ಯದಲ್ಲಿ ಸೇವೆಸಲ್ಲಿಸುತ್ತ ಬದುಕುತ್ತಿದ್ದರು. ಹೆಂಗೂಸುಗಳಾಗಿದ್ದರೆ ತಾಯಂದಿರ ದಾರಿಯನ್ನೇ ಹಿಡಿದು ದಾಸಿಯರಾಗಿ ಇಲ್ಲವೆ ವೇಶ್ಯೆಯರಾಗಿ ಅದೇ ನರಕದಲ್ಲಿರುತ್ತಿದ್ದರು. ಅಂದಿನ ಕಾಲದಲ್ಲಿ ಕಲ್ಯಾಣ ನಗರ ರಾಜಧಾನಿಯಾಗಿತ್ತಲ್ಲದೆ ಭಾರಿ ವ್ಯವಹಾರ ಕೇಂದ್ರವೂ ಆಗಿತ್ತು. ಸಹಜವಾಗಿಯೇ ದೇವದಾಸಿಯರೂ ವೇಶ್ಯೆಯರೂ ಇದ್ದರು.
ಇಂಥ ಪ್ರತಿಕೂಲ ವಾತಾವರಣದಲ್ಲಿ ಪ್ರಧಾನಿ ಬಸವಣ್ಣನವರು ಕಾಯಕಜೀವಿಗಳನ್ನು ಒಂದುಗೂಡಿಸಿ ಜನಮಾನಸದಲ್ಲಿ ಹೊಸ ಮಾನವೀಯ ಕನಸುಗಳನ್ನು ಬಿತ್ತಿ ಕಲ್ಯಾಣದೊಳಗೊಂದು ಪವಿತ್ರಕಲ್ಯಾಣ ನಿರ್ಮಿಸಿದ್ದು ವಿಶ್ವದ ಇತಿಹಾಸದಲ್ಲಿ ಅನುಪಮ ಉದಾಹರಣೆಯಾಗಿದೆ. ದಾಸಿಯರು, ವೇಶ್ಯೆಯರು, ಅನಾಥಮಕ್ಕಳು, ಅನೈತಿಕ ಸಂಬಂಧದಿಂದ ಹುಟ್ಟಿದ ಮಕ್ಕಳು, ಅಸ್ಪೃಶ್ಯರು ಮತ್ತು ಎಲ್ಲರೀತಿಯ ಕಷ್ಟದ ಕಾಯಕ ಮಾಡುವವರ ಮೇಲೆ ಬಸವಣ್ಣನವರು ಅಂತಃಕರಣದ ಧಾರೆ ಎರೆದರು. ಅವರ ಹೊಸ ಬದುಕಿಗಾಗಿ ಚಿಂತಿಸಿದರು. ಬಿಟ್ಟಿ ಕೆಲಸ ಮಾಡುವವರನ್ನು ಸ್ವತಂತ್ರ ಕಾಯಕಜೀವಿಗಳನ್ನಾಗಿ ಮಾಡಿದರು. ದಾಸಿಯರನ್ನು ಮತ್ತು ವೇಶ್ಯೆಯರನ್ನು ನರಕ ಸದೃಶ ಬದುಕಿನಿಂದ ಹೊರತಂದು, ಇಷ್ಟಲಿಂಗದ ಮೂಲಕ ಪುಣ್ಯಾಂಗನೆಯರನ್ನಾಗಿಸಿ ವಿವಿಧ ಕಾಯಕಗಳಲ್ಲಿ ತೊಡಗುವಂತೆ ಮಾಡಿದರು. ಹೀಗೆ ಅವರ ಬದುಕು ಪವಿತ್ರವಾಯಿತು. ಇಂಥವರ ಮಕ್ಕಳು ಇಷ್ಟಲಿಂಗ ದೀಕ್ಷೆ ಪಡೆದನಂತರ ಎಲ್ಲರಂತೆ ಸಮಾನರಾಗುತ್ತಾರೆ. ದೀಕ್ಷೆ ಪಡೆದ ಇವರಿಗೆ ವಂದಿಸಬೇಕು, ಪೂಜಿಸಬೇಕು, ಇವರಿಂದ ಪಾದೋದಕ ಮತ್ತು ಪ್ರಸಾದ ಸ್ವೀಕರಿಸಬೇಕು. ಒಂದುವೇಳೆ ಲಿಂಗವಂತರು ಉದಾಸೀನ ಮಾಡಿದರೆ ಪಂಚಮಹಾಪಾತಕದ ನರಕಕ್ಕೆ ಹೋಗುತ್ತಾರೆ ಎಂದು ಬಸವಣ್ಣನವರು ಎಚ್ಚರಿಸುತ್ತಾರೆ.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *