ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು; ಅಪ್ಪುವಿನ ಶಿಲೆ

ವಚನ ಬೆಳಕು; ಅಪ್ಪುವಿನ ಶಿಲೆ

 ಅಪ್ಪುವಿನ ಶಿಲೆ

ಅಪ್ಪುವಿನ ಶಿಲೆಯ ಉಳಿಯ ಮೊನೆಯಲ್ಲಿ ಚಿತ್ರಿಸಬಹುದೆ?
ಅರಗಿನ ಘಟವ ಉರಿಯ ಮೊನೆಯಲ್ಲಿ ಅಕ್ಷರವ ಬರೆಯಬಹುದೆ?
ಮೃತ್ತಿಕೆಯ ಹರಿಗೋಲನೇರಿ ನದಿಯ ತಪ್ಪಲಿಗೆ ಹೋಗಬಹುದೆ?
ನಿಜನಿಶ್ಚಯವನರಿಯದವನ ವಾಚಾರಚನೆ ಇಷ್ಟಲ್ಲದಿಲ್ಲ.
ನಿಜತತ್ತ್ವವನರಿದವನ ವಾಚಾರಚನೆಯ ಕುರುಹೆಂತುಟೆಂದಡೆ:
ಶಿಲೆಯೊಳಗಣ ಸುರಭಿಯಂತೆ
ಪ್ರಳಯದೊಳಗಾದ ನಿಜನಿವಾಸದಂತೆ
ಆಯದ ಘಾಯದಂತೆ, ಸುಘಾಯದ ಸುಖದಂತೆ
ಇಂತೀ ಭಾವರಹಿತವಾದ ಭಾವಜ್ಞನ ತೇರ ಕೂಗಿಂಗೆ ಹೊರಗು
ಮಹಾಮಹಿಮ ಮಾರೇಶ್ವರಾ.
                                               -ಕೂಗಿನ ಮಾರಯ್ಯ
ಉಳಿಯಿಂದ ಮಂಜುಗಡ್ಡೆಯಲ್ಲಿ ಮೂರ್ತಿಯನ್ನು ಕೆತ್ತಲು ಸಾಧ್ಯವೆ? ಅರಗಿನ ಪಾತ್ರೆಯ ಮೇಲೆ ಉರಿಯ ತುದಿಯಿಂದ ಅಕ್ಷರಗಳನ್ನು ಮೂಡಿಸಬಹುದೆ? ಮಣ್ಣಿನ ಹರಿಗೋಲಿನಲ್ಲಿ ಕುಳಿತು ನದಿಯ ಆಚೆ ದಡ ಸೇರಬಹುದೆ? ಹೀಗೆ ನಿಜದ ನಿಲವನ್ನು ಅರಿಯದವನ ಬರವಣಿಗೆ ಅವನ ಅಪೇಕ್ಷೆಯಂತೆ ಇರುತ್ತದೆ ಹೊರತಾಗಿ ಅದರಲ್ಲಿ ಬೇರೇನೂ ಇರುವುದಿಲ್ಲ. ನಿಜತತ್ತ್ವವನ್ನು ತಿಳಿದುಕೊಂಡವನ ಬರವಣಿಗೆಯ ಗುರುತು ಹೀಗಿರುತ್ತದೆ: ಅದು ಶಿಲೆಯೊಳಗಿನ ಸುರಭಿಯಂತೆ ಇರುತ್ತದೆ. ಪ್ರಳಯದ ನಂತರ ವಿಶ್ವದಲ್ಲಿ ಗೋಚರಿಸುವ ಚರಾಚರವಸ್ತುಗಳೆಲ್ಲ ಪರವಸ್ತುವೆಂಬ ದೇವರ ಮೂಲಸ್ಥಾನವನ್ನು ಸೇರುತ್ತವೆ. ಅದುವೇ ನಿಜನಿವಾಸ. ಹೀಗೆ ನಿಜತತ್ತ್ವವನ್ನು ಅರಿತವನ ಬರವಣಿಗೆ ಪ್ರಳಯದ ನಂತರದ ನಿಜನಿವಾಸದಂತೆ ಇರುತ್ತದೆ. ಅದು ಮೂಲತತ್ತ್ವದ ಅರಿವು ಮೂಡಿಸುತ್ತದೆ. ಅದು ಮರ್ಮಸ್ಥಾನಕ್ಕೆ ಬೀಳುವ ಪೆಟ್ಟಿನಂತಿರುತ್ತದೆ. ಒಳ್ಳೆಯ ಪೆಟ್ಟಿನ ಸುಖದಂತಿರುತ್ತದೆ. ಈ ರೀತಿಯ ಬರವಣಿಗೆ ಭಾವರಹಿತವಾದ ಭಾವಜ್ಞನ (ಸರ್ವರ ಭಾವನೆಗಳನ್ನು ಅರಿಯುವ ದೇವರ) ರಥದಂತಿರುತ್ತದೆ. ಈ ಲೌಕಿಕ ಬಯಕೆಯ ಕರೆಯಿಂದ ದೂರವಾಗಿರುತ್ತದೆ. ಇಂಥ ಬರವಣಿಗೆಗಳಿಗೆ ವಚನಗಳು ಎನ್ನುವರು. ಅಂತೆಯೆ ವಚನಗಳು ಅನುಭಾವದ ಸೆಲೆಗಳಾಗಿವೆ. ಅವು ಭಾವಜ್ಞನ ರಥದಂತಿವೆ. ನಮ್ಮನ್ನು ನಿಜದ ನೆಲೆಗೆ ಒಯ್ಯುವಂಥವುಗಳಾಗಿವೆ.
ಐಹಿಕ ಬಯಕೆಗಳು ಮಂಜುಗಡ್ಡೆ, ಅರಗಿನ ಪಾತ್ರೆ, ಮಣ್ಣಿನ ಹರಿಗೋಲಿನಂತೆ ಇದ್ದು ನಮ್ಮನ್ನು ದಡ ಮುಟ್ಟಿಸುವಲ್ಲಿ ವಿಫಲವಾಗುತ್ತವೆ. ಆದರೆ ಬದುಕಿನ ಮೂಲತತ್ತ್ವ ತಿಳಿದವರ ಮಾತುಗಳು ಸಂಸಾರ ಸಾಗರವನ್ನು ದಾಟಿಸಿ ದಡ ಮುಟ್ಟಿಸುತ್ತವೆ.
ಕಲ್ಯಾಣ ಹತ್ಯಾಕಾಂಡ ಸಂದರ್ಭದಲ್ಲಿ ಶರಣರು ಉಳವಿಯ ಕಡೆಗೆ ಹೊರಟಾಗ ಅವರ ಮೇಲೆ ಬಿಜ್ಜಳನ ಸೈನಿಕರು ದಾಳಿ ಮಾಡದಂತೆ ಕೂಗಿನ ಮಾರಯ್ಯ ಎಚ್ಚರ ವಹಿಸುತ್ತಿದ್ದ. ಬಿಜ್ಜಳನ ಸೈನಿಕರು ದೂರದಿಂದ ಬರುವುದನ್ನು ನೋಡಿ ಶರಣರಿಗೆ ಕೂಗಿ ಹೇಳುವ ಕಾಯಕ ಮಾಡುತ್ತಿದ್ದ. ಬಿಜ್ಜಳನ ಸೈನಿಕರು ಬರುವ ಮೊದಲೇ ಶರಣರು ಸುರಕ್ಷಿತ ತಾಣ ತಲುಪುತ್ತಿದ್ದರು. ಶರಣರು ಕಲ್ಯಾಣದಿಂದ ಉಳವಿಗೆ ಹೋಗುವ ದಾರಿಯಲ್ಲಿ ಬರುವ ಮುರಗೋಡಿನಲ್ಲಿ ಬೀಡುಬಿಟ್ಟ ಸಂದರ್ಭದಲ್ಲಿ ಕಾಯಕ ನಿರತನಾಗಿದ್ದ ಕೂಗಿನ ಮಾರಯ್ಯನನ್ನು ಬಿಜ್ಜಳನ ಸೈನಿಕರು ಕೊಲೆ ಮಾಡಿದರು. ಕೂಗಿನ ಮಾರಯ್ಯನ ಸಮಾಧಿ ಮುರಗೋಡಿನಲ್ಲಿದೆ. ಮುರಗೋಡ ಗ್ರಾಮವು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನಲ್ಲಿದೆ.

ವಚನ – ನಿರ್ವಚನ: ರಂಜಾನ್ ದರ್ಗಾ
administrator

Related Articles

Leave a Reply

Your email address will not be published. Required fields are marked *