ಕೈತಪ್ಪಿ ಕೆತ್ತಲು ಕಾಲಿಗೆ ಮೂಲ
ಕೈತಪ್ಪಿ ಕೆತ್ತಲು ಕಾಲಿಗೆ ಮೂಲ,
ಮಾತು ತಪ್ಪಿ ನುಡಿಯಲು ಬಾಯಿಗೆ ಮೂಲ,
ವ್ರತಹೀನನ ನೆರೆಯಲು ನರಕಕ್ಕೆ ಮೂಲ,
ಕರ್ಮಹರ ಕಾಳೇಶ್ವರಾ.
-ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆ
ಬಾಚಿ ಎಂದರೆ ಮರವನ್ನು ಕೆತ್ತಲು ಬಡಗಿಗಳು ಬಳಸುವ ಅಗಲವಾದ ಬಾಯಿಯ ಕಬ್ಬಿಣದ ಸಾಧನ. ಬಡಗಿಗಳಿಗೆ ಬಾಚಿಕಾಯಕದವರು ಎನ್ನುತ್ತಾರೆ. ಬಾಚಿ ಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆಯ ಕೇವಲ ಎರಡು ಪುಟ್ಟ ವಚನಗಳು ಸಿಕ್ಕಿವೆ. ನಮ್ಮ ಕಾಯಕದಲ್ಲಿ ನಾವು ಎಚ್ಚರಿಕೆಯಿಂದ ತಲ್ಲೀನರಾಗಿರಬೇಕು. ನಮ್ಮ ಮಾತುಗಳು ಪ್ರಜ್ಞಾಪೂರ್ಣವಾಗಿರಬೇಕು. ನಮ್ಮ ಸಂಬಂಧಗಳು ವ್ರತನಿಷ್ಠರ ಜೊತೆ ಇರಬೇಕು. ಇಲ್ಲದಿದ್ದರೆ ನಮಗೆ ನರಕವೇ ಗತಿ. ಹೀಗೆ ಕಾಯಕನಿಷ್ಠೆ, ಲೋಕದ ಜನರ ಜೊತೆ ಹಿತಮಿತ ಮತ್ತು ಮೃದುತ್ವದಿಂದ ಕೂಡಿದ ಮಾತುಕತೆ ಹಾಗೂ ವ್ರತನಿಷ್ಠೆಯುಳ್ಳವರ ಜೊತೆಗೂಡಿ ಬದುಕುವುದರ ಮೂಲಕ ನೆಮ್ಮದಿ ಎಂಬ ಸ್ವರ್ಗಸುಖ ಅನುಭವಿಸುವುದರ ಕುರಿತು ಕಾಳವ್ವೆ ತಿಳಿಸುತ್ತಾಳೆ.
ಕಾಯಕದ ಅನುಭವದಿಂದಲೇ ಆಕೆ ಲೋಕಜ್ಞಾನ ಸಂಪಾದಿಸಿದ್ದಾಳೆ. ಆ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಅವಶ್ಯವಾಗಿ ಬೇಕಾಗಿರುವಂಥ ನಿಷ್ಠೆಯಿಂದ ಕೂಡಿದ ಕಾಯಕ, ಎಚ್ಚರಿಕೆಯಿಂದ ಕೂಡಿದ ಮಾತುಕತೆ ಮತ್ತು ಘನತೆಯಿಂದ ಕೂಡಿದ ಮಾನವ ಸಂಬಂಧಗಳ ಕುರಿತು ತಿಳಿಸುವ ಅವಳ ಸರಳ ಕ್ರಮವು ಆಳವಾದ ಚಿಂತನೆಗೆ ಹಚ್ಚುವಲ್ಲಿ ಸಫಲವಾಗುತ್ತದೆ. ನಾವು ಹೇಗೆ ಕಾಯಕ ಮಾಡಬೇಕು, ಯಾರ ಜೊತೆ ಹೇಗೆ ಮಾತನಾಡಬೇಕು ಮತ್ತು ಎಂಥವರ ಜೊತೆ ಬೆರೆಯಬೇಕು ಎಂಬುದರ ಬಗ್ಗೆ ಕಾಳವ್ವೆ ನಿಖರವಾಗಿ ಹೇಳಿದ್ದಾಳೆ. ವೈಶಿಷ್ಟ್ಯವೆಂದರೆ ಈಕೆ ಎಲ್ಲಿಯೂ ಧರ್ಮ, ಇಷ್ಟಲಿಂಗ, ಧಾರ್ಮಿಕ ಆಚರಣೆ, ತತ್ತ್ವಜ್ಞಾನ, ಆತ್ಮಜ್ಞಾನ, ಅನುಭಾವ ಮುಂತಾದ ದೊಡ್ಡದೊಡ್ಡ ಮಾತುಗಳನ್ನು ಆಡುವುದೇ ಇಲ್ಲ. ಆದರೆ ಇವೆಲ್ಲವನ್ನು ಅರಿತುಕೊಳ್ಳಲು ಬೇಕಾಗುವಂಥ ವ್ಯಕ್ತಿತ್ವದ ವಿಕಸನದ ಕಡೆಗೆ ಹೆಚ್ಚಿನ ಗಮನ ಕೊಟ್ಟಿದ್ದಾಳೆ. ವ್ಯಕ್ತಿತ್ವ ವಿಕಸನವಿಲ್ಲದೆ ಯಾವುದೇ ಧರ್ಮ ಅಥವಾ ತತ್ತ್ವವನ್ನು ಉಳಿಸಿಕೊಳ್ಳಲಿಕ್ಕಾಗದು ಎಂಬುದು ಆಕೆಯ ದೃಢನಿಲವಾಗಿದೆ. ಅಂತೆಯೆ ಇನ್ನೊಂದು ವಚನದಲ್ಲಿ “ಕಾಯಕ ತಪ್ಪಿದಡೆ ಸೈರಿಸಬಾರದು; ವ್ರತ ತಪ್ಪಲೆಂತೂ ಸೈರಿಸಬಾರದು” ಎಂದು ಅವಳು ಸ್ಪಷ್ಟಪಡಿಸಿದ್ದಾಳೆ.
ಅವಳ ಎಚ್ಚರಿಕೆಯ ಮಾತುಗಳು ಇಂದಿನ ದುರಂತ ಸಮಾಜಕ್ಕೆ ಕನ್ನಡಿ ಹಿಡಿದಂತಿವೆ. ಕಾಯಕ ಪ್ರಜ್ಞೆಯನ್ನು ಕಳೆದುಕೊಂಡು ಮನಸ್ಸಿಲ್ಲದ ಮನಸ್ಸಿನಿಂದ ಕೆಲಸ ಮಾಡುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಎಲ್ಲ ರಂಗಗಳಲ್ಲಿಯೂ ಉತ್ಪಾದನೆ ಕುಂಠಿತಗೊಳ್ಳುತ್ತಿದೆ. ವಿವಿಧ ಧರ್ಮಗಳ ಹೆಸರಿನಲ್ಲಿ ಗೊಂದಲದ ಮಾತುಗಳನ್ನಾಡುವವರು ಹೆಚ್ಚಾಗುತ್ತಿರುವುದರಿಂದ ಕೋಮುಗಲಭೆಗಳು ಮತ್ತು ಜಾತಿಸಂಘರ್ಷಗಳು ಹಬ್ಬುತ್ತಿವೆ. ಮೌಲ್ಯನಿಷ್ಠೆ ಕುಂಠಿತಗೊಳ್ಳುತ್ತಿರುವುದರಿಂದ ಸಮಾಜವು ಅನೈತಿಕ ವ್ಯಕ್ತಿಗಳ ಹಿಡಿತದಲ್ಲಿ ಸಿಕ್ಕಿ ಅಧೋಗತಿಗೆ ಇಳಿಯುತ್ತಿದೆ. ಈ ಕಾರಣದಿಂದಲೇ ವಿಶ್ವದಲ್ಲಿ ಹಿಮ್ಮುಖ ಅಭಿವೃದ್ಧಿ ಆಗುತ್ತಿದೆ. ಇದಕ್ಕೆ ಅಧೋನ್ನತಿ ಎನ್ನುತ್ತಾರೆ. ಅಂತೆಯೆ ಕಾಳವ್ವೆ ವ್ರತಕ್ಕೆ ಬಹಳಷ್ಟು ಮಹತ್ವ ಕೊಡುತ್ತಾಳೆ. ವ್ರತವೆಂದರೆ ಮೇಲೆ ಮೇಲೆ ಏರುತ್ತ ಒಳಗಣ್ಣುಗಳಿಂದ ದೇವರನ್ನು ಕಾಣಲು ಬೇಕಾದ ಏಣಿ.
ವಚನ – ನಿರ್ವಚನ: ರಂಜಾನ್ ದರ್ಗಾ