ಹುಬ್ಬಳ್ಳಿ-ಧಾರವಾಡ ಸುದ್ದಿ
ಎಡಬಲವೆಂದೇನೊ ನಿಮ್ಮ ಅಡಿಗಳನರಿದವಂಗೆ

ಎಡಬಲವೆಂದೇನೊ ನಿಮ್ಮ ಅಡಿಗಳನರಿದವಂಗೆ

ಎಡಬಲವೆಂದೇನೊ ನಿಮ್ಮ ಅಡಿಗಳನರಿದವಂಗೆ

ಎಡಬಲವೆಂದೇನೊ ನಿಮ್ಮ ಅಡಿಗಳನರಿದವಂಗೆ?
ಕಡೆ ನಡುವೆಂದೇನೊ ಮೃಡನ ಹಾಡುವಂಗೆ?
ಕುಲಛಲವೆಂದೇನೊ ಮನದ ಹೊಲೆಯ ಕಳೆದವಂಗೆ?
ತಲೆಕಾಲೆಂದೇನೊ ಮಾಯೆಯ ಬಲೆಯ ನುಸುಳಿದವಂಗೆ?
ಕಲಿಯುಗದ ಕತ್ತಲೆಯ ದಾಂಟಿದವಂಗೆ, ನಿಮ್ಮ
ನೆಲೆಯನರಿದ ಶರಣಂಗೆ
ಇನ್ನು ಸ್ಥಲನೆಲೆ ಆವುದುಂಟು ಹೇಳಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ?
                                                             -ಹಡಪದ ಅಪ್ಪಣ್ಣ
‘ಕುರುಡನ ಕೈಯ ಕನ್ನಡಿ ಇದ್ದ ಹಾಗೆ’ ಮತ್ತು ‘ಕನ್ನಡಿಗೆ ಕನ್ನಡಿ ತೋರಿದಂತಿಪ್ಪರು’ ಎಂದು ಹಡಪದ ಅಪ್ಪಣ್ಣನವರು ಬೇರೆ ವಚನಗಳಲ್ಲಿ ಹೇಳಿದ್ದನ್ನು ಬಿಟ್ಟರೆ ಕ್ಷೌರಿಕರ ವೃತ್ತಿಪರಿಭಾಷೆಯನ್ನು ಎಲ್ಲೂ ಬಳಸಿಲ್ಲ. ಅವರು ಸಂಚಿಯ ಕಾಯಕ ಮಾಡುತ್ತಿದ್ದಿರಬಹುದು ಎಂಬ ಸಂಶಯವನ್ನು ಕೆಲ ವಿದ್ವಾಂಸರು ವ್ಯಕ್ತಪಡಿಸಿದ್ದಾರೆ. ಆದರೆ ಅವರು ಸಂಚಿಯ ಕಾಯಕದ ಪರಿಭಾಷೆಯನ್ನೂ ಬಳಸಿಲ್ಲ. ಹಡಪ ಎಂದರೆ ‘ಅಡಕೆ ಎಲೆಯ ಚೀಲ’ (ಸಂಚಿ), ‘ಕ್ಷೌರಿಕನ ಸಲಕರಣೆಯ ಚೀಲ’ ಎಂದು ಮುಂತಾದ ಅರ್ಥಗಳಿವೆ. ತನ್ನ ಒಡೆಯನಿಗೆ ಅಡಕೆ ಎಲೆಯ ಚೀಲವನ್ನು ಹಿಡಿದು ಸೇವೆ ಮಾಡುವವನಿಗೆ ಹಡಪಾಳಿ ಅಥವಾ ಹಡಪಿಗ ಎನ್ನುತ್ತಾರೆ. ಕ್ಷೌರ ಮಾಡುವ ಕಾಯಕ ಜೀವಿಗಳಿಗೆ ‘ಹಡಪದ ಸಮಾಜದವರು’ ಎಂದು ಕರೆಯುವುದು ವಾಡಿಕೆಯಾಗಿದೆ. ಕಾಯಕಜೀವಿಗಳು ತಮ್ಮ ಕಾಯಕದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಸಹಜವಾಗಿದೆ. ಅನುಭಾವಿ ಹಡಪದ ಅಪ್ಪಣ್ಣನವರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಂತೆ ಇದ್ದವರು. ಕೊನೆಯಲ್ಲಿ ಬಸವಣ್ಣನವರು ಕಲ್ಯಾಣ ತೊರೆದು ಕೂಡಲಸಂಗಮಕ್ಕೆ ಬಂದಾಗ ಅವರ ಜೊತೆಯ ಬಂದವರು.
ಅಡಿ (ಹೆಜ್ಜೆ) ಎಂಬುದಕ್ಕೆ ರಹಸ್ಯ ಎಂಬ ಅರ್ಥವೂ ಇದೆ. ದೇವರ ಅಡಿಗಳನ್ನು ಅರಿತವನೆಂದರೆ ದೈವೀ ರಹಸ್ಯವನ್ನು ಬಲ್ಲವನು ಎಂದರ್ಥ. ದೇವರು ಸಕಲ ಜೀವಿಗಳ ಮತ್ತು ಸಕಲ ವಸ್ತುಗಳ ಮೂಲ ಎಂಬ ಸತ್ಯವನ್ನು ತಿಳಿದುಕೊಳ್ಳುವುದೇ ಅರಿವು. ಇಂಥ ಅರಿವು ಉಂಟಾದಾಗ ಎಡ ಬಲಕ್ಕೆ ಯಾವುದೇ ಅರ್ಥ ಇರುವುದಿಲ್ಲ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಮತ್ತು ಪಂಚಮ ವರ್ಣಗಳಿಗೆ ಅರ್ಥವಿರುವುದಿಲ್ಲ. ಶಿವನನ್ನು ಹಾಡಿ ಹೊಗಳುವವನಿಗೆ ‘ಅವರು ಕಡೆಯಲ್ಲಿ ಇರುವವರು, ಇವರು ನಡುವಿನವರು’ ಎಂಬ ಭೇದಭಾವ ಇರುವುದಿಲ್ಲ. ಯಾರ ಮನಸ್ಸಿನಲ್ಲಿ ಹೊಲೆ ಎಂಬುದು ಹುಟ್ಟುವುದೋ ಅವರು ಕುಲ, ಛಲ ಎಂಬ ಅಹಂಕಾರದಿಂದ ಬದುಕುತ್ತಿರುತ್ತಾರೆ. ಮನದ ಹೊಲೆಯನ್ನು ಕಳೆದುಕೊಂಡವರು ಕುಲ ಮತ್ತು ಛಲ ಪ್ರಜ್ಞೆಯಿಂದ ಹೊರಗೆ ಬಂದು ಸರ್ವಜೀವಪ್ರಿಯ ಆಗಿರುತ್ತಾರೆ. ಮಾಯೆಯ ಬಲೆಯನ್ನು ಹರಿದವರಿಗೆ ಆಪಾದಮಸ್ತಕ ಒಂದೇ ಆಗಿರುತ್ತದೆ. ಪಾದದಲ್ಲಿ ಶೂದ್ರ ಹುಟ್ಟಿದ, ತಲೆಯಲ್ಲಿ ಬ್ರಾಹ್ಮಣ ಹುಟ್ಟಿದ ಎಂಬ ಭ್ರಮೆಯಿಂದ ಹೊರಗೆ ಬರುವುದೇ ಜ್ಞಾನ. ಕಲಿಯುಗದ ಅಜ್ಞಾನವನ್ನು ದಾಟಿ, ದೇವರ ಮೂಲವನ್ನು ಅರಿತ ಶರಣ ಯಾವುದೇ ಒಂದು ನಿರ್ದಿಷ್ಟ ಸ್ಥಳಕ್ಕೆ ಸೀಮಿತವಾಗದೆ ವಿಶ್ವಮಾನವನಾಗಿರುತ್ತಾನೆ ಎಂದು ಹಡಪದ ಅಪ್ಪಣ್ಣನವರು ಮನೋಜ್ಞವಾಗಿ ಹೇಳಿದ್ದಾರೆ.

ವಚನ – ನಿರ್ವಚನ: ರಂಜಾನ್ ದರ್ಗಾ
administrator

Related Articles

Leave a Reply

Your email address will not be published. Required fields are marked *